ನಿಪಾಹ್ ವೈರಸ್: ಒಂದೇ ಕುಟುಂಬದ ನಾಲ್ವರು ಮೃತ್ಯು

Update: 2018-05-24 18:25 GMT

ತಿರುವನಂತಪುರ, ಮೇ 24: ಮಾರಣಾಂತಿಕ ನಿಪಾಹ್ ವೈರಸ್ ಸೋಂಕಿಗೆ ಗುರುವಾರ ಮತ್ತೋರ್ವರು ಬಲಿಯಾಗಿದ್ದಾರೆ. ಇದರೊಂದಿಗೆ ನಿಪಾಹ್ ಸೋಂಕಿಗೆ ಬಲಿಯಾದವರ ಸಂಖ್ಯೆ 12ಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ಮೂರು ವಾರಗಳಿಂದ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ವಲಚೆಕುಟ್ಟಿ ಮೂಸಾ (62) ಗುರುವಾರ ಬೆಳಗ್ಗೆ ಮೃತಪಟ್ಟಿದ್ದಾರೆ. ಅವರಿಗೆ ನಿಪಾಹ್ ವೈರಸ್ ಸೋಂಕು ಆಗಿರುವುದು ಸೋಮವಾರ ದೃಢಪಟ್ಟಿತ್ತು. ಅನಂತರ. ಮೂಸಾ ಅವರ ಪುತ್ರ ಮುಹಮ್ಮದ್ ಸಾಲಿಹ್ (28) ಹಾಗೂ ಮುಹಮ್ಮದ್ ಸಾದಿಕ್ (26), -ಅವರ ಸಹೋದರನ ಪತ್ನಿ ಮರಿಯಮ್ಮ (50) ಈ ಹಿಂದೆ ಮೃತಪಟ್ಟಿದ್ದರು. ನಿಪಾಹ್ ಸೋಂಕಿತರಿಗೆ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ್ದ ನರ್ಸ್ ಲಿನಿ ಮೃತಪಟ್ಟಿದ್ದರು.

 ಮೂಸಾ ಅವರ ಹಿರಿಯ ಪುತ್ರ ಸಾಲಿಹ್ ಅವರು ವಿವಾಹ ಆಗಲಿದ್ದ ಯುವತಿ ಕೂಡ ಇದೇ ರೋಗ ಲಕ್ಷಣದ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಲಪ್ಪುರಂ ಜಿಲ್ಲೆಯಲ್ಲಿ ಎರಡು ನಿಪಾಹ್ ಪ್ರಕರಣಗಳು ದೃಢಪಟ್ಟಿವೆ. 7 ಮಂದಿ ಸೋಂಕಿತ ವ್ಯಕ್ತಿಗಳಿಗೆ ಐಸೋಲೇಶನ್ ವಾರ್ಡ್‌ನಲ್ಲಿ ಈಗಾಗಲೇ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನೂ 7 ಮಂದಿಯನ್ನು ನಿಗಾದಲ್ಲಿ ಇರಿಸಲಾಗಿದೆ. ಇವರಲ್ಲಿ ಮೂವರು ಕರ್ನಾಟಕದ ಮಂಗಳೂರಿನಿಂದ ನಿಪಾಹ್ ಪೀಡಿತ ಜಿಲ್ಲೆಗೆ ಆಗಮಿಸಿದವರು. ಇವರಲ್ಲಿ ನಿಪಾಹ್ ಸೋಂಕಿನ ಲಕ್ಷಣ ಕಂಡು ಬರದೇ ಇದ್ದರೂ ನಿಗಾದಲ್ಲಿ ಇರಿಸಲಾಗಿದೆ.

ಮೂಸಾರ ಬಾವಿಯಿಂದ ಈ ರೋಗ ಹರಡಿತೇ ?

ವಿದೇಶಕ್ಕೆ ತೆರಳುವ ಮೊದಲು ಸಹೋದರನ ನೆರವು ಪಡೆದು ಬಾವಿಯನ್ನು ಸ್ವಚ್ಛಗೊಳಿಸುವಂತೆ ಮೂಸಾ ಅವರು ಪುತ್ರ ಸಾಲಿಹ್‌ನಲ್ಲಿ ಹೇಳಿದ್ದರು. ಅವರ ವಿಧಿ ಅಲ್ಲಿ ಕಾಯುತ್ತಿತ್ತೋ ಏನೋ ? ಎಂದು ಮೂಸಾ ಅವರ ಸಂಬಂಧಿ ಕೆ. ಲತೀಫ್ ಹೇಳಿದ್ದಾರೆ.

ಮೂಸಾ ಅವರ ಬಾವಿಯಲ್ಲಿ ವಾಸಿಸುತ್ತಿದ್ದ ಬಾವಲಿಗಳಿಂದ ಈ ರೋಗ ಹರಡಿದೆ ಎಂದು ಪುಣೆಯಲ್ಲಿರುವ ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ ಗುರುತಿಸಿತ್ತು ಹಾಗೂ ಮೂಸಾ ಅವರ ಬಾವಿ ಹಾಗೂ ನೆರೆಕರೆಯ ಬಾವಿಗಳನ್ನು ಸೀಲ್ ಮಾಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News