ಇಫ್ತಾರ್ ಕೂಟ ಆಯೋಜಿಸಲಿರುವ ನರಸಿಂಹ ಮೂರ್ತಿ ವಿಷ್ಣು ದೇವಸ್ಥಾನ
ತಿರುವನಂತಪುರಂ, ಮೇ 25: ಕೇರಳದ ಮಲಪ್ಪುರಂ ಜಿಲ್ಲೆಯ ಕೊಟ್ಟಕ್ಕಲ್ ಎಂಬಲ್ಲಿರುವ ನರಸಿಂಹ ಮೂರ್ತಿ ವಿಷ್ಣು ದೇವಸ್ಥಾನ ಮತೀಯ ಸಾಮರಸ್ಯದ ಸಂಕೇತವಾಗಿ ಪವಿತ್ರ ರಮಝಾನ್ ತಿಂಗಳಲ್ಲಿ ಸಾಮೂಹಿಕ ಇಫ್ತಾರ್ ಕೂಟ ಆಯೋಜಿಸಲಿದೆ.
ಈ ಉದ್ದೇಶಕ್ಕಾಗಿ ದೇವಸ್ಥಾನವು ಒಂದು ಸಮಿತಿಯನ್ನೂ ರಚಿಸಿದೆ. ದೇವಸ್ಥಾನದ ಪ್ರತಿಷ್ಠಾ ವರ್ಧಂತಿಯ ಎರಡನೇ ದಿನ ಈ ಇಫ್ತಾರ್ ಕೂಟ ನೆರವೇರಲಿದೆ. ಆ ದಿನ ಸುಮಾರು 700 ಜನರಿಗೆ ಆಹಾರ ತಯಾರಿಸಲಾಗುವುದು. ವೆಜಿಟೇಬಲ್ ಬಿರಿಯಾನಿ, ತಿಂಡಿ ತಿನಿಸುಗಳು, ಹಣ್ಣು ಹಂಪಲು ಹಾಗೂ ರಮಝಾನ್ ವಿಶೇಷ ಪಾನೀಯಗಳನ್ನು ನೀಡಿ ಅತಿಥಿಗಳನ್ನು ಸತ್ಕರಿಸಲಾಗುವುದು.
‘‘ಈ ಇಫ್ತಾರ್ ಕೂಟವನ್ನು ಎಲ್ಲಾ ಸ್ಥಳೀಯರ ಸಹಕಾರದಿಂದ ಆಯೋಜಿಸಲಾಗುತ್ತಿದೆ. ಎಲ್ಲಾ ಜಾತಿ, ಧರ್ಮದವರು ಈ ಪುಣ್ಯ ಕಾರ್ಯದಲ್ಲಿ ಕೈಜೋಡಿಸಿದ್ದಾರೆ. ಎಲ್ಲರನ್ನೂ ಈ ಇಫ್ತಾರ್ ಕೂಟಕ್ಕ ಆಹ್ವಾನಿಸಲಾಗಿದೆ’’ ಎಂದು ದೇವಳ ಆಡಳಿತ ಮಂಡಳಿಯ ಕಾರ್ಯದರ್ಶಿ ಮೋಹನನ್ನ ನಾಯರ್ ತಿಳಿಸಿದ್ದಾರೆ.
ಸಮಾಜದಲ್ಲಿ ಶಾಂತಿ, ಸಾಮರಸ್ಯ ಕಾಪಾಡುವ ಏಕೈಕ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಪಂಚಾಯತ್ ಪ್ರಮುಖರು ಹಾಗೂ ಗಣ್ಯರು ಕೂಡ ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದ್ದಾರೆ. ಇಂತಹ ಕಾರ್ಯಕ್ರಮವನ್ನು ಪ್ರತಿ ವರ್ಷ ಆಯೋಜಿಸುವ ಯೋಜನೆಯಿದೆ ಎಂದು ಇಫ್ತಾರ್ ಸಮಿತಿ ಅಧ್ಯಕ್ಷರೂ ಸ್ಥಳೀಯ ರಾಜಕೀಯ ನಾಯಕರೂ ಆಗಿರುವ ಕೆ ಮಮ್ಮು ಹೇಳಿದ್ದಾರೆ.