×
Ad

ಸಂಘಪರಿವಾರದ ಕಾರ್ಯಕರ್ತರ ದಾಳಿಯಿಂದ ಮುಸ್ಲಿಮ್ ಯುವಕನನ್ನು ರಕ್ಷಿಸಿದ ಸಿಖ್ ಪೊಲೀಸ್ ಅಧಿಕಾರಿ

Update: 2018-05-25 17:16 IST

ಡೆಹ್ರಾಡೂನ್, ಮೇ 25: ಸಂಘಪರಿವಾರ ಕಾರ್ಯಕರ್ತರ ದಾಳಿಯಿಂದ ಮುಸ್ಲಿಮ್ ಯುವಕನೊಬ್ಬನ ರಕ್ಷಿಸಿದ ಸಿಖ್ ಪೊಲೀಸ್ ಅಧಿಕಾರಿಯ ಬಗ್ಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ. ಉತ್ತರಾಖಂಡದ ನೈನಿತಲ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಹಿಂದೂ ಯುವತಿಯ ಜೊತೆಗೆ ಇದ್ದ ಎಂದು ಆರೋಪಿಸಿ ಸಂಘಪರಿವಾರದ ಕಾರ್ಯಕರ್ತರು ಮುಸ್ಲಿಮ್ ಯುವಕನ ಮೇಲೆ ದಾಳಿ ನಡೆಸಿದ್ದರು.

ಹಿಂದೂ ಯುವತಿಯನ್ನು ಭೇಟಿಯಾಗಲು ಯುವಕ ಇಲ್ಲಿನ ಗಾರ್ಜಿಯಾ ದೇವಿ ದೇವಸ್ಥಾನದ ಬಳಿ ತೆರಳಿದ್ದ. ಆಕೆ ಯುವಕನ ಗೆಳತಿಯಾಗಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಇವರಿಬ್ಬರನ್ನು ಕಂಡ ಸ್ಥಳೀಯ ಕೆಲವರು ಸಂಘಪರಿವಾರದ ಕಾರ್ಯಕರ್ತರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಸಂಘಪರಿವಾರಿಗಳು ಯುವಕನಿಗೆ ಥಳಿಸಲು ಆರಂಭಿಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಮಾಹಿತಿ ಲಭಿಸಿದ ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿದರು.

ಜನರನ್ನು ಸಮಾಧಾನಪಡಿಸಲು ಸಬ್ ಇನ್ ಸ್ಪೆಕ್ಟರ್ ಸೇರಿದಂತೆ ಎಲ್ಲಾ ಪೊಲೀಸರು ಪ್ರಯತ್ನಿಸಿದರು. ಆದರೆ ಈ ನಡುವೆ ಕೆಲ ಸಂಘಪರಿವಾರದ ಕಾರ್ಯಕರ್ತರು ಯುವಕನ ಮೇಲೆ ಹಲ್ಲೆ ನಡೆಸಿದರು. ಕೂಡಲೇ ಅಡ್ಡಲಾಗಿ ನಿಂತ ಪೊಲೀಸ್ ಅಧಿಕಾರಿ ಗಗನ್ ದೀಪ್ ಸಿಂಗ್ ಯುವಕನನ್ನು ರಕ್ಷಿಸಿದರು.

ಯುವಕನನ್ನು ಪೊಲೀಸ್ ಅಧಿಕಾರಿ ರಕ್ಷಿಸಿದ ವಿಡಿಯೋ ವೈರಲ್ ಆಗುತ್ತಲೇ ಅವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಪ್ರಶಂಸೆಗಳು ವ್ಯಕ್ತವಾಗುತ್ತಿವೆ. “ಹಿಂದುತ್ವವಾದಿಗಳಿಂದ ಮುಸ್ಲಿಮ್ ಯುವಕ ಥಳಿತಕ್ಕೊಳಗಾಗಿ ಹತ್ಯೆಯಾಗುವುದನ್ನು ಸಿಖ್ ಪೊಲೀಸ್ ಅಧಿಕಾರಿಯೊಬ್ಬರು ರಕ್ಷಿಸಿದರು”,  “ಮುಸ್ಲಿಮ್ ಯುವಕನೊಬ್ಬನನ್ನು ಸಿಖ್ ಅಧಿಕಾರಿಯೊಬ್ಬರು ರಕ್ಷಿಸುವ ವಿಡಿಯೋ ನೋಡಿ ಹೃದಯ ತುಂಬಿ ಬಂತು” ಎಂದು ಟ್ವಿಟರಿಗರು ಟ್ವೀಟ್ ಮಾಡಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News