ನಿಪಾಹ್‌ ಪೀಡಿತ ಕೋಝಿಕ್ಕೋಡ್‌ಗೆ ತೆರಳದಂತೆ ಡಾ.ಕಫೀಲ್‌ ಖಾನ್ ಗೆ ಕೇರಳ ಸರಕಾರ ಸೂಚನೆ

Update: 2018-05-25 14:39 GMT

ತಿರುವನಂತಪುರಂ, ಮೇ 25: ರಾಜ್ಯದ ನಿಪಾಹ್‌ಪೀಡಿತ ಪ್ರದೇಶಗಳಿಗೆ ತೆರಳುವ ತಮ್ಮ ಯೋಜನೆಯನ್ನು ಮುಂದೂಡುವಂತೆ ಉತ್ತರ ಪ್ರದೇಶದ ಬಿಆರ್‌ಡಿ ವೈದ್ಯಕೀಯ ಕಾಲೇಜಿನಿಂದ ಅಮಾನತುಗೊಂಡ ಮಕ್ಕಳತಜ್ಞ ಡಾ. ಕಫೀಲ್‌ ಖಾನ್ ರಿಗೆ ಕೇರಳ ಸರಕಾರ ಸೂಚಿಸಿದೆ.

ಸರಕಾರದ ಈ ಆದೇಶದಿಂದ ತೀವ್ರ ದುಃಖವಾಗಿರುವುದಾಗಿ ವೈರಸ್‌ಬಾಧಿತ ಜನರಿಗೆ ಚಿಕಿತ್ಸೆ ನೀಡಲು ಮುಂದಾಗಿದ್ದ ಡಾ. ಕಫೀಲ್‌ ಖಾನ್ ತಿಳಿಸಿದ್ದಾರೆ.

“ನನ್ನ ಯೋಜನೆಯನ್ನು ಮುಂದೂಡುವಂತೆ ಕೇರಳ ಸರಕಾರ ನನಗೆ ಸೂಚಿಸಿದೆ. ರೋಗಪೀಡಿತರಿಗೆ ನನ್ನಿಂದಾಗುವ ಸೇವೆ ಒದಗಿಸಲು ನಾನು ಸಾಕಷ್ಟು ಪ್ರಯತ್ನಗಳನ್ನು ಮಾಡಿದೆ. ಆದರೆ ನಾನು ನಿಸ್ಸಹಾಯಕನಾಗಿದ್ದೇನೆ. ಸರಕಾರ ಈ ನಿರ್ಧಾರವನ್ನು ತೆಗೆದುಕೊಳ್ಳಲು ಏನು ಕಾರಣ ಎಂದು ನನಗೆ ತಿಳಿದಿಲ್ಲ” ಎಂದು ಡಾ. ಕಫೀಲ್‌ ಆಂಗ್ಲ ಪತ್ರಿಕೆಗೆ ತಿಳಿಸಿದ್ದಾರೆ. ನಿಪಾಹ್‌ವೈರಸ್‌ನಿಂದ ತೀವ್ರವಾಗಿ ಬಾಧಿಸಲ್ಪಟ್ಟಿರುವ ಕೇರಳದ ಕೋಝಿಕ್ಕೋಡ್‌ಗೆ ಶುಕ್ರವಾರದಂದು ಭೇಟಿ ನೀಡಲು ಡಾ.ಕಫೀಲ್‌ ಯೋಜಿಸಿದ್ದರು.

ಕಳೆದ ವರ್ಷ ಆಗಸ್ಟ್‌ನಲ್ಲಿ ಉತ್ತರ ಪ್ರದೇಶದ ಗೋರಖ್‌ಪುರದ ಬಾಬಾ ರಾಘವ ದಾಸ್ ವೈದ್ಯಕೀಯ ಕಾಲೇಜಿನಲ್ಲಿ ಆಮ್ಲಜನಕದ ಪೂರೈಕೆಯ ಕೊರತೆಯಿಂದಾಗಿ ಮೂವತ್ತು ನವಜಾತ ಶಿಶುಗಳು ಸಾವನ್ನಪ್ಪಿದ್ದ ಹಿನ್ನೆಲೆಯಲ್ಲಿ ಬಂಧನಕ್ಕೊಳಗಾಗಿ ಏಳು ತಿಂಗಳ ಕಾಲ ಸೆರೆಮನೆವಾಸ ಅನುಭವಿಸಿದ್ದ ಡಾ.ಕಫಿಲ್ ಇತ್ತೀಚೆಗೆ ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದರು.

ನಿಪಾಹ್‌ಪೀಡಿತ ರೋಗಿಗಳನ್ನು ಉಪಚರಿಸಿ ತಾನೂ ಅದೇ ಸೋಕಿಗೆ ತುತ್ತಾಗಿ ಸಾವನ್ನಪ್ಪಿದ ಕೇರಳ ನರ್ಸ್ ಲಿನಿಗೆ ಸಾಮಾಜಿಕ ಜಾಲತಾಣದಲ್ಲಿ ಶ್ರದ್ಧಾಂಜಲಿ ಅರ್ಪಿಸಿದ ಡಾ. ಕಫೀಲ್‌, ತಾನೂ ಕೇರಳದ ನಿಪಾಹ್‌ಪೀಡಿತರ ಸೇವೆ ಮಾಡಬೇಕು ಎಂಬ ಇಂಗಿತ ವ್ಯಕ್ತಪಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News