ಇರಾನ್ ಪರಮಾಣು ಒಪ್ಪಂದ ಉಲ್ಲಂಘಿಸಿಲ್ಲ: ಐಎಇಎ
Update: 2018-05-25 23:38 IST
ವಿಯನ್ನ (ಆಸ್ಟ್ರಿಯ), ಮೇ 25: ಇರಾನ್ ಜಾಗತಿಕ ಶಕ್ತಿಗಳೊಂದಿಗೆ ಮಾಡಿಕೊಂಡ ಪರಮಾಣು ಒಪ್ಪಂದದಿಂದ ಅಮೆರಿಕ ಹಿಂದೆ ಸರಿದಿರುವ ಹೊರತಾಗಿಯೂ, ಒಪ್ಪಂದ ವಿಧಿಸಿರುವ ನಿರ್ಬಂಧಗಳ ಒಳಗೆಯೇ ಇರಾನ್ ಕಾರ್ಯಾಚರಿಸುತ್ತಿದೆ ಎಂದು ವಿಶ್ವಸಂಸ್ಥೆಯ ಪರಮಾಣು ನಿಗಾ ಸಂಸ್ಥೆ ‘ಅಂತಾರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ’ (ಐಎಇಎ) ಗುರುವಾರ ಹೇಳಿದೆ.
ಪರಮಾಣು ಒಪ್ಪಂದದಿಂದ ಅಮೆರಿಕ ಹೊರಬರುವ ನಿರ್ಧಾರವನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇ 8ರಂದು ಘೋಷಿಸಿದ ಬಳಿಕ ಮೊದಲ ಬಾರಿಗೆ ಇಂಥ ವರದಿಯೊಂದನ್ನು ಸಿದ್ಧಪಡಿಸಿರುವ ಐಎಇಎ, ಯುರೇನಿಯಂ ಸಂವರ್ಧನೆ, ಸಂವರ್ಧಿತ ಯುರೇನಿಯಂ ಮತ್ತು ಇತರ ಸಾಮಗ್ರಿಗಳ ಸಂಗ್ರಹದ ವಿಚಾರದಲ್ಲಿ ಹೇರಲಾಗಿರುವ ಮಿತಿಯನ್ನು ಇರಾನ್ ಪಾಲಿಸಿದೆ ಎಂದಿದೆ.
ಆದಾಗ್ಯೂ, ಐಎಇಎಯ ಹೆಚ್ಚುವರಿ ಶಿಷ್ಟಾಚಾರದ ಪ್ರಕಾರ, ತಪಾಸಣೆಗೆ ನೀಡಬೇಕಾಗಿರುವ ಹೆಚ್ಚುವರಿ ಅವಕಾಶದ ವಿಚಾರದಲ್ಲಿ ಇರಾನ್ ವಿಳಂಬ ನೀತಿಯನ್ನು ಅನುಸರಿಸುತ್ತಿದೆ ಎಂದು ಅದು ಹೇಳಿದೆ.