ಕಂಪ್ಯೂಟರ್ ಸದ್ಬಳಕೆ ಮಾಡಿ ಕೋಟ್ಯಾಧಿಪತಿಯಾದ ಕಣ್ಣೂರಿನ ಯುವಕ

Update: 2018-05-26 12:48 GMT

ಜಾವೇದ್‍ ಎಂಬ ಕಣ್ಣೂರಿನ ಯುವಕನಿಗೆ ಉಡುಗೊರೆಯಾಗಿ ಸಿಕ್ಕ ಒಂದು ಕಂಪ್ಯೂಟರ್ ಆತನನ್ನು ಕೋಟ್ಯಾಧಿಪತಿಯನ್ನಾಗಿಸಿದೆ. ಕೇರಳದ ಕಣ್ಣೂರಿನ 21ನ ವರ್ಷದ ಈ ಯುವಕ ವಾರ್ಷಿಕ ಎರಡು ಕೋಟಿ ರೂಪಾಯಿ ಆದಾಯ ಹೊಂದಿರುವ ಕಂಪನಿಯ ಮಾಲಕ. ಸ್ವಂತ ಮನೆ ಹಾಗೂ ಬಿಎಂಡಬ್ಲ್ಯು ಕಾರಿಗೂ ಈತ ಒಡೆಯ. ಇಷ್ಟೆಲ್ಲ ಸಾಧ್ಯವಾದದ್ದು ಕೇವಲ ಗೂಗಲ್‍ನ ಸದ್ಬಳಕೆಯಿಂದ!

ಈ ಉದ್ಯಮಶೀಲ ಯುವಕನ ಯಶೋಗಾಥೆ ಎಲ್ಲರಿಗೂ ಸ್ಫೂರ್ತಿಯ ಚಿಲುಮೆ. ಈ ವಿಶಿಷ್ಟ ಕ್ಷೇತ್ರಕ್ಕೆ ಎಳೆವಯಸ್ಸಿನಲ್ಲೇ ಲಗ್ಗೆ ಇಟ್ಟ ಈತ ಕಠಿಣ ಪರಿಶ್ರಮ ಹಾಗೂ ತನ್ನ ಸಾಮರ್ಥ್ಯದ ಮೇಲಿನ ವಿಶ್ವಾಸದಿಂದ ಅದ್ಭುತ ಯಶಸ್ಸು ಸಾಧಿಸಿದ್ದಾನೆ. ಜಾವೇದ್ ಇಂದು 'ಟಿಎನ್‍ಎಂ ಆನ್‍ಲೈನ್ ಸೊಲ್ಯೂಶನ್ಸ್' ಎಂಬ ಬಹುಕೋಟಿ ಐಟಿ ಕಂಪನಿಯ ಮಾಲಕ. ಇ-ಕಾಮರ್ಸ್, ವೆಬ್ ಡಿಸೈನಿಂಗ್ ಮತ್ತು ಮೊಬೈಲ್ ಅಪ್ಲಿಕೇಶನ್ ಅಭಿವೃದ್ಧಿಪಡಿಸುವ ಕಾರ್ಯ ನಿರ್ವಹಿಸುತ್ತಿರುವ ಈ ಕಂಪನಿ ವಿಶ್ವಾದ್ಯಂತ ಗ್ರಾಹಕರನ್ನು ಹೊಂದಿದೆ. 

ಹತ್ತನೇ ವಯಸ್ಸಿನಲ್ಲೇ ಜಾವೇದ್ ತಂದೆ, ಮಗನಿಗೆ ಕಂಪ್ಯೂಟರ್ ಹಾಗೂ ಇಂಟರ್ ನೆಟನ್ನು ಉಡುಗೊರೆಯಾಗಿ ನೀಡಿದ್ದರು. ಇದನ್ನು ಸಮರ್ಥವಾಗಿ ಬಳಸಿಕೊಂಡದ್ದೇ ಈ ಅದ್ಭುತ ಯಶಸ್ಸಿಗೆ ಕಾರಣವಾಯಿತು. ಜಾವೇದ್‍ನ ಮೂಲ ಹೆಸರು ಮುಹಮ್ಮದ್ ಜಾವೇದ್ ಟಿ.ಎನ್. ಈತನ ಹೆಸರಿನಲ್ಲಿ ಇ-ಮೇಲ್ ಐಡಿ ಸೃಷ್ಟಿಸಿದ್ದು ತಂದೆ.

"ಆ ಹಂತದಲ್ಲಿ, ನನ್ನ ಹೆಸರಿನಲ್ಲಿ ಬಳಕೆದಾರ ಐಡಿ ಲಭ್ಯವಿರಲಿಲ್ಲ. ಇದರ ಬದಲಾಗಿ ಟಿಎನ್‍ಎಂ ಜಾವೇದ್ ಎಂಬ ಹೆಸರಿನಲ್ಲಿ ಐಡಿ ಸೃಷ್ಟಿಸುವಂತೆ ಗೂಗಲ್‍ನಿಂದ ಸಲಹೆ ಬಂತು. ಆ ಹೆಸರು ಕ್ಲಿಕ್ ಆಯಿತು! ನಾನು ಹಿಂದಿರುಗಿ ನೋಡಿದಾಗ, ಆ ಘಟನೆ ನನ್ನ ಜೀವನದಲ್ಲಿ ಒಳ್ಳೆಯದರ ಆರಂಭಕ್ಕೆ ನಾಂದಿಯಾಯಿತು" ಎಂದು 'ದ ಬೆಟರ್ ಇಂಡಿಯಾ' ಜತೆ ಸಂವಾದ ನಡೆಸಿದ ಜಾವೇದ್ ವಿವರಿಸಿದರು.

ಆ ವೇಳೆಗೆ ಆರ್ಕುಟ್ ಮತ್ತು ಅಂತಹ ಸಾಮಾಜಿಕ ಜಾಲತಾಣಗಳ ವೈವಿಧ್ಯಮಯ ಶ್ರೇಣಿ ಕಾರ್ಯನಿರ್ವಹಿಸುತ್ತಿತ್ತು. ಇದು ಜಾವೇದ್‍ರಲ್ಲಿ ಕುತೂಹಲ ಮೂಡಿಸಿತು. "ವೆಬ್‍ಸೈಟ್ ಸೃಷ್ಟಿಸುವುದು ಹೇಗೆ, ಅವು ಹೇಗೆ ಕಾರ್ಯ ನಿರ್ವಹಿಸುತ್ತವೆ. ಹೀಗೆ ಪ್ರತಿಯೊಂದನ್ನೂ ತಿಳಿದುಕೊಳ್ಳುವುದರಲ್ಲಿ ನನಗೆ ಕುತೂಹಲ ಇತ್ತು. ಶಾಲಾ ಅವಧಿಯ ಬಳಿಕ ನಾನು ಬಹುತೇಕ ಸಮಯವನ್ನು ಇದರಲ್ಲೇ ಕಳೆಯುತ್ತಿದ್ದೆ. ಒಂದರ್ಥದಲ್ಲಿ ನಾನು ಕಂಪ್ಯೂಟರ್ ವ್ಯಸನಿಯಾದೆ. ಆದರೆ ಒಳ್ಳೆಯ ಉದ್ದೇಶಕ್ಕಾಗಿ" ಎಂದು ನೆನಪಿಸಿಕೊಳ್ಳುತ್ತಾರೆ ಜಾವೇದ್.

ಶೀಘ್ರವಾಗಿ ಜಾವೇದ್ ಬ್ಲಾಗಿಂಗ್ ಮತ್ತು ವೆಬ್ ಡಿಸೈನಿಂಗ್‍ನ ಮೂಲಭೂತ ಅಂಶಗಳನ್ನು ಉಚಿತ ವೆಬ್‍ಸೈಟ್ ಸೃಷ್ಟಿ ಅಪ್ಲಿಕೇಶನ್‍ಗಳ ಮೂಲಕ ತಿಳಿದುಕೊಂಡರು. ಸ್ವಂತವಾಗಿ ಕೆಲ ಬ್ಲಾಗ್‍ಗಳನ್ನು ಸೃಷ್ಟಿಸಿದರು. 10ನೇ ತರಗತಿ ವಿದ್ಯಾರ್ಥಿಯಾಗಿದ್ದಾಗ, ಸಹಪಾಠಿ ಸಿರಾಜ್ ಜತೆ ಸೇರಿ ಜಸ್ರಿ.ಟಿಕೆ ಎಂಬ ವೆಬ್‍ಸೈಟ್‍ಗೆ ಚಾಲನೆ ನೀಡಿದರು.

"ವೆಬ್ ಸಂಬಂಧಿ ವಿಷಯಗಳ ಬಗ್ಗೆ ತಿಳಿದುಕೊಳ್ಳಲು ನಮಗೆ ಇಬ್ಬರಿಗೂ ಸಮಾನ ಆಸಕ್ತಿ ಇತ್ತು. ಇದು ನಮ್ಮ ಹೊಸ ಹಾಗೂ ಮೊಟ್ಟಮೊದಲ ಸಾಹಸವಾಗಿತ್ತು. ಆದರೆ ಡಾಟ್‍ಕಾಮ್ ಡೊಮೈನ್ ಪಡೆಯಲು ಸಾಧ್ಯವಾಗಿರಲಿಲ್ಲ. ಏಕೆಂದರೆ ನಮಗೆ ಪಾಕೆಟ್‍ಮನಿ ಇರಲಿಲ್ಲ. ಆದ್ದರಿಂದ ಉಚಿತ ಡೊಮೈನ್ ಮೂಲಕ ವೆಬ್‍ಸೈಟ್ ಸೃಷ್ಟಿಸಿದೆವು" ಎಂದು ಜಾವೇದ್ ವಿವರಿಸಿದರು. ಇವೆಲ್ಲದರ ನಡುವೆಯೂ ಅಧ್ಯಯನಕ್ಕೆ ಯಾವ ತೊಂದರೆಯೂ ಆಗದಂತೆ ಜಾವೇದ್ ನೋಡಿಕೊಂಡರು. ಪರೀಕ್ಷೆಯಲ್ಲಿ ಎಲ್ಲ ವಿಷಯಗಳನ್ನೂ ಎ1 ಗ್ರೇಡ್ ಪಡೆದ ಬಳಿಕ, ಸಾಕಷ್ಟು ಸಮಯ ಇದ್ದ ಕಾರಣ ಈ ಕ್ಷೇತ್ರದಲ್ಲಿ ಮತ್ತಷ್ಟು ಅವಕಾಶಗಳ ಸಾಧ್ಯತೆ ಹುಡುಕತೊಡಗಿದರು. ಉತ್ತಮ ಕ್ಷಮತೆಯ ವೆಬ್‍ಸೈಟ್‍ಗಳು ಹೇಗೆ ಭಿನ್ನ ಹಾಗೂ ಅವುಗಳನ್ನು ಇನ್ನಷ್ಟು ಉತ್ತಮವಾಗಿ ಹೇಗೆ ಮಾಡಬಹುದು ಎಂಬ ಬಗ್ಗೆ ರಜೆಯ ಅವಧಿಯಲ್ಲಿ ಮತ್ತಷ್ಟು ತಿಳಿದುಕೊಂಡರು.

ಆಗ ಸಹಜವಾಗಿಯೇ ಈ ಕ್ಷೇತ್ರದಲ್ಲಿ ಜಾವೇದ್ ಆಸಕ್ತಿ ಹೆಚ್ಚಿತು. ವೆಬ್‍ಸೈಟ್ ಅಭಿವೃದ್ಧಿಗೆ ಸಾಕಷ್ಟು ಅವಕಾಶಗಳಿವೆ ಎನ್ನುವುದನ್ನು ಕಂಡುಕೊಂಡ ಅವರು, ಮೊಟ್ಟಮೊದಲ ಡೊಮೈನ್ ಹೆಸರನ್ನು (ಟಿಎನ್‍ಎಂ ಆನ್‍ಲೈನ್ ಸೊಲ್ಯೂಶನ್ಸ್) ನೊಂದಾಯಿಸಿಕೊಂಡರು. ಇದನ್ನು ಈಗಲೂ ವರ್ಚುವಲ್ ಕಂಪನಿಯಾಗಿ ನಿರ್ವಹಿಸುತ್ತಿದ್ದಾರೆ. ವೆಬ್‍ಸೈಟ್‍ಗಳನ್ನು ಕೇವಲ ಒಂದು ಸಾವಿರ ರೂಪಾಯಿಗೆ ಅಭಿವೃದ್ಧಿಪಡಿಸುವುದಾಗಿ ಫೇಸ್‍ಬುಕ್‍ನಲ್ಲಿ ಘೋಷಿಸಿ, ಸಕ್ರಿಯ ವಹಿವಾಟಿಗೆ ಧುಮುಕಿದರು. ತಕ್ಷಣವೇ ಕೆಲವರು ಆಸಕ್ತಿ ವ್ಯಕ್ತಪಡಿಸಲಾರಂಭಿಸಿದರು. ಆದರೆ ತಾಂತ್ರಿಕವಾಗಿ ಸಾಕಷ್ಟು ಪರಿಣತಿ ಇಲ್ಲದ ಕಾರಣ ಶೇಕಡ 99ರಷ್ಟು ವಿಚಾರಣೆಗಳನ್ನು ತಮ್ಮ ಪರವಾಗಿ ಪಡೆದುಕೊಳ್ಳಲು ಸಾಧ್ಯವಾಗಲಿಲ್ಲ.

"ವೆಬ್‍ಸೈಟ್ ಅಭಿವೃದ್ಧಿಗೆ ಪ್ರಬಲ ತಾಂತ್ರಿಕ ಕೌಶಲದ ಕೊರತೆ ಇದೆ ಮತ್ತು ಇನ್ನಷ್ಟು ಕಲಿಯಬೇಕು ಎನ್ನುವುದು ಆಗ ನನಗೆ ಮನವರಿಕೆಯಾಯಿತು. ಕಣ್ಣೂರಿನಲ್ಲಿ ಕೆಲ ವೆಬ್‍ಸೈಟ್ ಡಿಸೈನ್ ಕಂಪನಿಗಳಿಗೆ ಭೇಟಿ ನೀಡಿ ಅವು ಹೇಗೆ ಕಾರ್ಯ ನಿರ್ವಹಿಸುತ್ತವೆ ಎನ್ನುವುದನ್ನು ತಿಳಿದುಕೊಂಡೆ" ಎನ್ನುತ್ತಾರೆ ಜಾವೇದ್. ಯಾವುದೂ ಜಾವೇದ್‍ಗೆ ಕಾರ್ಯಸಾಧು ಎನಿಸದಿದ್ದಾಗ ಹೈಯರ್ ಸೆಕೆಂಡರಿ ಶಾಲೆಯ ಶಿಕ್ಷಕಿಯೊಬ್ಬರ ನೆರವು ಹೊಸ ನಿರೀಕ್ಷೆ ಮೂಡಿಸಿತು. ಆ ಶಿಕ್ಷಕಿ ಫೇಸ್‍ಬುಕ್‍ನಲ್ಲಿ ಜಾವೇದ್ ವೆಬ್‍ಸೈಟ್ ನಿರ್ಮಿಸುವ ಬಗ್ಗೆ ಪೋಸ್ಟಿಂಗ್ ಮಾಡಿದ್ದನ್ನು ನೋಡಿದ್ದರು. "ಅವರ ಸಹೋದರ ಒಳಾಂಗಣ ವಿನ್ಯಾಸ ಮಾಡುತ್ತಿದ್ದರು ಹಾಗೂ ಅವರಿಗೆ ವೆಬ್‍ಸೈಟ್ ಬೇಕಾಗಿತ್ತು. ಇದಕ್ಕಾಗಿ ನನ್ನ ಸಹಾಯ ಕೋರಿದರು. ನಾನು ಕೇಳಿದಷ್ಟು ಹಣ ನೀಡಿದರೆ ಖಂಡಿತವಾಗಿಯೂ ಒಳ್ಳೆಯ ವೆಬ್‍ಸೈಟ್ ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದೆ. ಟಿಎನ್‍ಎಂ ಆನ್‍ಲೈನ್ ಸೊಲ್ಯೂಶನ್ಸ್ ಹೆಸರಿನಲ್ಲಿ ಅಧಿಕೃತವಾಗಿ ಸೃಷ್ಟಿಸಿದ ಮೊಟ್ಟಮೊದಲ ವೆಬ್‍ಸೈಟ್ ಅದು. ನನ್ನ ಜೀವನದಲ್ಲಿ ಮೊಟ್ಟಮೊದಲ ಸಂಭಾವನೆಯನ್ನು ನನ್ನ ಶಿಕ್ಷಕಿಯಿಂದ ಪಡೆದೆ. ಅದುವರೆಗೂ ಮನೆಯಲ್ಲಿ ಯಾರಿಗೂ ನನ್ನ ಕೆಲಸದ ಬಗ್ಗೆ ತಿಳಿದಿರಲೇ ಇಲ್ಲ. ಆದ್ದರಿಂದ ಸಹಜವಾಗಿಯೇ ನನ್ನ ತಾಯಿ ಫರೀದಾ ಬಳಿ ನಾನು 2,500 ರೂಪಾಯಿ ನೀಡಿದಾಗ ನಿಜಕ್ಕೂ ಅಚ್ಚರಿ ಹಾಗೂ ಆಘಾತವಾಯಿತು. ಆಗ ನಿಜವಾಗಿ ಏನು ನಡೆಯಿತು ಎನ್ನುವುದನ್ನು ನಾನು ವಿವರಿಸಿದೆ" ಎಂದು ಹಳೆಯ ದಿನಗಳನ್ನು ಮೆಲುಕು ಹಾಕುತ್ತಾರೆ ಜಾವೇದ್.

ಆ ವೇಳೆಗೆ ದುಬೈನಲ್ಲಿ ಬ್ಯಾಂಕಿಂಗ್ ಉದ್ಯಮದಲ್ಲಿ ಕೆಲಸ ಮಾಡುತ್ತಿದ್ದ ತಂದೆ ಉದ್ಯೋಗ ತೊರೆದು ಭಾರತಕ್ಕೆ ಮರಳಿದ್ದರಿಂದ ಕುಟುಂಬದಲ್ಲಿ ಒಂದು ಬಗೆಯ ಆರ್ಥಿಕ ಮುಗ್ಗಟ್ಟು ಕಾಣಿಸಿಕೊಂಡಿತ್ತು. "ಪರಿಸ್ಥಿತಿ ಬಾಣಲೆಯಿಂದ ಬೆಂಕಿಗೆ ಎಂಬಂತಾಯಿತು. ಏನು ನಡೆದು ಹೋಯಿತು ಎಂದು ಚಿಂತಿಸುತ್ತಾ ಕೂರಲು ನನಗೆ ಸಮಯವಿಲ್ಲ ಎನ್ನುವುದು ಗೊತ್ತಿತ್ತು. ವಿಷಯದ ಅರಿವಾಗಿ, ಸ್ವಂತ ಕಂಪನಿ ಆರಂಭಿಸಲು ಹೇಗಾದರೂ ಒಂದು ಲಕ್ಷ ರೂಪಾಯಿ ಹೊಂದಿಸಿಕೊಡುವಂತೆ ತಂದೆಗೆ ಕೇಳಿದೆ. ಕಂಪ್ಯೂಟರ್ ಬಗ್ಗೆ ನನಗೆ ಇದ್ದ ಆಸಕ್ತಿ ಹಾಗೂ ವೆಬ್ ಆಧರಿತ ಕೆಲಸದ ಅರಿವಿದ್ದ ತಂದೆ ನನ್ನ ಮಹತ್ವಾಕಾಂಕ್ಷೆಗೆ ಮುಕ್ತ ಬೆಂಬಲ ನೀಡಿದರು" ಎಂದು ಜಾವೇದ್ ಹೇಳುತ್ತಾರೆ.

ಈ ಮಧ್ಯೆ ಜಾವೇದ್ ಕಣ್ಣೂರಿನ ಐಟಿ ಕಂಪನಿಯೊಂದರ ಜತೆ ಒಪ್ಪಂದ ಮಾಡಿಕೊಂಡು, ವೆಬ್‍ಸೈಟ್ ನಿರ್ಮಾಣ ಹಾಗೂ ಡಿಸೈನಿಂಗ್ ಬಗ್ಗೆ ಒಂದು ತಿಂಗಳ ವೃತ್ತಿಪರ ತರಬೇತಿ ಪಡೆದರು. ಇದು ಅವರ ಜೀವನದಲ್ಲಿ ಮತ್ತೊಂದು ಮಹತ್ವದ ಮೈಲುಗಲ್ಲಾಯಿತು. ಅಕಾಡೆಮಿಯಲ್ಲಿ ಕೆಲಸ ಮಾಡುತ್ತಿದ್ದ ಜಿಬಿನ್ ಹಾಗೂ ದಿನಿಲ್ ಎಂಬ ಇಬ್ಬರು ಬೋಧಕರು, ಜಾವೇದ್ ಕಂಪನಿಯಲ್ಲಿ ಕೆಲಸ ಮಾಡಲು ಒಪ್ಪಿಕೊಂಡರು. ಹೀಗೆ 2013ರ ಜೂನ್ 23ರಂದು 17 ವರ್ಷದ ಜಾವೇದ್ ಟಿಎನ್‍ಎಂ ಆನ್‍ಲೈನ್ ಸೊಲ್ಯೂಶನ್ಸ್ ಕಂಪನಿಗೆ ಸೌತ್‍ಬಜಾರ್ ನ ಸಣ್ಣ ಕಚೇರಿಯಲ್ಲಿ ಚಾಲನೆ ನೀಡಿದರು. ಓದು ಮತ್ತು ಕೆಲಸವನ್ನು ಸಮರ್ಥವಾಗಿ ನಿಭಾಯಿಸಿದ ಜಾವೇದ್, ಶಾಲೆ ಮುಗಿಸಿ ರಾತ್ರಿ 9ರವರೆಗೂ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರು. ಇದಾದ ಬಳಿಕ ಮಧ್ಯರಾತ್ರಿ 2ರವರೆಗೂ ಗ್ರಾಹಕರ ಜತೆಗೆ ವ್ಯವಹಾರದ ಬಗ್ಗೆ ಚರ್ಚಿಸುತ್ತಿದ್ದರು.

ಸಂಕಷ್ಟದ ದಿನಗಳಲ್ಲಿ ತಾಯಿ ಸದಾ ಜಾವೇದ್ ಬೆಂಬಲಕ್ಕೆ ಬೆನ್ನೆಲುಬಾಗಿ ನಿಂತಿದ್ದನ್ನೂ ಅವರು ಸ್ಮರಿಸಿಕೊಳ್ಳುತ್ತಾರೆ. ಹೈಯರ್ ಸೆಕೆಂಡರಿ ಪರೀಕ್ಷೆಯಲ್ಲಿ ಕೆಲಸದ ಒತ್ತಡದ ನಡುವೆಯೂ ಶೇಕಡ 85ರಷ್ಟು ಅಂಕಗಳನ್ನು ಪಡೆಯಲು ಯಶಸ್ವಿಯಾದರು. ಆದರೂ ಜೀವನದಲ್ಲಿ ತಡೆಯನ್ನು ನಿವಾರಿಸುವಂಥ ಯಾವ ಘಟನೆಯೂ ಸಂಭವಿಸಲಿಲ್ಲ. ವೆಬ್‍ಡಿಸೈನಿಂಗ್ ಸೇವೆಯನ್ನು ಅಗ್ಗದಲ್ಲಿ ಒದಗಿಸುತ್ತಿದ್ದ ಜಾವೇದ್‍ಗೆ, ಕಚೇರಿ ಬಾಡಿಗೆ ಮತ್ತು ಸಿಬ್ಬಂದಿ ವೇತನದಂಥ ಖರ್ಚು ನಿಭಾಯಿಸುವುದು ಸಾಧ್ಯವಾಗಲಿಲ್ಲ. ವಹಿವಾಟು ಕೂಡಾ ನಿಧಾನವೇಗದಲ್ಲಿ ಸಾಗುತ್ತಿತ್ತು. ತಿಂಗಳಿಗೆ ಒಂದೆರಡು ಪ್ರಾಜೆಕ್ಟ್ ಮಾತ್ರ ಪಡೆಯುವುದು ಸಾಧ್ಯವಾಗಿತ್ತು. ಈ ಹಂತದಲ್ಲಿ ನೆರವಿಗೆ ಬಂದ ತಾಯಿ ತಮ್ಮ ಚಿನ್ನದ ಬಳೆಗಳನ್ನು ಅಡವಿಟ್ಟು ಸಿಬ್ಬಂದಿಗೆ ಸಕಾಲದಲ್ಲಿ ವೇತನ ಪಾವತಿಸುವಂತೆ ನೋಡಿಕೊಂಡರು.

ಎರಡು ವರ್ಷಗಳ ಪರೀಕ್ಷಾ ಅವಧಿ ಮತ್ತು ಕಲಿಕೆಯ ಬಳಿಕ ಟಿಎನ್‍ಎಂ ಆನ್‍ಲೈನ್ ಸೊಲ್ಯೂಶನ್ಸ್, ಕೇರಳದಲ್ಲಿ ಸುಮಾರು 100 ಸಣ್ಣ ಪ್ರಮಾಣದ ಗ್ರಾಹಕರ ಕೆಲಸ ಪಡೆಯಿತು. "ಈ ಹಂತದಲ್ಲಿ ಆದಾಯ ಸೃಷ್ಟಿಗಿಂತ ಒದಗಿಸುವ ಸೇವೆಯ ವೈವಿಧ್ಯ ಪ್ರಮುಖ ಎನ್ನುವುದು ಮನವರಿಕೆಯಾಯಿತು" ಎಂದು ಹೇಳುತ್ತಾರೆ ಜಾವೆದ್. ಯುವ ಉದ್ಯಮಶೀಲರಿಗಾಗಿ ಕೇರಳ ಸರ್ಕಾರ ಆಯೋಜಿಸಿದ್ದ ಐಇಎಸ್ ಕೇರಳ ಶೃಂಗಸಭೆಯಲ್ಲಿ ಭಾಗವಹಿಸಿದ್ದು, ಹೊಸ ಉದ್ಯಮ ಸಾಹಸಕ್ಕೆ ವಿಶಿಷ್ಟ ಆಯಾಮ ನೀಡಿತು ಹಾಗೂ ಹೊಸ ಪ್ರಾಜೆಕ್ಟ್ ಗಳನ್ನು ಆಕರ್ಷಿಸಲು ಇದರಿಂದ ಸಾಧ್ಯವಾಯಿತು. ಇದು ವೃತ್ತಿಜೀವನದ ಬಲುದೊಡ್ಡ ಸಾಧನೆ ಎಂದು ಹೇಳುತ್ತಾರೆ. 

ಈ ಯುವಕನಿಗೆ ಸ್ವಂತ ಮನೆಯಲ್ಲೇ ನೆಲೆಸಬೇಕು ಎನ್ನುವ ಅಭಿಲಾಷೆ ಸದಾ ಇತ್ತು. ತಂದೆಗೆ ಒಳ್ಳೆ ವೇತನದ ಉದ್ಯೋಗ ಇದ್ದರೂ ಅವರು ವಿದೇಶದಲ್ಲಿ ನೆಲೆಸಿದ್ದರಿಂದ ಕುಟುಂಬ ಬಾಡಿಗೆ ಮನೆಯಲ್ಲೇ ಇರುವುದು ಅನಿವಾರ್ಯವಾಗಿತ್ತು. ಇದರಿಂದಾಗಿ ಸ್ವಂತ ಮನೆಯ ಕನಸನ್ನು ಜಾವೇದ್ 19ನೇ ವಯಸ್ಸಿನಲ್ಲೇ ಈಡೇರಿಸಿಕೊಂಡರು. ವರಂನಲ್ಲಿ ಸ್ವಂತ ಮನೆ ಕಟ್ಟಿದರು. ಇಂದು 21 ವರ್ಷದ ಯುವಕನಿಗೆ 18 ದೇಶಗಳಲ್ಲಿ ಗ್ರಾಹಕರಿದ್ದಾರೆ. 900 ಗ್ರಾಹಕರು ಇರುವ ದುಬೈನಲ್ಲಿ ಸ್ವಂತ ಕಚೇರಿಯನ್ನೂ ತೆರೆದಿದ್ದಾರೆ. 

ಟಿಎನ್‍ಎಂ ಆನ್‍ಲೈನ್ ಸೊಲ್ಯೂಶನ್ಸ್‍ನ ಯಶೋಗಾಥೆಯಲ್ಲಿ ಇನ್ನೊಂದು ಅಧ್ಯಾಯವೆಂದರೆ, ಜಾವೇದ್, ತಾವು ಸೃಷ್ಟಿಸಿದ ವೆಬ್‍ಸೈಟ್‍ಗಳಿಗೆ ಇನ್‍ಕಾರ್ಪೊರೇಟಿಂಗ್ ಸರ್ಚ್ ಎಂಜಿನ್ ಆಪ್ಟಿಮೈಸೇಷನ್ (ಎಸ್‍ಇಓ) ಅಭಿವೃದ್ಧಿಪಡಿಸಿದ್ದು. ಈ ವ್ಯವಸ್ಥೆಯಡಿ ವೆಬ್‍ಸೈಟ್‍ಗಳ ಹುಡುಕಾಟದ ವೇಳೆ ಈ ವೆಬ್‍ಸೈಟ್ ಸುಲಭವಾಗಿ ಸಿಗುತ್ತದೆ. ಇಷ್ಟೊಂದು ಎಳೆ ವಯಸ್ಸಿನಲ್ಲೇ ನಂಬಲಸಾಧ್ಯ ಸಾಧನೆಗಾಗಿ ಯುಎಇನಲ್ಲಿ ಇತ್ತೀಚೆಗೆ ಜಾವೇದ್ ಅವರನ್ನು ಸನ್ಮಾನಿಸಲಾಯಿತು. ಡಾ.ರಾಮ್ ಬುಕ್ಸಾನಿ ಪ್ರಶಸ್ತಿಯನ್ನೂ ನೀಡಿ ಗೌರವಿಸಿದ್ದಾರೆ.

ಪ್ರಸ್ತುತ ಜಾವೇದ್ ಹೊಸ ಯೋಜನೆ ರೂಪಿಸುವಲ್ಲಿ ಮಗ್ನರಾಗಿದಾರೆ. ಇದೀಗ ಟಿಎನ್‍ಎಂ ಅಕಾಡಮಿಯನ್ನು ಜಾವೇದ್ ಆರಂಭಿಸಿದ್ದು, ಇದು ವೆಬ್‍ಡಿಸೈನಿಂಗ್ ಹಾಗೂ ಡಿಜಿಟಲ್ ಮಾರುಕಟ್ಟೆ ಕ್ಷೇತ್ರದಲ್ಲಿ ಯುವಕರಿಗೆ ವೃತ್ತಿಪರ ತರಬೇತಿಯನ್ನು ನೀಡುತ್ತಿದೆ. ಕಣ್ಣೂರಿನಲ್ಲಿ ಅಕಾಡಮಿ ಇತ್ತೀಚೆಗೆ ಉದ್ಘಾಟನೆಯಾಗಿದ್ದು, ಎಲ್ಲ ವಯಸ್ಸಿನವರಿಗೂ ಇದು ಮುಕ್ತವಾಗಿದೆ. ಜಾವೇದ್ ಅವರ ಅದ್ಭುತ ಸಾಧನೆ ಮತ್ತು ಬದ್ಧತೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಅಗತ್ಯವಿದೆ. ಈ ಯಶೋಗಾಥೆ ಪ್ರತಿಯೊಬ್ಬರನ್ನೂ ಉತ್ತೇಜಿಸುವಂಥದ್ದು. ಜೀವನದಲ್ಲಿ ಯಶಸ್ಸನ್ನು ಹಾರೈಸಿ, ಭವಿಷ್ಯ ಕೂಡಾ ಫಲಪ್ರದವಾಗಲಿ ಎಂಬುದೇ ಹಾರೈಕೆ.

Similar News