15 ದಿನಗಳಲ್ಲಿ 82 ಕೋಟಿ ರೂ. ರಾಝಿ ಬಾಕ್ಸ್ ಆಫೀಸ್ ಧಮಾಕಾ

Update: 2018-05-26 13:11 GMT

2018 ಬಾಲಿವುಡ್‌ಗೆ ಅದೃಷ್ಟದ ವರ್ಷವಾಗಿ ಪರಿಣಮಿಸಿದೆ. ವರ್ಷದ ಆರಂಭದಲ್ಲೇ ‘ಟೈಗರ್ ಝಿಂದಾ ಹೈ’ ಚಿತ್ರದ ಭರ್ಜರಿ ಯಶಸ್ಸಿನ ಸವಿಯುಂಡ ಬಾಲಿವುಡ್, ಆನಂತರ ಪದ್ಮಾವತಿ ಹಾಗೂ ಭಾಗಿ 2 ಚಿತ್ರಗಳ ಅದ್ಭುತ ಗೆಲುವಿಗೆ ಸಾಕ್ಷಿಯಾಯಿತು. ಇದೀಗ ಮೇಘನಾ ಗುಲ್ಜಾರ್ ಅವರ ರಾಝಿ ಕೂಡಾ ಬಾಕ್ಸ್ ಆಫೀಸ್‌ನಲ್ಲಿ ಜಯಭೇರಿ ಬಾರಿಸುತ್ತಿದೆ. ಬಿಡುಗಡೆಗೊಂಡ 15 ದಿನಗಳಲ್ಲಿ ರಾಝಿ, ಭಾರತದಲ್ಲಿ 82.3 ಕೋಟಿ ರೂ. ಬಾಚಿ ಕೊಂಡಿದ್ದು, ವಿದೇಶದಲ್ಲೂ ಯಶಸ್ವಿ ಪ್ರದರ್ಶನ ಕಾಣುತ್ತಿದೆ.

ಜಂಗಿ ಪಿಕ್ಚರ್ಸ್ ಹಾಗೂ ಧರ್ಮ ಪ್ರೊಡಕ್ಷನ್ಸ್ ನಿರ್ಮಾಣದ ರಾಝಿಗೆ ಮೇಘನಾ ಗುಲ್ಜಾರ್ ನಿರ್ದೇಶಕಿ. ಪಾಕ್ ಸೇನಾಧಿಕಾರಿಯನ್ನು ವಿವಾಹವಾದ ಭಾರತೀಯ ಯುವತಿ, 1971ರ ಭಾರತ-ಪಾಕ್ ಯುದ್ಧದ ವೇಳೆ ತನ್ನ ದೇಶದ ಪರವಾಗಿ ಗೂಢಚಾರಿಕೆ ನಡೆಸುವ ರೋಮಾಂಚಕಾರಿ ಕಥಾವಸ್ತುವನ್ನು ಹೊಂದಿದೆ. ಆಲಿಯಾಭಟ್ ಹಾಗೂ ವಿಕಾಸ್ ಕೌಶಲ್ ಮುಖ್ಯಪಾತ್ರಗಳಲ್ಲಿ ನಟಿಸಿರುವ ಈ ಚಿತ್ರದ ಬಗ್ಗೆ ವಿಮರ್ಶಕ ರಿಂದಲೂ ಅಪಾರವಾದ ಪ್ರಶಂಸೆ ವ್ಯಕ್ತವಾಗಿದೆ.

ಬಾಕ್ಸ್‌ಆಫೀಸ್‌ನಲ್ಲಿ ರಾಝಿಯ ನಾಗಾಲೋಟವನ್ನು ಕಂಡಾಗ, ಈ ಚಿತ್ರದ ವಾರಾಂತ್ಯ 100 ಕೋಟಿ ರೂ. ಕ್ಲಬ್‌ಗೆ ಸೇರ್ಪಡೆಯಾಗುವುದು ಖಚಿತವಾಗಿದೆ. ಕಮರ್ಶಿಯಲ್ ಚಿತ್ರವಾದರೂ ಮಾಮೂಲಿ ಮಸಾಲಾ ಚಿತ್ರಗಳ ಶೈಲಿಯಿಂದ ಸಂಪೂರ್ಣವಾಗಿ ಹೊರಬಂದಿರುವ ರಾಝಿಯ ಅಭೂತಪೂರ್ವ ಯಶಸ್ಸು, ಬಾಲಿವುಡ್ ಮಂದಿಯನ್ನು ಚಕಿತಗೊಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News