ಸರಕಾರಿ ಅಧಿಕಾರಿಗಳು ಶೌಚಾಲಯದ ಮುಂದೆ ಫೋಟೊ ತೆಗೆಯದಿದ್ದರೆ ಸಂಬಳವಿಲ್ಲ !

Update: 2018-05-26 15:33 GMT

ಲಕ್ನೊ, ಮೇ 26: ಸರಕಾರಿ ಅಧಿಕಾರಿಗಳು ತಮ್ಮ ಮನೆಯಲ್ಲಿರುವ ಶೌಚಾಲಯದ ಎದುರು ನಿಂತಿರುವ ಫೋಟೋವನ್ನು ಕಡ್ಡಾಯವಾಗಿ ಕಳುಹಿಸಬೇಕು. ಮೇ 27ರ ಒಳಗೆ ಫೋಟೋ ಕಳಿಸದಿದ್ದರೆ ಆ ಅಧಿಕಾರಿಗಳ ಮೇ ತಿಂಗಳ ಸಂಬಳವನ್ನು ತಡೆಹಿಡಿಯಲಾಗುವುದು ಎಂದು ಉತ್ತರಪ್ರದೇಶದ ಸೀತಾಪುರ ಜಿಲ್ಲಾಡಳಿತ ಸೂಚನೆ ರವಾನಿಸಿದೆ.

ಪ್ರಧಾನಿ ನರೇಂದ್ರ ಮೋದಿಯವರ ಸ್ವಚ್ಛ ಭಾರತ ಅಭಿಯಾನದಡಿ ದೇಶದ ಎಲ್ಲಾ ಗ್ರಾಮಗಳೂ ಬಯಲುಶೌಚ ಮುಕ್ತವಾಗಬೇಕು ಎಂಬ ಗುರಿಹೊಂದಲಾಗಿದ್ದು, ಇದಕ್ಕೆ ಪೂರಕವಾಗಿ ಸೀತಾಪುರ ಜಿಲ್ಲೆಯ ಜಿಲ್ಲಾಧಿಕಾರಿ ಶೀತಲ್ ವರ್ಮ ಈ ಸೂಚನೆ ಹೊರಡಿಸಿದ್ದಾರೆ. ಸರಕಾರಿ ಉದ್ಯೋಗಿಗಳು ಮನೆಯಲ್ಲಿ ಶೌಚಾಲಯ ಹೊಂದಿರುವುದನ್ನು ದೃಢಪಡಿಸಲು ಫೋಟೋ ಸಹಿತ ಜಿಲ್ಲಾ ಪಂಚಾಯತ್‌ರಾಜ್ ಅಧಿಕಾರಿಗೆ ಮಾಹಿತಿ ಕಳುಹಿಸುವ ವ್ಯವಸ್ಥೆ ಮಾಡುವಂತೆ ಎಲ್ಲಾ ಇಲಾಖೆಗಳ ಮುಖ್ಯಸ್ಥರಿಗೆ ಸೂಚನೆ ರವಾನಿಸಲಾಗಿದೆ. ಸರಕಾರಿ ಉದ್ಯೋಗಿಗಳು ಇತರರಿಗೆ ಮಾದರಿಯಾಗಿರಬೇಕು ಎಂಬ ಕಾರಣಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಲಾಗಿದೆ.

ಇದರಂತೆ ಸೀತಾಪುರದ ಸರಕಾರಿ ಶಾಲೆಯ ಪ್ರಾಂಶುಪಾಲ ಭಗವತಿ ಪ್ರಸಾದ್ ತಮ್ಮ ಮನೆಯ ಶೌಚಾಲಯದ ಎದುರು ಸ್ಟೂಲ್‌ನಲ್ಲಿ ಕುಳಿತಿರುವ ಫೋಟೋವನ್ನು ಕಳುಹಿಸಿದ್ದಾರೆ. ಈ ಫೋಟೋದ ಜೊತೆ ಪ್ರಸಾದ್ ಅವರ ಆಧಾರ್ ಕಾರ್ಡ್ ಹಾಗೂ ಫೋನ್ ನಂಬರ್ ವಿವರ ಪ್ರಕಟಿಸಲಾಗಿದೆ. ಆದರೆ ಕೆಲವು ಸಿಬ್ಬಂದಿಗಳು ಜಿಲ್ಲಾಡಳಿತದ ಈ ಸೂಚನೆಯನ್ನು ವಿರೋಧಿಸಿದ್ದು ಆದೇಶವನ್ನು ಹಿಂಪಡೆಯಬೇಕೆಂದು ಒತ್ತಾಯಿಸಿದ್ದಾರೆ. ಇದು ಸರಕಾರಿ ಉದ್ಯೋಗಿಗಳ ವಿರುದ್ಧ ಕೈಗೊಂಡಿರುವ ಕಠೋರ ಕ್ರಮವಲ್ಲ. ಜಿಲ್ಲೆಯಲ್ಲಿ ನೈರ್ಮಲ್ಯಕ್ಕೆ ಪ್ರೋತ್ಸಾಹ ನೀಡಬೇಕೆಂಬುದು ನಮ್ಮ ಆಶಯವಾಗಿದೆ. ಪ್ರಧಾನಿ ಮೋದಿಯವರ ಸ್ವಚ್ಛತಾ ಸಂದೇಶವನ್ನು ಅರ್ಥಪೂರ್ಣಗೊಳಿಸಬೇಕೆಂದು ನಾವು ಬಯಸಿದ್ದೇವೆ ಎಂದು ಶಿಕ್ಷಣಾಧಿಕಾರಿ ಅಜಯ್ ಕುಮಾರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News