ತೃತೀಯ ರಂಗ ಬೆಂಬಲಿಸುವ ಬಗ್ಗೆ ಭೈಚುಂಗ್ ಭುಟಿಯಾ ಹೇಳಿದ್ದೇನು ?

Update: 2018-05-26 15:36 GMT

ಹೊಸದಿಲ್ಲಿ, ಮೇ 26: ಪ್ರಾದೇಶಿಕ ಪಕ್ಷಗಳ ಸಂಯುಕ್ತ ರಂಗದ ಯೋಜನೆ ಬಗ್ಗೆ ತಾನು ಮುಕ್ತ ಅಭಿಪ್ರಾಯ ಹೊಂದಿದ್ದೇನೆ. ಆದರೆ ಸಿಕ್ಕಿಂನಲ್ಲಿ ಆಡಳಿತ ಪಕ್ಷವನ್ನು ಸೋಲಿಸುವುದು ತನ್ನ ಪ್ರಥಮ ಆದ್ಯತೆಯಾಗಿದೆ ಎಂದು ಮೇ 31ರಂದು ತನ್ನ ರಾಜಕೀಯ ಪಕ್ಷಕ್ಕೆ ಅಧಿಕೃತವಾಗಿ ಚಾಲನೆ ನೀಡಲಿರುವ ಮಾಜಿ ಫುಟ್‌ಬಾಲ್ ಆಟಗಾರ ಭೈಚುಂಗ್ ಭುಟಿಯಾ ಹೇಳಿದ್ದಾರೆ.

 ತನ್ನ ರಾಜಕೀಯ ಪಕ್ಷವಾದ ‘ಹಮಾರ ಸಿಕ್ಕಿಂ ಪಾರ್ಟಿ’ಯನ್ನು ಸಶಕ್ತಗೊಳಿಸುವತ್ತ ಮೊದಲು ಗಮನ ನೀಡುತ್ತೇನೆ. ಸಿಕ್ಕಿಂನಲ್ಲಿ ಸುಮಾರು 25 ವರ್ಷದಿಂದ ಅಧಿಕಾರದಲ್ಲಿರುವ ಸಿಕ್ಕಿಂ ಡೆಮೊಕ್ರಾಟಿಕ್ ಪಾರ್ಟಿ ಹಾಗೂ ರಾಜ್ಯದ ಸುದೀರ್ಘಾವಧಿಯಿಂದ ಕಾರ್ಯ ನಿರ್ವಹಿಸುತ್ತಿರುವ ಮುಖ್ಯಮಂತ್ರಿ ಪವನ್ ಚಮ್ಲಿಂಗ್‌ರನ್ನು ಪದಚ್ಯುತಗೊಳಿಸುವತ್ತ ಆದ್ಯತೆ ನೀಡುತ್ತೇನೆ ಎಂದು ಭುಟಿಯಾ ತಿಳಿಸಿದ್ದಾರೆ.

ತೃತೀಯ ರಂಗ ಅಥವಾ ಸಂಯುಕ್ತ ರಂಗಕ್ಕೆ ಬೆಂಬಲ ನೀಡುವ ಬಗ್ಗೆ ನಮ್ಮ ಆಯ್ಕೆ ಮುಕ್ತವಾಗಿದೆ. ಆದರೆ ಪಕ್ಷವನ್ನು ಬಲಪಡಿಸಿ ಸಿಕ್ಕಿಂನಲ್ಲಿ ಸರಕಾರವನ್ನು ಬದಲಿಸುವುದಕ್ಕೆ ಮೊದಲ ಆದ್ಯತೆ ನೀಡುತ್ತೇನೆ. ಸಿಕ್ಕಿಂನ ಭ್ರಷ್ಟ ಸರಕಾರದ ವಿರುದ್ಧ ತನ್ನ ಪಕ್ಷ ಹೋರಾಡಲಿದೆ . ಪಕ್ಷವು ದಿಲ್ಲಿಯಲ್ಲಿ ಆಡಳಿತ ನಡೆಸುತ್ತಿರುವ ‘ಆಮ್ ಆದ್ಮಿ ಪಕ್ಷ’ದಿಂದ ಸ್ಫೂರ್ತಿ ಪಡೆದಿದೆ ಎಂದು 41ರ ಹರೆಯದ ಭುಟಿಯಾ ಹೇಳಿದ್ದಾರೆ. ಸಿಕ್ಕಿಂ ರಾಜ್ಯದಲ್ಲಿ ಜನತೆಗೆ ತಮ್ಮ ಅತೃಪ್ತಿ ಹೊರಗೆಡವಲು ಅವಕಾಶವಿಲ್ಲ. ಸರಕಾರದ ವಿರುದ್ಧ ಧ್ವನಿ ಎತ್ತುವವರನ್ನು ಬಲಿಪಶುಗಳನ್ನಾಗಿಸಲಾಗುತ್ತದೆ. ರಾಜ್ಯದಲ್ಲಿರುವ ಬಹುದೊಡ್ಡ ಸವಾಲು ಇದಾಗಿದೆ ಎಂದ ಭುಟಿಯಾ, ರಾಜ್ಯದಲ್ಲಿ ಹೆಚ್ಚುತ್ತಿರುವ ನಿರುದ್ಯೋಗದ ಸಮಸ್ಯೆ ಹಾಗೂ ಮಾದಕವಸ್ತು ಸೇವನೆಯ ಚಟದ ವಿರುದ್ಧ ಪಕ್ಷ ಹೋರಾಡಲಿದೆ ಎಂದರು. 2014ರ ಲೋಕಸಭಾ ಚುನಾವಣೆ ಹಾಗೂ 2016ರ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಭುಟಿಯಾ ಸೋಲುಂಡಿದ್ದರು. ಬಳಿಕ ತೃಣಮೂಲಕ ಕಾಂಗ್ರೆಸ್ ತೊರೆದು, ಕೆಲವು ಮಿತ್ರರ ಸಹಕಾರದಿಂದ ಸ್ವಂತ ರಾಜಕೀಯ ಪಕ್ಷವನ್ನು ಸ್ಥಾಪಿಸಿದ್ದರು. ತನ್ನ ಪಕ್ಷದ ಆಧಾರಶಕ್ತಿ ಯುವಕರಾಗಿದ್ದರೂ ಕೆಲವು ಅನುಭವಿ ವ್ಯಕ್ತಿಗಳ ಮಾರ್ಗದರ್ಶನದೊಂದಿಗೆ ಪಕ್ಷ ಮುನ್ನಡೆಯಲಿದೆ ಎಂದು ಭುಟಿಯಾ ತಿಳಿಸಿದ್ದಾರೆ.

ಆದರೆ ಚುನಾವಣೆಯಲ್ಲಿ ಗೆಲ್ಲುವುದು ಫುಟ್‌ಬಾಲ್‌ನಲ್ಲಿ ಗೋಲು ಬಾರಿಸಿದಷ್ಟು ಸುಲಭವಲ್ಲ ಎಂಬುದು ಭೈಚುಂಗ್ ಭುಟಿಯಾರಿಗೆ ಮನವರಿಕೆಯಾಗಿದೆ. ಆದರೂ ‘ಮಣ್ಣಿನ ಮಗ’ನಾಗಿರುವ ತನ್ನನ್ನು ಸಿಕ್ಕಿಂ ರಾಜ್ಯದ ಜನತೆ ಆಶೀರ್ವದಿಸಿ ರಾಜಕೀಯ ಕ್ಷೇತ್ರದಲ್ಲಿ ತನ್ನ ಎರಡನೇ ಇನ್ನಿಂಗ್ಸ್ ಅನ್ನು ಯಶಸ್ವಿಯಾಗಿಸಲಿದ್ದಾರೆ ಎಂಬ ನಿರೀಕ್ಷೆಯಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News