ಪಾಕ್‌ನೊಂದಿಗೆ ಯುದ್ಧವು ಅಂತಿಮ ಆಯ್ಕೆಯಾಗಿದೆ: ಅಮಿತ್ ಶಾ
ಹೊಸದಿಲ್ಲಿ, ಮೇ 26: ರಾಷ್ಟ್ರೀಯ ಭದ್ರತೆಯ ವಿಷಯಕ್ಕೆ ನರೇಂದ್ರ ಮೋದಿ ನೇತೃತ್ವದ ಸರಕಾರ ಅತ್ಯಂತ ಮಹತ್ವ ನೀಡುತ್ತಿದೆ. ಆದರೆ ಪಾಕಿಸ್ತಾನದೊಂದಿಗೆ ಯುದ್ಧ ನಡೆಸುವುದು ಅಂತಿಮ ಆಯ್ಕೆಯಾಗಿದೆ ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ತಿಳಿಸಿದ್ದಾರೆ.
ಕಳೆದ ನಾಲ್ಕು ವರ್ಷದ ಅವಧಿಯಲ್ಲಿ ಗರಿಷ್ಠ ಸಂಖ್ಯೆಯಲ್ಲಿ ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ ಎಂದು ಎನ್‌ಡಿಎ ಸರಕಾರ ನಾಲ್ಕು ವರ್ಷ ಪೂರೈಸಿದ ಕುರಿತು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಶಾ ಹೇಳಿದ್ದಾರೆ. ಎನ್‌ಡಿಎ ಸರಕಾರದ ಬಗ್ಗೆ ರಾಹುಲ್ ಗಾಂಧಿಯವರ ಟೀಕೆಯ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಾ, ವಿರೋಧ ಪಕ್ಷದವರಿಂದ ಮತ್ತೇನನ್ನು ನಿರೀಕ್ಷಿಸಲು ಸಾಧ್ಯ ಎಂದು ಪ್ರಶ್ನಿಸಿದರು. ನರೇಂದ್ರ ಮೋದಿ ಸರಕಾರದ ಕಳೆದ ನಾಲ್ಕು ವರ್ಷಗಳ ಸಾಧನೆಯ ಬಗ್ಗೆ ಅಂಕಿ ಅಂಶ ಸಹಿತ ವಿವರ ನೀಡಿದ್ದೇನೆ. ಈ ಅಂಕಿಅಂಶದ ಆಧಾರದಲ್ಲಿ ವಿರೋಧ ಪಕ್ಷದವರು ಯಾವುದೇ ವೇದಿಕೆಯಲ್ಲಿ ಚರ್ಚೆ ನಡೆಸಿದರೂ ಸರಕಾರ ಎದುರಿಸಲು ಸಿದ್ಧವಿದೆ ಎಂದವರು ಹೇಳಿದರು.
ಮೋದಿ ಸರಕಾರ ಅಧಿಕಾರದಲ್ಲಿ ನಾಲ್ಕು ವರ್ಷ ಪೂರೈಸಿದ ಕುರಿತು ಮಾಧ್ಯಮಗಳಲ್ಲಿ ಜಾಹೀರಾತಿಗೆ 4,600 ಕೋಟಿ ರೂ. ವೆಚ್ಚ ಮಾಡಿದೆ ಎಂಬ ವರದಿ ಸುಳ್ಳು ಎಂದು ಶಾ ಹೇಳಿದರು. ದೇಶದಲ್ಲಿ ಭೀತಿಯ ವಾತಾವರಣವಿದೆ ಎಂಬ ವಿಪಕ್ಷಗಳ ಹೇಳಿಕೆಯನ್ನು ನಿರಾಕರಿಸಿದ ಅವರು, ಅಕ್ರಮ ಆಸ್ತಿ ಹೊಂದಿರುವವರಿಗೆ , ಕಪ್ಪು ಹಣದ ಧನಿಕರಿಗೆ ದೇಶದಲ್ಲಿ ಭೀತಿಯ ವಾತಾವರಣ ಖಂಡಿತಾ ಇದೆ ಎಂದರು. ದಕ್ಷಿಣ ಭಾರತವು ಬಿಜೆಪಿಯ ವಿಕಾಸಕ್ಕೆ ಪ್ರಮುಖ ಪ್ರದೇಶವಾಗಿದೆ. ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 104 ಸ್ಥಾನ ಗೆದ್ದಿದೆ. ದಕ್ಷಿಣದ ರಾಜ್ಯಗಳಲ್ಲಿ ಪಕ್ಷ ವಿಕಸಿತಗೊಳ್ಳಲು ಇದು ಶುಭ ಸಂಕೇತವಾಗಿದೆ ಎಂದ ಶಾ, ಮೋದಿ ದೇಶದಲ್ಲಿ ರಾಜಕೀಯ ಸ್ಥಿರತೆಯನ್ನು ತಂದರು.ನಿಷ್ಕ್ರಿಯ ಕಾರ್ಯನೀತಿಯ ಯುಗವನ್ನು ಕಾರ್ಯನೀತಿ ಪ್ರೇರಿತ ಅಭಿವೃದ್ಧಿಯ ಯುಗಕ್ಕೆ ಮುನ್ನಡೆಸಿದ ಶ್ರೇಯಸ್ಸು ಮೋದಿಗೆ ಸಲ್ಲುತ್ತದೆ ಎಂದು ಅಮಿತ್ ಶಾ ಹೇಳಿದರು.