ಕೈರಾನಾ ಉಪಚುನಾವಣೆ: ಉತ್ತರ ಪ್ರದೇಶ ಬಿಜೆಪಿಗೆ ಮತ್ತೊಂದು ಅಗ್ನಿಪರೀಕ್ಷೆ

Update: 2018-05-27 04:09 GMT
ಬಿಜೆಪಿ ಅಭ್ಯರ್ಥಿ ಮೃಗಾಂಕ್ ಸಿಂಗ್ ಪರ ಯುಪಿ ಸಿಎಂ ಆದಿತ್ಯನಾಥ್ ಹಾಗೂ ಇತರರಿಂದ ಚುನಾವಣಾ ಪ್ರಚಾರ ಜಾಥಾ.

ಲಕ್ನೋ, ಮೇ 27: ಗೋರಖ್‌ಪುರ ಹಾಗೂ ಫೂಲ್‌ಪುರ ಚುನಾವಣೆಯ ಹೀನಾಯ ಸೋಲಿನಿಂದ ಚೇತರಿಸಿಕೊಳ್ಳುವ ಮುನ್ನವೇ ಉತ್ತರ ಪ್ರದೇಶ ಬಿಜೆಪಿಗೆ ಮತ್ತೊಂದು ಅಗ್ನಿ ಪರೀಕ್ಷೆ ಎದುರಾಗಿದೆ. ಕೈರಾನಾ ಕ್ಷೇತ್ರದ ಉಪಚುನಾವಣೆಯಲ್ಲಿ ಕೂಡಾ ವಿರೋಧ ಪಕ್ಷಗಳ ಸಂಯುಕ್ತ ಅಭ್ಯರ್ಥಿಯನ್ನು ಆಡಳಿತಾರೂಢ ಪಕ್ಷ ಎದುರಿಸುತ್ತಿದೆ.

ಸೋಮವಾರ (ಮೇ 28) ಮತದಾನ ನಡೆಯಲಿದ್ದು, ಆಡಳಿತ ಹಾಗೂ ವಿರೋಧ ಪಕ್ಷಗಳು ಮತದಾರರ ಓಲೈಕೆಗೆ ಕಸರತ್ತು ನಡೆಸಿವೆ. ಬಿಜೆಪಿಯ ಮೃಗಾಂಕ್ ಸಿಂಗ್ ಅವರು ರಾಷ್ಟ್ರೀಯ ಲೋಕದಳದ ತಬ್ಸಮ್ ಹಸನ್ ಅವರನ್ನು ಎದುರಿಸುತ್ತಿದ್ದಾರೆ. ಆರ್‌ಎಲ್‌ಡಿ ಅಭ್ಯರ್ಥಿಯನ್ನು ಸಮಾಜವಾದಿ ಪಕ್ಷ, ಕಾಂಗ್ರೆಸ್, ಬಹುಜನ ಸಮಾಜ ಪಕ್ಷ ಮತ್ತು ಆಮ್ ಆದ್ಮಿ ಪಾರ್ಟಿ ಬೆಂಬಲಿಸಿವೆ.

ಫೂಲ್‌ಪುರ ಮತ್ತು ಗೋರಖ್‌ಪುರದ ಹೀನಾಯ ಸೋಲಿನಿಂದ ಪಾಠ ಕಲಿತಿರುವ ಬಿಜೆಪಿ ತನ್ನ ಸಂಪೂರ್ಣ ಶಕ್ತಿಯನ್ನು ಕ್ಷೇತ್ರದಲ್ಲಿ ತೊಡಗಿಸಿದ್ದು, ಗೆಲ್ಲಲು ಶತಾಯ ಗತಾಯ ಪ್ರಯತ್ನ ನಡೆಸಿದೆ. ಮುಖ್ಯಮಂತ್ರಿ ಆದಿತ್ಯನಾಥ್, ಉಪಮುಖ್ಯಮಂತ್ರಿ ಕೇಶವಪ್ರಸಾದ್ ಮೌರ್ಯ, ಹಲವು ಸಚಿವರು ಹಾಗೂ ಮಾಜಿ ಸಚಿವರು, ಸಂಸದರು, ಶಾಸಕರು ರ್ಯಾಲಿ ನಡೆಸಿದ್ದಾರೆ. ಮನೆಮನೆ ಪ್ರಚಾರಕ್ಕೂ ಒತ್ತು ನೀಡಲಾಗಿದೆ.

ಇನ್ನೊಂದೆಡೆ ಆರ್‌ಎಲ್‌ಡಿ ಮುಖ್ಯಸ್ಥ ಅಜಿತ್ ಸಿಂಗ್, ಮಗ ಜಯಂತ್ ಚೌಧರಿ ಅವರು ಹಸನ್ ಪರ ಪ್ರಚಾರದ ಸಾರಥ್ಯ ವಹಿಸಿದ್ದಾರೆ. ಚಿಕ್ಕ ಪುಟ್ಟ ಸಭೆಗಳ ಮೂಲಕ ಮತದಾರರ ಮನವೊಲಿಕೆಗೆ ಮುಂದಾಗಿದ್ದಾರೆ. 150ಕ್ಕೂ ಹೆಚ್ಚು ಗ್ರಾಮಗಳಲ್ಲಿ ಜಯಂತ್ ಚೌಧರಿ ಸಭೆಗಳನ್ನು ನಡೆಸಿದ್ದಾರೆ. ಮನೆಮನೆ ಪ್ರಚಾರ ಫಲ ನೀಡುತ್ತಿದ್ದು, ನಮ್ಮ ಕಾರ್ಯಸೂಚಿ ಹಾಗೂ ಎದುರಾಳಿಯ ಜನವಿರೋಧಿ ನೀತಿಯನ್ನು ತಲುಪಿಸಿ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಆರ್‌ಎಲ್‌ಡಿ ವಕ್ತಾರ ಸುನೀಲ್ ರೋಹ್ತಾ ಹೇಳಿದ್ದಾರೆ.

ಸಮಾಜವಾದಿ ಪಕ್ಷದ ನಾಯಕರು ಸಕ್ರಿಯವಾಗಿ ಪ್ರಚಾರ ಮಾಡದಿದ್ದರೂ, ಆರ್‌ಎಲ್‌ಡಿ ಅಭ್ಯರ್ಥಿಗೆ ಪಕ್ಷದ ಬೆಂಬಲ ಘೋಷಿಸಿದ್ದಾರೆ. ಈ ಮಧ್ಯೆ ಕೈರಾನಾ ಕ್ಷೇತ್ರದ ಪಕ್ಕದಲ್ಲಿ ಬರುವ ಬಾಗ್‌ಪಥ್ ಜಿಲ್ಲೆಯಲ್ಲಿ ರವಿವಾರ ಮೋದಿ ಪೂರ್ವ ಎಕ್ಸ್‌ಪ್ರೆಸ್ ಹೈವೆ ಉದ್ಘಾಟಿಸುವ ಕಾರ್ಯಕ್ರಮ ಆಯೋಜನೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News