ಗುಜರಾತ್ ರಾಜ್ಯವು ಬೆಂಕಿಯನ್ನು ಎದುರಿಸಬೇಕಾದೀತು: ರೈತ ನಾಯಕರ ಎಚ್ಚರಿಕೆ

Update: 2018-05-27 14:14 GMT

ಹೊಸದಿಲ್ಲಿ,ಮೇ 27: ತಮಿಳುನಾಡಿನ ತೂತುಕುಡಿಯಲ್ಲಿ ಸ್ಟರ್ಲೈಟ್ ತಾಮ್ರ ಘಟಕದ ವಿರುದ್ಧ ಪ್ರತಿಭಟನೆಯ ಕಾವು ಇನ್ನೂ ಇಳಿದಿಲ್ಲ. ತನ್ಮಧ್ಯೆ ಗುಜರಾತ್‌ನ ಭಾವನಗರದಲ್ಲಿ ಗುಜರಾತ್ ಪವರ್ ಕಾರ್ಪೊರೇಷನ್ ಲಿ.(ಜಿಪಿಸಿಎಲ್)ನಿಂದ ಲಿಗ್ನೈಟ್ ಗಣಿಗಾರಿಕೆ ವಿಷಯದಲ್ಲಿ ರಾಜ್ಯ ಸರಕಾರ ಮತ್ತು ಗ್ರಾಮಸ್ಥರ ನಡುವೆ ಹಿಂಸಾತ್ಮಕ ಸಂಘರ್ಷಗಳಿಗೆ ರಾಜ್ಯವು ಸಾಕ್ಷಿಯಾಗಬಹುದು ಎಂದು ರೈತ ನಾಯಕರು ಎಚ್ಚರಿಕೆ ನೀಡಿದ್ದಾರೆ.

ಘೋಘಾ ಮತ್ತು ಭಾವನಗರ ತಾಲೂಕುಗಳ 12 ಗ್ರಾಮಗಳಲ್ಲಿ ಸುಮಾರು 1,414 ಹೆಕ್ಟೇರ್ ಭೂಮಿಯು ತನ್ನ ಸ್ವಾಧೀನದಲ್ಲಿದೆ ಎಂದು ಜಿಪಿಸಿಎಲ್ ಎಪ್ರಿಲ್ 1ರಂದು ಹೇಳಿಕೊಂಡಿದ್ದು,ಆಗಿನಿಂದಲೂ ಪ್ರದೇಶದಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ.

ಗುಜರಾತ್ ಜೀವಂತ ಜ್ವಾಲಾಮುಖಿಯ ಮೇಲೆ ಕುಳಿತಿದೆ. ರೈತರು ಮಾತ್ರವಲ್ಲ,ಇಡೀ ಗ್ರಾಮೀಣ ಗುಜರಾತೇ ಸಂಕಷ್ಟದಲ್ಲಿದೆ. ನಾವು ಭಾವನಗರದಲ್ಲಿ ನಡೆಯುತ್ತಿರುವ ಪ್ರತಿಭಟನೆಯ ಭಾಗವಾಗಿದ್ದೇವೆ. ರೈತರ ಖೇರು ಸಮಾಜವು ಅತ್ಯಂತ ಪ್ರಬಲವಾಗಿದೆ. ಅವರು ಹೋರಾಟದ ಮುಂಚೂಣಿಯಲ್ಲಿದ್ದಾರೆ ಮತ್ತು ನಾವು ಅವರೊಂದಿಗಿದ್ದೇವೆ ಎಂದು ಅಖಿಲ ಭಾರತ ಕಿಸಾನ್ ಸಭಾ(ಎಐಕೆಎಸ್)ದ ನಾಯಕ ಅತುಲ್ ಅಂಜಾನ್ ಅವರು ಹೇಳಿದರು.

ತೂತುಕುಡಿ ಮತ್ತು ಗುಜರಾತ್‌ನಲ್ಲಿಯ ಪರಿಸ್ಥಿತಿಗಳಲ್ಲಿ ಹೆಚ್ಚಿನ ಅಂತರವಿಲ್ಲ ಎನ್ನುವುದನ್ನು ಸರಕಾರವು ಅರಿತುಕೊಳ್ಳಬೇಕು. ಸರಕಾರವು ತೂತುಕುಡಿಯಂತೆ ಪರಿಸ್ಥಿತಿಯನ್ನು ನಿಭಾಯಿಸಿದರೆ ರಾಜ್ಯವು ಬೆಂಕಿಯನ್ನು ಎದುರಿಸಬೇಕಾಗುತ್ತದೆ ಎಂದರು.

ರಾಜ್ಯ ಸರಕಾರದ ಅಧಿಸೂಚನೆಯಂತೆ ಜಿಪಿಸಿಎಲ್ 1997ರಲ್ಲಿ ಘೋಘಾ ಮತ್ತು ಭಾವನಗರ ತಾಲೂಕುಗಳಲ್ಲಿ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡಿದೆ. ಆದರೆ ಗ್ರಾಮಸ್ಥರು ಈವರೆಗೂ ಈ ಭೂಮಿಯನ್ನು ಬಿಟ್ಟುಕೊಟ್ಟಿಲ್ಲ.

ಸರಕಾರವು ಲಿಗ್ನೈಟ್ ಗಣಿಗಾರಿಕೆಗಾಗಿ ತಮ್ಮ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳುವಾಗ ಭೂ ಸ್ವಾಧೀನ ಕಾಯ್ದೆಯನ್ನು ಸಂಪೂರ್ಣವಾಗಿ ಕಡೆಗಣಿಸುತ್ತಿದೆ ಎಂದು ರೈತರು ಆರೋಪಿಸಿದ್ದಾರೆ.

ಭೂ ಸ್ವಾಧೀನ ಕಾಯ್ದೆ-2013ರಂತೆ ಯಾವುದೇ ಉದ್ದೇಶಕ್ಕಾಗಿ ಸ್ವಾಧೀನ ಪಡಿಸಿಕೊಳ್ಳಲಾದ ಭೂಮಿಯು ಐದು ವರ್ಷಗಳವರೆಗೂ ಬಳಕೆಯಾಗಿರದಿದ್ದರೆ ಅದನ್ನು ಮಾಲಿಕರಿಗೆ ವಾಪಸ್ ಮಾಡಬೇಕು. ಆದರೆ ಗುಜರಾತ್ ಸೇರಿದಂತೆ ಯಾವುದೇ ರಾಜ್ಯಗಳು ಈ ಕಾಯ್ದೆಯನ್ನು ಅನುಸರಿಸುತ್ತಿಲ್ಲ. ಈಗ ಭಾವನಗರದ ರೈತರು ಬಳಕೆಯಾಗಿರದ ಭೂಮಿ ತಮ್ಮ ಬಳಿಯೇ ಇರಬೇಕೆಂದು ಆಗ್ರಹಿಸುತ್ತಿದ್ದಾರೆ ಎಂದು ಎಐಕೆಎಸ್ ನಾಯಕ ಹನ್ನಾನ್ ಮುಲ್ಲಾ ತಿಳಿಸಿದರು.

 ತಾನು ರೈತರಿಗೆ ಪರಿಹಾರವನ್ನು ಪಾವತಿಸಿದ್ದೇನೆ ಎಂದು ಸರಕಾರವು ಹೇಳಿದೆಯಾದರೂ,ತಮ್ಮಲ್ಲಿ ಹೆಚ್ಚಿನವರ ಭೂಮಿಯನ್ನು ಬಲವಂತದಿಂದ ಸ್ವಾಧೀನ ಪಡಿಸಿಕೊಳ್ಳಲಾಗಿದೆ ಎಂದು ರೈತರು ಆರೋಪಿಸಿದ್ದಾರೆ.

ಕೇಂದ್ರದ ಬಿಜೆಪಿ ನೇತೃತ್ವದ ಸರಕಾರ ಮತ್ತು ಪ್ರಧಾನಿ ನರೇಂದ್ರ ಮೋದಿಯವರು ಕಾರ್ಪೊರೇಟ್ ಸಂಸ್ಥೆಗಳೊಂದಿಗೆ ಶಾಮೀಲಾಗಿದ್ದಾರೆ ಮತ್ತು ರೈತ ಸಮುದಾಯದ ಬವಣೆಯನ್ನು ಕಡೆಗಣಿಸುತ್ತಿದ್ದಾರೆ. ರಾಜ್ಯದಲ್ಲಿಯ ಬಿಜೆಪಿ ಸರಕಾರ ಮತ್ತು ಕೇಂದ್ರ ರೈತರ ಬೆಲೆಗಳನ್ನು ಜುಜುಬಿ ದರಗಳಲ್ಲಿ ಕಾರ್ಪೊರೇಟ್‌ಗಳಿಗೆ ನೀಡಿವೆ. ಇದು ಗುಜರಾತ್ ಮಾದರಿಯ ಅಸಲಿ ಮುಖವಾಗಿದೆ ಎಂದು ರೈತನಾಯಕರು ಆರೋಪಿಸಿದರು.

ಕೈಗಾರಿಕಾ ಸ್ಥಾವರಗಳನ್ನು ಸ್ಥಾಪಿಸಲು ಕಾರ್ಪೊರೇಟ್‌ಗಳ ತುಷ್ಟೀಕರಣಕ್ಕಾಗಿ ಪರಿಸರ ನಿರ್ಬಂಧಗಳನ್ನೂ ಸರಕಾರಗಳು ಕಡೆಗಣಿಸುತ್ತವೆ ಎಂದು ಅವರು ಬೆಟ್ಟು ಮಾಡಿದರು.

ತೂತುಕುಡಿ ಘಟನೆಯಿಂದ ಪ್ರೇರಿತಗೊಂಡು ರಾಜ್ಯದ ರೈತರೂ ತಮ್ಮ ಹೋರಾಟವನ್ನು ತೀವ್ರಗೊಳಿಸಲಿದ್ದಾರೆ ಎಂದು ಅವರು ಎಚ್ಚರಿಕೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News