ಪ್ಲಾಸ್ಟಿಕ್ ತ್ಯಜಿಸಿ: ಮನ್ ಕಿ ಬಾತ್‌ನಲ್ಲಿ ಮೋದಿ ಕರೆ

Update: 2018-05-27 14:14 GMT

ಹೊಸದಿಲ್ಲಿ, ಮೇ 27: ಕಳಪೆ ದರ್ಜೆಯ ಪ್ಲಾಸ್ಟಿಕ್ ಹಾಗೂ ಪಾಲಿಥಿನ್ ಅನ್ನು ತ್ಯಜಿಸುವಂತೆ ಜನರನ್ನು ರವಿವಾರ ಆಗ್ರಹಿಸಿರುವ ಪ್ರಧಾನಿ ನರೇಂದ್ರ ಮೋದಿ, ಅದು ಪರಿಸರ, ವನ್ಯಜೀವಿ ಹಾಗೂ ಜನರ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ ಎಂದಿದ್ದಾರೆ.

ತಿಂಗಳ ರೇಡಿಯೋ ಕಾರ್ಯಕ್ರಮ ‘ಮನ್ ಕಿ ಬಾತ್’ನಲ್ಲಿ ಮಾತನಾಡಿದ ಅವರು, ಜೂನ್ 5ರಂದು ಉತ್ಸಾಹದಲ್ಲಿ ವಿಶ್ವ ಪರಿಸರ ದಿನ ಆಚರಿಸಬೇಕು ಹಾಗೂ ಗಿಡಗಳನ್ನು ನೆಡಲು ಇದು ಉತ್ತಮ ಕಾಲ ಎಂದಿದ್ದಾರೆ. ಗಿಡ ನೆಟ್ಟರೆ ಸಾಲದು, ಅದು ಮರವಾಗಿ ಬೆಳೆಯುವ ವರೆಗೆ ಕಾಳಜಿ ನೀಡುವ ಭರವಸೆಯನ್ನು ಜನರು ನೀಡಬೇಕು ಎಂದು ಅವರು ಹೇಳಿದ್ದಾರೆ. ಪರಿಸರ ರಕ್ಷಣೆ ಹಾಗೂ ಪರಿಸರದ ಬಗ್ಗೆ ಪ್ರಜ್ಞಾವಂತರಾಗುವುದು ಸಹಜವಾಗಿ ಬರಬೇಕು. ಇತ್ತೀಚೆಗೆ ಮಳೆಯೊಂದಿಗೆ ಧೂಳಿನ ಬಿರುಗಾಳಿ ಬೀಸಿರುವುದು ಅಕಾಲಿಕ. ಈ ರೀತಿಯ ಹವಾಮಾನದ ಮಾದರಿ ಜೀವ ಹಾಗೂ ಸೊತ್ತಿನ ಹಾನಿಗೆ ಕಾರಣವಾಗುತ್ತದೆ. ಇದು ಹವಾಮಾನ ಮಾದರಿ ಬದಲಾವಣೆಯ ಫಲಿತಾಂಶ ಎಂದು ಅವರು ಹೇಳಿದ್ದಾರೆ.

ಸುಡುಬಿಸಿಲಿನ ಬೇಸಗೆ ಅಥವಾ ನೆರೆ, ನಿರಂತರ ಮಳೆ ಅಥವಾ ಸಹಿಸಲಸಾಧ್ಯವಾಗದ ಚಳಿ ಎದುರಿಸಿದಾಗ ಪ್ರತಿಯೊಬ್ಬರು ತಜ್ಞರಾಗುತ್ತಾರೆ. ಜಾಗತಿಕ ತಾಪಮಾನ ಏರಿಕೆ ಹಾಗೂ ಹವಾಮಾನ ಬದಲಾವಣೆ ಬಗ್ಗೆ ಮಾತನಾಡುತ್ತಾರೆ. ಆದರೆ, ಕೇವಲ ಮಾತನಾಡುವುದರಿಂದ ಸಮಸ್ಯೆ ಪರಿಹಾರವಾಗುತ್ತದೆಯೇ ?, ಪರಿಸರದ ಬಗ್ಗೆ ಪ್ರಜ್ಞಾವಂತರಾಗಬೇಕು, ಪರಿಸರ ರಕ್ಷಿಸಬೇಕು, ಅದು ನಮ್ಮಲ್ಲಿ ಸಹಜವಾಗಿ ಬರಬೇಕು. ಈ ಸದ್ಗುಣಗಳು ನಮ್ಮ ಸಂಸ್ಕಾರದಿಂದ ಬರಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News