ದಲಿತ, ಕೃಷಿಕರ ಬಗ್ಗೆ ಸುಳ್ಳು, ವದಂತಿ ಹರಡುತ್ತಿರುವ ಕಾಂಗ್ರೆಸ್: ಪ್ರಧಾನಿ ಮೋದಿ ಆರೋಪ

Update: 2018-05-27 14:28 GMT

ಬಾಘ್‌ಪತ್ (ಉತ್ತರಪ್ರದೇಶ), ಮೇ 27: ದಲಿತ ದೌರ್ಜನ್ಯ ವಿರೋಧಿ ತಡೆ ಕಾಯ್ದೆಯಿಂದ ಹಿಡಿದು ರೈತರ ಸಮಸ್ಯೆಗಳ ವರೆಗೆ ವಿವಿಧ ಸಮಸ್ಯೆಗಳ ಕುರಿತು ಕಾಂಗ್ರೆಸ್ ‘‘ಸುಳ್ಳು ಹಾಗೂ ವದಂತಿ’’ ಹರಡುತ್ತಿದೆ ಎಂದು ಪ್ರತಿಪಕ್ಷ ಕಾಂಗ್ರೆಸ್ ಅನ್ನು ಪ್ರಧಾನಿ ನರೇಂದ್ರ ಮೋದಿ ರವಿವಾರ ಆರೋಪಿಸಿದ್ದಾರೆ 11,000 ಕೋಟಿ ರೂಪಾಯಿ ವೆಚ್ಚದ ಪೂರ್ವ ಪೆರಿಪೆರಲ್ ಎಕ್ಸ್‌ಪ್ರೆಸ್‌ವೇ ಉದ್ಘಾಟಿಸಿದ ಬಳಿಕ ಲೋಕಸಭಾ ಕ್ಷೇತ್ರವಾದ ಕೈರಾನಾದ ಸಮೀಪದಲ್ಲಿ ಉಪ ಚುನಾವಣೆಯ ಮುನ್ನಾ ದಿನವಾದ ರವಿವಾರ ಸಾರ್ವಜನಿಕ ರ್ಯಾಲಿ ಉದ್ಘಾಟಿಸಿ ಮಾತನಾಡಿದ ಅವರು, ರಾಜಕೀಯ ಲಾಭಕ್ಕಾಗಿ ಕಾಂಗ್ರೆಸ್ ಸುಳ್ಳುಗಳನ್ನು ಬಹಿರಂಗವಾಗಿ ಹರಡುತ್ತಿದೆ ಎಂದರು. ಒಂದು ಕುಟುಂಬವನ್ನು ಆರಾಧಿಸುತ್ತಿರುವ ಜನರು ಮೋದಿಯನ್ನು ವಿರೋಧಿಸುವ ಉತ್ಸಾಹದಲ್ಲಿ ದೇಶವನ್ನು ವಿರೋಧಿಸಲು ಆರಂಭಿಸಿದ್ದಾರೆ. ಒಂದು ಕುಟುಂಬವನ್ನು ಆರಾಧಿಸುವ ಜನರು ಪ್ರಜಾಪ್ರಭುತ್ವವನ್ನು ಆರಾಧಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ. ಈ ಉಪಚುನಾವಣೆಯಲ್ಲಿ ನಮ್ಮ ಎದುರಾಳಿಗಳನ್ನು ನೀವು ಗಮನಿಸಿ. ಅವರಿಗೆ ಕುಟುಂಬವೇ ದೇಶ. ಆದರೆ, ನನಗೆ ದೇಶವೇ ಕುಟುಂಬ ಎಂದು ಅವರು ಹೇಳಿದರು.

ಸುಪ್ರೀಂ ಕೋರ್ಟ್‌ನತ್ತ ಬೆರಳು ತೋರಿಸುವ, ಚುನಾವಣಾ ಆಯೋಗ ಹಾಗೂ ಇವಿಎಂ ಬಗ್ಗೆ ಸಂದೇಹ ವ್ಯಕ್ತಪಡಿಸುವ, ರಿಸರ್ವ್ ಬ್ಯಾಂಕ್ ಹಾಗೂ ಅದರ ನೀತಿಯ ಬಗ್ಗೆ ಶಂಶಯ ವ್ಯಕ್ತಪಡಿಸುವ, ಅವರ ತಪ್ಪು ಒಪ್ಪುಗಳ ಕ್ರಿಯೆಯ ತನಿಖೆ ನಡೆಸುವ ತನಿಖಾ ಸಂಸ್ಥೆಯನ್ನು ಪ್ರಶ್ನೆ ಮಾಡುವ ಮೂಲಕ ಅವರು ಬಿಕ್ಕಟ್ಟು ಸೃಷ್ಟಿಸುತ್ತಿದ್ದಾರೆ. ಈಗ ಅವರು ಮಾದ್ಯಮಗಳ ಬಗ್ಗೆ ಕೂಡ ಸಂಶಯ ವ್ಯಕ್ತಪಡಿಸಿದ್ದಾರೆ ಎಂದು ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆ ಕುರಿತು ಸುಪ್ರೀಂ ಕೋರ್ಟ್ ಆದೇಶ ಉಲ್ಲೇಖಿಸಿದ ಅವರು, ರಾಜಕೀಯ ಲಾಭಕ್ಕಾಗಿ ಸುಪ್ರೀಂ ಕೋರ್ಟ್‌ನ ಆದೇಶದ ಬಗ್ಗೆ ಅವರು ಸುಳ್ಳುಗಳನ್ನು ಹೇಗೆ ಹರಡುತ್ತಿದ್ದಾರೆ ಎಂದು ಜನರಿಗೆ ತಿಳಿದಿದೆ ಎಂದರು. ಶೇ. 18 ಜಿಎಸ್‌ಟಿ ಆಕರ್ಷಿಸಲು ಕೃಷಿಯನ್ನು ಗುತ್ತಿಗೆ ನೀಡಲಾಗುತ್ತಿದೆ ಎಂದು ಸುಳ್ಳು ಹರಡಲಾಗುತ್ತಿದೆ. ಇಂತಹ ವದಂತಿಗಳಿಗೆ ಗಮನ ನೀಡಬೇಡಿ ಎಂದರು. ದಲಿತರ ಕಲ್ಯಾಣಕ್ಕಾಗಿ ಸರಕಾರ ತೆಗೆದುಕೊಂಡ ಕ್ರಮಗಳನ್ನು ಅವರು ಪಟ್ಟಿ ಮಾಡಿದರು. ‘‘ದಲಿತರ ಮೇಲಿನ ದೌರ್ಜನ್ಯ ತಡೆ ಕಾಯ್ದೆಯನ್ನು ನಾವು ಕಠಿಣಗೊಳಿಸಿದ್ದೇವೆ. ದಲಿತರ ಮೇಲಿನ ದೌರ್ಜನ್ಯದ ತ್ವರಿತ ವಿಚಾರಣೆಗೆ ತ್ವರಿತ ನ್ಯಾಯಾಲಯಗಳನ್ನು ರೂಪಿಸಿದ್ದೇವೆ’’ ಎಂದು ಪ್ರಧಾನಿ ಮೋದಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News