ರೋಗಿಗಳ ಮಂಚದಡಿ, ಎಲ್ಲೆಂದರಲ್ಲಿ ಬೀದಿನಾಯಿಗಳು!
Update: 2018-05-27 20:18 IST
ಉತ್ತರ ಪ್ರದೇಶ, ಮೇ 27: ಆಲಿಘರ್ ನ ಶವಾಗಾರವೊಂದರಲ್ಲಿ ಮಹಿಳೆಯ ಮೃತದೇಹವನ್ನು ನಾಯಿಗಳು ತಿನ್ನುತ್ತಿದ್ದ ಘಟನೆ ಬೆಳಕಿಗೆ ಬಂದ ಒಂದು ತಿಂಗಳ ಒಳಗೆ ಉತ್ತರ ಪ್ರದೇಶದ ಹರ್ದೋಯಿ ಎಂಬಲ್ಲಿ ನಾಯಿಗಳು ಆಸ್ಪತ್ರೆಯೊಳಗೆ ಅಡ್ಡಾಡುತ್ತಿರುವುದು ವರದಿಯಾಗಿದೆ.
ಹರ್ದೋಯಿ ಜಿಲ್ಲೆಯಲ್ಲಿರುವ ಸರಕಾರಿ ಆಸ್ಪತ್ರೆಯೊಂದರ ವಾರ್ಡ್ ನಲ್ಲಿ, ರೋಗಿಗಳ ಮಂಚದ ಕೆಳಗೆ ಬೀದಿನಾಯಿಗಳು ಇರುವ ಫೋಟೊ ವೈರಲ್ ಆಗಿತ್ತು. “ನಮಗೆ ಭಯವಾಗುತ್ತದೆ, ಆದರೆ ನಾವು ಈ ಬಗ್ಗೆ ದೂರು ನೀಡಿದರೆ ನೀವೇ ನಾಯಿಗಳನ್ನು ಓಡಿಸಿ ಎಂದು ಸಿಬ್ಬಂದಿ ಹೇಳುತ್ತಾರೆ. ಅವುಗಳಲ್ಲಿ ಕೆಲವು ವಾರ್ಡ್ ಬಾಯ್ ಅಥವಾ ನರ್ಸ್ ಗಳ ಹಿಂದೆ ಬರುತ್ತದೆ” ಎಂದು ರೋಗಿಗಳು ಆರೋಪಿಸುತ್ತಾರೆ.
“ನಾವು ಈ ಬಗ್ಗೆ ಗಮನಿಸಿದ್ದೇವೆ ಹಾಗು ಇದು ಇನ್ನೊಮ್ಮೆ ನಡೆಯಬಾರದು ಎಂದು ಆಸ್ಪತ್ರೆ ಸಿಬ್ಬಂದಿ ಬಳಿ ಹೇಳಿದ್ದೇನೆ” ಎಂದು ಆಸ್ಪತ್ರೆಯ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ.