×
Ad

ಹೆಚ್ಚುತ್ತಿರುವ ಎನ್‌ಪಿಎ: ಸಂಸದೀಯ ಸಮಿತಿಗೆ ವಿವರಣೆ ನೀಡಲಿರುವ ಆರ್‌ಬಿಐ ಗವರ್ನರ್

Update: 2018-05-27 20:49 IST

ಹೊಸದಿಲ್ಲಿ,ಮೇ 27: ಆರ್‌ಬಿಐ ಗವರ್ನರ್ ಊರ್ಜಿತ್ ಪಟೇಲ್ ಅವರು ಜೂ.12ರಂದು ಕಾಂಗ್ರೆಸ್ ನಾಯಕ ವೀರಪ್ಪ ಮೊಯ್ಲಿ ನೇತೃತ್ವದ ಹಣಕಾಸು ಕುರಿತ ಸಂಸದೀಯ ಸ್ಥಾಯಿ ಸಮಿತಿಯ ಮುಂದೆ ಹಾಜರಾಗಿ ಬ್ಯಾಂಕಿಂಗ್ ವಂಚನೆಗಳು ಮತ್ತು ಹೆಚ್ಚುತ್ತಿರುವ ಅನುತ್ಪಾದಕ ಆಸ್ತಿ(ಎನ್‌ಪಿಎ)ಗಳ ಕುರಿತು ಮಾಹಿತಿಗಳನ್ನು ಒದಗಿಸಲಿದ್ದಾರೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಸಮಿತಿಯ ಸದಸ್ಯರಲ್ಲೋರ್ವರಾಗಿದ್ದಾರೆ.

ಹೆಚ್ಚುತ್ತಿರುವ ಎನ್‌ಪಿಎಗಳಿಂದಾಗಿ ರಾಷ್ಟ್ರೀಕೃತ ಬ್ಯಾಂಕುಗಳ ಸ್ಥಿತಿ ಮತ್ತು ಬ್ಯಾಂಕ್ ವಂಚನೆಗಳನ್ನು ತಡೆಯಲು ಭವಿಷ್ಯದ ಕ್ರಮಗಳ ಕುರಿತು ಪಟೇಲ್ ಅವರು ಸಮಿತಿಯೊಂದಿಗೆ ಮಾತನಾಡಲಿದ್ದಾರೆ.

ಇತ್ತೀಚಿನ ಕೆಲವು ತಿಂಗಳುಗಳಲ್ಲಿ ಬೆಳಕಿಗೆ ಬಂದಿರುವ ಸರಣಿ ಬ್ಯಾಂಕಿಂಗ್ ಹಗರಣಗಳ ಕುರಿತು ಪ್ರಶ್ನೆಗಳಿಗೂ ಆರ್‌ಬಿಐ ಉತ್ತರಿಸಲಿದೆ ಎಂದು ಸಮಿತಿಯ ಸದಸ್ಯರು ತಿಳಿಸಿದರು.

ಹಣಕಾಸು ಸೇವೆಗಳ ಕಾರ್ಯದರ್ಶಿ ರಾಜೀವ್ ಕುಮಾರ್ ಅವರು ಈ ಮೊದಲು ಸಮಿತಿಯ ಮುಂದೆ ಹಾಜರಾಗಿ ಬ್ಯಾಂಕಿಂಗ್ ಕ್ಷೇತ್ರಕ್ಕೆ ಸಂಬಂಧಿಸಿದ ವಿಚಾರಣೆಗಳ ಕುರಿತಂತೆ ಮಾಹಿತಿಗಳನ್ನೊದಗಿಸಿದ್ದರು.

ಸಾರ್ವಜನಿಕ ಕ್ಷೇತ್ರದ ಬ್ಯಾಂಕುಗಳನ್ನು ನಿಯಂತ್ರಿಸಲು ಆರ್‌ಬಿಐಗೆ ಸಾಕಷ್ಟು ಅಧಿಕಾರಗಳಿಲ್ಲ ಎಂದು ಪಟೇಲ್ ಇತ್ತೀಚಿಗೆ ಹೇಳಿದ್ದರು.

ಆರ್‌ಬಿಐ ಗವರ್ನರ್‌ಗೆ ಯಾವ ಬಗೆಯ ಅಧಿಕಾರ ಅಗತ್ಯವಿದೆ ಎನ್ನುವುದನ್ನು ತಿಳಿಯಲು ನಾವು ಬಯಸಿದ್ದೇವೆ ಎಂದು ಹೇಳಿದ ಸಮಿತಿ ಸದಸ್ಯರೋರ್ವರು, ನಿಯಂತ್ರಣವು ಆಡಳಿತದ ಪ್ರಮುಖ ಭಾಗವಾಗಿದೆ ಮತ್ತು ಇದೇ ಕಾರಣಕ್ಕೆ ಗವರ್ನರ್‌ರನ್ನು ಕರೆಸಲಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News