ಮೇಜರ್ ಗೊಗೋಯ್ ಪ್ರಕರಣ : ಸ್ಥಿತಿಗತಿ ವರದಿ ಸಲ್ಲಿಸುವಂತೆ ಪೊಲೀಸರಿಗೆ ಸೂಚನೆ
Update: 2018-05-27 21:18 IST
ಶ್ರೀನಗರ, ಮೇ 27: ಸೇನಾಧಿಕಾರಿ ಮೇಜರ್ ಲೆಫ್ಟಿನೆಂಟ್ ಗೊಗೋಯ್ ಹೊಟೇಲ್‌ನಲ್ಲಿ ಯುವತಿಯೊಂದಿಗೆ ಕಾಣಿಸಿಕೊಂಡಿರುವ ಪ್ರಕರಣದ ತನಿಖೆಯ ಸ್ಥಿತಿಗತಿ ವರದಿ ಸಲ್ಲಿಸುವಂತೆ ಇಲ್ಲಿನ ಸ್ಥಳೀಯ ನ್ಯಾಯಾಲಯ ಪೊಲೀಸರಿಗೆ ನಿರ್ದೇಶಿಸಿದೆ.
ಪ್ರಕರಣದ ಬಗ್ಗೆ ಸ್ಥಿತಿಗತಿ ವರದಿ ಸಲ್ಲಿಸಲು ಪೊಲೀಸರಿಗೆ ನಿರ್ದೇಶನ ನೀಡುವಂತೆ ಕೋರಿ ಸರಕಾರೇತರ ಸಂಸ್ಥೆ ಶ್ರೀನಗರದ ಮುಖ್ಯ ನ್ಯಾಯಾಂಗ ದಂಡಾಧಿಕಾರಿಗೆ ಮನವಿ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಈ ನಿರ್ದೇಶನ ಹೊರಬಿದ್ದಿದೆ. ಮನವಿ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆಯ ಅಧಿಕಾರಿ ಖನ್ಯಾರ್ ಮೇ 30ರ ಒಳಗಡೆ ವರದಿ ಸಲ್ಲಿಸಬೇಕು ಎಂದು ಸಿಜೆಎಂ ನಿರ್ದೇಶಿಸಿದ್ದಾರೆ. ಜಮ್ಮು ಹಾಗೂ ಕಾಶ್ಮೀರ ನ್ಯಾಯ ಹಾಗೂ ಮಾನವ ಹಕ್ಕುಗಳ ಅಂತಾರಾಷ್ಟ್ರೀಯ ವೇದಿಕೆ ಅಧ್ಯಕ್ಷ ಮುಹಮ್ಮದ್ ಅಹ್ಸಾನ್ ಈ ಮನವಿ ಸಲ್ಲಿಸಿದ್ದರು.