×
Ad

ಜುಲೈ 25ರಂದು ಪಾಕ್‌ನಲ್ಲಿ ಸಾರ್ವತ್ರಿಕ ಚುನಾವಣೆ

Update: 2018-05-27 21:37 IST

ಮೇ 31ರಂದು ಹಾಲಿ ಸರಕಾರದ ಅಧಿಕಾರ ಅಂತ್ಯ

ಇಸ್ಲಾಮಾಬಾದ್,ಮೇ 25: ಪಾಕಿಸ್ತಾನದ ಸಾರ್ವತ್ರಿಕ ಚುನಾವಣೆಯು ಜುಲೈ 25ರಂದು ನಡೆಯಲಿದೆಯೆಂದು ಅಧ್ಯಕ್ಷೀಯ ವಕ್ತಾರರು ರವಿವಾರ ಘೋಷಿಸಿದ್ದಾರೆ.

 ಪಾಕ್ ಅಧ್ಯಕ್ಷ ಮಮ್‌ನೂನ್ ಹುಸೈನ್, ಪಾಕ್ ಸಂಸತ್‌ನ ಚುನಾವಣಾ ದಿನಾಂಕಕ್ಕೆ ಶನಿವಾರ ತನ್ನ ಅನುಮೋದನೆ ನೀಡಿದ್ದಾರೆ. ರಾಷ್ಟ್ರೀಯ ಹಾಗೂ ಪ್ರಾಂತೀಯ ಅಸ್ಲೆಂಬ್ಲಿಗಳೆರಡಕ್ಕೂ ಏಕಕಾಲದಲ್ಲಿ ನಡೆಯಲಿರುವ ಈ ಚುನಾವಣೆಯಲ್ಲಿ 10 ಕೋಟಿಗೂ ಅಧಿಕ ನಾಗರಿಕರು ಮತ ಚಲಾಯಿಸುವ ಹಕ್ಕು ಹೊಂದಿದ್ದಾರೆ.

ಪಾಕ್ ಸರಕಾರದ ಹಾಗೂ ರಾಷ್ಟ್ರೀಯ ಅಸೆಂಬ್ಲಿಯ ಐದು ವರ್ಷಗಳ ಅವಧಿಯು ಮೇ 31ರಂದು ಕೊನೆಗೊಳ್ಳಲಿದ್ದು, ಆನಂತರ ನೂತನ ಸರಕಾರ ಅಸ್ತಿತ್ವಕ್ಕೆ ಬರುವವರೆಗೆ ಮಧ್ಯಂತರ ಪ್ರಧಾನಿ ಹಾಗೂ ಆಡಳಿತವು ಅಧಿಕಾರವಹಿಸಿಕೊಳ್ಳಲಿದೆ.

  ಆದರೆ ಹಂಗಾಮಿ ಪ್ರಧಾನಿ ಯಾರಾಗಬೇಕೆಂಬ ಬಗ್ಗೆ ಹಾಲಿ ಪ್ರಧಾನಿ ಶಹೀದ್ ಖಾಕನ್ ಅಬ್ಬಾಸಿ ಹಾಗೂ ಪ್ರತಿಪಕ್ಷ ನಾಯಕ ಖುರ್ಷೀದ್ ಶಾ ಮಧ್ಯೆ ಈವರೆಗೆ ಸಹಮತ ಮೂಡಿಲ್ಲವೆಂದು ತಿಳಿದುಬಂದಿದೆ. 2013ರಲ್ಲಿ ಪಾಕ್ ರಾಷ್ಟ್ರೀಯ ಅಸೆಂಬ್ಲಿಗೆ ನಡೆದ ಚುನಾವಣೆಯಲ್ಲಿ ನವಾಝ್ ಶರೀಫ್ ನೇತೃತ್ವದ ಪಾಕಿಸ್ತಾನ್ ಮುಸ್ಲಿಂ ಲೀಗ್ (ಪಿಎಂಎಲ್-ಎನ್) ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು.

 ಕಳೆದ ವರ್ಷ ಆಕ್ರಮ ಆಸ್ತಿ ಹಗರಣಕ್ಕೆ ಸಂಬಂಧಿಸಿ ಪಾಕ್ ಸರ್ವೋಚ್ಚ ನ್ಯಾಯಾಲಯವು ನವಾಝ್ ಶರೀಫ್ ಅವರನ್ನು ಪ್ರಧಾನಿ ಹುದ್ದೆಯಿಂದ ವಜಾಗೊಳಿಸಿತ್ತು.

  ಈ ಸಲದ ಸಾರ್ವತ್ರಿಕ ಚುನಾವಣೆಯಲ್ಲಿ ಪಿಎಂಎಲ್-ಎನ್ ಹಾಗೂ ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನ ತೆಹ್ರೀಕೆ ಇನ್ಸಾಫ್ ಹಾಗೂ ಅಸೀಫ್ ಅಲಿ ಝರ್ದಾರಿ ನೇತೃತ್ವದ ಪಾಕಿಸ್ತಾನ ಪೀಪಲ್ಸ್ ಪಾರ್ಟಿ ನಡುವೆ ತ್ರಿಕೋನ ಸ್ಪರ್ಧೆ ನಡೆಯುವ ನಿರೀಕ್ಷೆಯಿದೆಯೆಂದು ಚುನಾವಣಾ ವಿಶ್ಲೇಷಕರು ಭವಿಷ್ಯ ನುಡಿದಿದ್ದಾರೆ.

 ಪಿಎಂಎಲ್-ಎನ್ ವಿರುದ್ಧ ಪಾಕ್ ನ್ಯಾಯಾಲಯಗಳು ಹಲವಾರು ತೀರ್ಪುಗಳನ್ನು ನೀಡಿದ ಹೊರತಾಗಿಯೂ ಆ ಪಕ್ಷವು ಇತ್ತೀಚೆಗೆ ನಡೆದ ಹಲವಾರು ಉಪಚುನಾವಣೆಗಳಲ್ಲಿ ಜಯಗಳಿಸಿದೆ.

4.60 ಕೋಟಿ ಯುವಮತದಾರರು

ಜುಲೈ 29ರಂದು ನಡೆಯಲಿರುವ ಪಾಕ್ ಸಾರ್ವತ್ರಿಕ ಚುನಾವಣೆಗೆ ಮತಚಲಾಯಿಸುವ ಹಕ್ಕು ಹೊಂದಿರುವ 10 ಕೋಟಿಗೂ ಅಧಿಕ ಮತದಾರರ ಪೈಕಿ ಸುಮಾರು 4.60 ಕೋಟಿ ಮಂದಿ ಯುವಜನರಾಗಿದ್ದು, ನೂತನ ಸರಕಾರ ರಚನೆಯಲ್ಲಿ ನಿರ್ಣಾಯಕ ಪಾತ್ರವಹಿಸಲಿದ್ದಾರೆ.

20 ಕೋಟಿ ಜನಸಂಖ್ಯೆಯಿರುವ ಪಾಕಿಸ್ತಾನದಲ್ಲಿ ಈ ಸಲದ ಚುನಾವಣೆಯಲ್ಲಿ ಸುಮಾರು 10 ಕೋಟಿ ಮಂದಿ ಮತಚಲಾಯಿಸುವ ಹಕ್ಕು ಹೊಂದಿದ್ದಾರೆ. ಈ ಮತದಾರರ ಪೈಕಿ 5.92 ಕೋಟಿ ಮಂದಿ ಪುರುಷರು ಹಾಗೂ 4.67 ಕೋಟಿ ಮಹಿಳೆಯರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News