ಡ್ರಗ್ಸ್ ವಿರುದ್ಧ ಸಮರ: ಎರಡು ವಾರಗಳಲ್ಲಿ 77 ಮಂದಿ ಎನ್‌ಕೌಂಟರ್‌ಗೆ ಬಲಿ

Update: 2018-05-27 16:24 GMT
ಸಾಂದರ್ಭಿಕ ಚಿತ್ರ

 ಢಾಕಾ,ಮೇ27: ಕಳೆದ ಎರಡು ವಾರಗಳಲ್ಲಿ ಬಾಂಗ್ಲಾದೇಶ ನಡೆಸುತ್ತಿರುವ ಮಾದಕದ್ರವ್ಯ ವಿರೋಧಿ ಕಾರ್ಯಾಚರಣೆಗಳಲ್ಲಿ ಈವರೆಗೆ 77 ಮಂದಿ ಸಾವನ್ನಪ್ಪಿದ್ದಾರೆ. ರವಿವಾರ ಹಾಗೂ ಶನಿವಾರ 9ಕ್ಕೂ ಅಧಿಕ ಶಂಕಿತ ಮಾದಕದ್ರವ್ಯ ಕಳ್ಳಸಾಗಣೆದಾರರನ್ನು ಗುಂಡಿಕ್ಕಿ ಕೊಲ್ಲಲಾಗಿದೆಯೆಂದು ಅಧಿಕೃತ ಮೂಲಗಳು ತಿಳಿಸಿವೆ.

 ಕಾಕ್ಸ್ ಬಝಾರ್ ಜಿಲ್ಲೆಯಲ್ಲಿ ಕ್ಷಿಪ್ರ ಕಾರ್ಯಾಚರಣೆ ಪಡೆ (ಆರ್‌ಎಬಿ)ಯ ಜೊತೆ ನಡೆದ ಗುಂಡಿನ ಕಾಳಗದಲ್ಲಿ ಯಾಬಾ ಎಂದು ಕರೆಯಲಾಗುವ ಮಾದಕದ್ರವ್ಯದ ಪೂರೈಕೆದಾರನೆಂದು ನಂಬಲಾದ ವ್ಯಕ್ತಿಯೊಬ್ಬನನ್ನು ಹತ್ಯೆಗೈಯಲಾಗಿದೆಯೆಂದು ಆರ್‌ಎಬಿ ಕಮಾಂಡರ್ ರೂಹುಲ್ ಅಮೀನ್ ತಿಳಿಸಿದ್ದಾರೆ.

ಉಳಿದ 8 ಮಂದಿ ಶಂಕಿತ ಡ್ರಗ್ಸ್ ಕಳ್ಳಸಾಗಣೆದಾರರನ್ನು ಮೈಮೆನ್‌ಸಿಂಗ್, ಬಾಗೆರ್‌ಹಾಟ್,ನೌಖಾಲಿ, ಚಂಡ್‌ಪುರ್, ಚಿತ್ತಗಾಂಗ್, ಕುಶ್ತಿಯಾ, ಠಾಕೂರ್‌ಗಾಂವ್ ಹಾಗೂ ಖುಲ್ನಾಗಳಲ್ಲಿ ನಡೆದ ಗುಂಡಿ ಚಕಮಕಿಯಲ್ಲಿ ಸಾವನ್ನಪ್ಪಿದ್ದಾರೆಂದು ಅವರು ಹೇಳಿದ್ದಾರೆ. ಬಾಂಗ್ಲಾದಲ್ಲಿ ಭಾರೀ ಪಿಡುಗಾಗಿ ಪರಿಣಮಿಸಿರುವ ಮಾದಕದ್ರವ್ಯ ಮಾಫಿಯಾಗಳ ವಿರುದ್ಧ ಮೇ ತಿಂಗಳ ಆರಂಭದಲ್ಲಿ ಆರಂಭಿಸಿದ ಕಾರ್ಯಾಚರಣೆಯ ಬಳಿಕ 3 ಸಾವಿರಕ್ಕೂ ಅಧಿಕ ಮಂದಿ ಮಾದಕದ್ರವ್ಯ ಕಳ್ಳಸಾಗಣೆದಾರರನ್ನು ಬಂಧಿಸಲಾಗಿದೆ. ಹಾಗೂ 2795 ಡ್ರಗ್ ವ್ಯಾಪಾರಿಗಳು ಹಾಗೂ ಬಳಕೆದಾರರನ್ನು ಬಂಧಿಸಲಾಗಿದ್ದು, ಅವರಿಗೆ ಸಂಚಾರಿ ನ್ಯಾಯಾಲಯಗಳ ಮೂಲಕ ದಂಡ ಅಥವಾ ಜೈಲು ಶಿಕ್ಷೆಗಳನ್ನು ವಿಧಿಸಲಾಗಿದೆ.

ಮೇ 3ರಂದು ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಮಾದಕದ್ರವ್ಯ ವಿರೋಧಿ ಅಭಿಯಾನವನ್ನು ಆರಂಭಿಸಿದ್ದು ಭಾರೀ ಟೀಕೆಗೊಳಗಾಗಿತ್ತು. ದೇಶದ ಮಾನವಹಕ್ಕು ಕಾರ್ಯಕರ್ತರು ಅದನ್ನು ಫಿಲಿಪ್ಪೀನ್ಸ್‌ನಲ್ಲಿ ಅಧ್ಯಕ್ಷ ರೊಡ್ರಿಗೊ ಡ್ಯುಟೆರ್ಟೆ ಆರಂಭಿಸಿರುವ ರಕ್ತಪಾತದಿಂದ ಕೂಡಿದ ಮಾದಕದ್ರವ್ಯ ವಿರೋಧಿ ಸಮರಕ್ಕೆ ಹೋಲಿಸಿದ್ದಾರೆ.

ಬಾಂಗ್ಲಾದ ಕ್ಷಿಪ್ರ ಕಾರ್ಯಾಚರಣೆ ಬೆಟಾಲಿಯನ್ ಕ್ರಿಮಿನಲ್‌ಗಳು ಹಾಗೂ ಭಯೋತ್ಪಾದಕರನ್ನು ಎನ್‌ಕೌಂಟರ್ ನಡೆಸುವ ಹೆಸರಿನಲ್ಲಿ ಕಾನೂನುಬಾಹಿರ ಹತ್ಯೆಗಳನ್ನು ನಡೆಸುತ್ತಿದೆಯೆಂದು ಅವರು ಆಪಾದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News