×
Ad

ಪೊಲವರಮ್ ಅಣೆಕಟ್ಟು ಪ್ರಕರಣ: ಹಸಿರು ಪೀಠದಿಂದ ಕೇಂದ್ರಕ್ಕೆ ನೊಟೀಸ್

Update: 2018-05-28 20:35 IST

ಹೊಸದಿಲ್ಲಿ, ಮೇ 28: ಪೊಲವರಮ್ ಅಣೆಕಟ್ಟಿನ ಬಳಿ ನಿರ್ಮಿಸಲಾಗುತ್ತಿರುವ ಗೋಡೆಯು ಗೋದಾವರಿ ನದಿಯ ಕನಿಷ್ಟ ನೈಸರ್ಗಿಕ ಹರಿವಿಗೆ ತಡೆಯೊಡ್ಡಲಿದೆ ಎಂದು ಆರೋಪಿಸಿ ಸಲ್ಲಿಸಲಾಗಿರುವ ಮನವಿಗೆ ಪ್ರತಿಕ್ರಿಯಿಸಿರುವ ರಾಷ್ಟ್ರೀಯ ಹಸಿರು ಪೀಠ (ಎನ್‌ಜಿಟಿ), ಈ ಕುರಿತು ಕೇಂದ್ರ ಸರಕಾರ ಮತ್ತು ಇತರರಿಗೆ ನೊಟೀಸ್ ಜಾರಿ ಮಾಡಿದೆ.

ಎನ್‌ಜಿಟಿಯ ಪ್ರಬಾರ ಮುಖ್ಯಸ್ಥ ನ್ಯಾಯಾಧೀಶ ಜವಾದ್ ರಹೀಂ ಅವರು, ಪೊಲವರಮ್ ಯೋಜನಾ ಪ್ರಾಧಿಕಾರ, ಕೇಂದ್ರ ಪರಿಸರ ಸಚಿವಾಲಯ, ಅಂತರ್ ಸಚಿವಾಲಯ ನಿಗಾ ಸಮಿತಿ, ಕೇಂದ್ರ ಆಂತರಿಕ ಮೀನುಗಾರಿಕಾ ಸಂಸ್ಥೆ, ಆಂಧ್ರ ಪ್ರದೇಶ, ಪಶ್ಚಿಮ ಗೋದಾವರಿಯ ಜಿಲ್ಲಾಯುಕ್ತರು ಹಾಗೂ ಇತರರಿಗೆ ನೊಟೀಸ್ ಜಾರಿ ಮಡಿದ್ದು ಜುಲೈ 31ರ ಒಳಗಾಗಿ ಉತ್ತರ ನೀಡುವಂತೆ ಸೂಚಿಸಿದ್ದಾರೆ.

ಮಳೆಯಾಗದ ಸಮಯಗಳಲ್ಲಿ ನದಿಗಳಲ್ಲಿ ಶೇ. 15ರಿಂದ 20 ಕನಿಷ್ಟ ನೈಸರ್ಗಿಕ ಹರಿವು ಇರುವಂತೆ ನೋಡಿಕೊಳ್ಳಬೇಕೆಂದು ಹಸಿರು ಪೀಠವು ಇತ್ತೀಚೆಗೆ ಎಲ್ಲ ರಾಜ್ಯಗಳಿಗೆ ಸೂಚಿಸಿತ್ತು. ನದಿಯನ್ನು ಆಶ್ರಯಿಸಿರುವ ಪರಿಸರ ವ್ಯವಸ್ಥೆಯನ್ನು ಕಾಪಾಡಲು ಅಗತ್ಯವಿರುವ ನದಿಯ ಹರಿವಿನ ಪ್ರಮಾಣ, ಸಮಯ ಮತ್ತು ಗುಣಮಟ್ಟವನ್ನು ನೈಸರ್ಗಿಕ ಹರಿವು ಅಥವಾ ಪರಿಸರ ಹರಿವು ಎಂದು ವ್ಯಾಖ್ಯಾನಿಸಲಾಗುತ್ತದೆ. ಪೊಲವರಮ್ ಅಣೆಕಟ್ಟಿನ ಬಳಿ ಗೋಡೆಯನ್ನು ನಿರ್ಮಿಸುವುದರಿಂದ ಗೋದಾವರಿ ನದಿಯ ಪರಿಸರ ಹರಿವಿಗೆ ಧಕ್ಕೆಯಾಗುತ್ತದೆ ಎಂದು ನ್ಯಾಯವಾದಿ ಪ್ರಗ್ಯಾ ಪಾರಿಜಾತ್ ಸಿಂಗ್ ಹಸಿರು ಪೀಠಕ್ಕೆ ತಿಳಿಸಿದ್ದಾರೆ.

ಈ ಗೋಡೆಯ ನಿರ್ಮಾಣದಿಂದ ಗೋದಾವರಿ ನದಿಯ ಜಲಚರಗಳ ಮೇಲೆ ಹಾಗೂ ಪೊಲವರಮ್ ಪ್ರದೇಶದಲ್ಲಿ ವಾಸಿಸುವ 8,000 ಮೀನುಗಾರರ ಮೇಲೆ ಭೀಕರ ಪರಿಣಾಮವಾಗಲಿದೆ ಎಂದು ಅವರು ಎಚ್ಚರಿಸಿದ್ದಾರೆ. ನದಿಯ ನೀರು ಬತ್ತಿ ಹೋಗುತ್ತಿದ್ದು ಸಾವಿರಾರು ಮೀನುಗಾರರು ತಮ್ಮ ಬದುಕನ್ನು ಕಳೆದುಕೊಂಡಿದ್ದಾರೆ. ಅಷ್ಟು ಮಾತ್ರವಲ್ಲ ಜಲಚರಗಳ ಮೇಲೆ ಉಂಟಾಗಿರುವ ಪರಿಣಾಮದಿಂದಾಗಿ ಪರಿಸರಕ್ಕೂ ಹಾನಿಯಾಗುತ್ತಿದೆ. ಇವೆಲ್ಲವೂ 2005ರ ಅಕ್ಟೋಬರ್ 25ರಂದು ಮಾಡಿದ್ದ ಪಾರಿಸಾರಿಕ ಒಪ್ಪಂದಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಸಿಂಗ್ ದೂರಿದ್ದಾರೆ. ರಾಜ್ಯದ ಜೀವನಾಡಿ ಎಂದು ಆಂಧ್ರಪ್ರದೇಶ ಸರಕಾರ ವ್ಯಾಖ್ಯಾನಿಸಿರುವ ಪೊಲವರಮ್ ಅನ್ನು ಆಂಧ್ರಪ್ರದೇಶ ಪುನರ್‌ಸಂಘಟನಾ ಕಾಯ್ದೆ, 2014ರ ಅಡಿಯಲ್ಲಿ ರಾಷ್ಟ್ರೀಯ ಯೋಜನೆ ಎಂದು ಘೋಷಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News