ಮೇಲ್ಜಾತಿಯ ಯುವತಿಯೊಂದಿಗಿದ್ದ ಯುವಕನನ್ನು ತಲೆಕೆಳಗಾಗಿ ನೇತಾಡಿಸಿ ಥಳಿಸಿ ಕೊಂದರು

Update: 2018-05-28 16:39 GMT

ಗೋರಖ್ ಪುರ,ಮೇ 28: ಮೇಲ್ಜಾತಿಯ ಯುವತಿಯೊಂದಿಗಿದ್ದ ಕೆಳ ಜಾತಿಯ ಯುವಕನೊಬ್ಬನನ್ನು ಮರದಲ್ಲಿ ತಲೆಕೆಳಗಾಗಿ ನೇತಾಡಿಸಿ ಥಳಿಸಿ ಹತ್ಯೆಗೈದಿರುವ ಘಟನೆ ಗೋರಖ್ ಪುರದಲ್ಲಿ ನಡೆದಿದೆ.

ಈ ಬಗ್ಗೆ ಸುದ್ದಿಯಾಗುತ್ತಲೇ ಎರಡು ಸಮುದಾಯಗಳ ಮಧ್ಯೆ ಘರ್ಷಣೆಯ ಸ್ಥಿತಿ ನಿರ್ಮಾಣವಾಗಿದ್ದು, ಆರೋಪಿಗಳ ಮನೆಗೆ ಬೆಂಕಿ ಹಚ್ಚಲು ಯುವಕನ ಕುಟುಂಬಸ್ಥರು ಮುಂದಾಗಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ.

ಯುವತಿಯ ತಂದೆ, ತಾಯಿ ಹಾಗು ಸಹೋದರನನ್ನು ಯುವಕನ ತಂದೆಯ ದೂರಿನ ಆಧಾರದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಅರುಣ್ ಶುಕ್ಲಾ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಮಾಹಿತಿ ಸಿಕ್ಕ ತಕ್ಷಣವೇ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಯುವಕನನ್ನು ಬಿಆರ್ ಡಿ ಮೆಡಿಕಲ್ ಕಾಲೇಜಿಗೆ ದಾಖಲಿಸಿದ್ದರು. ಆದರೆ ಆತ ಮೃತಪಟ್ಟಿದ್ದಾನೆ ಎಂದು ವೈದ್ಯರು ಘೋಷಿಸಿದರು ಎಂದು ಅವರು ಮಾಹಿತಿ ನೀಡಿದರು.

ಈ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು ಎಂದು ಗ್ರಾಮಸ್ಥರು ಹೇಳುತ್ತಿದ್ದು, ಪೋಷಕರು ಇದನ್ನು ನಿರಾಕರಿಸಿದ್ದಾರೆ. ತಿಂಗಳ ಹಿಂದೆ ಇಬ್ಬರೂ ಊರಿನಿಂದ ಪರಾರಿಯಾಗಿದ್ದರು. ಯುವತಿಯ ಕುಟುಂಬಸ್ಥರು ಈ ಬಗ್ಗೆ ದೂರು ನೀಡಿದ್ದರು ಎಂದು ಹೆಸರು ಹೇಳಲಿಚ್ಛಿಸದ ಗ್ರಾಮಸ್ಥರೊಬ್ಬರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News