ಪಾಕ್ ಚುನಾವಣೆ: 30.63 ಲಕ್ಷ ಮುಸ್ಲಿಮೇತರ ಮತದಾರರು

Update: 2018-05-28 16:47 GMT

ಇಸ್ಲಾಮಾಬಾದ್,ಮೇ 28: ಪಾಕಿಸ್ತಾನದಲ್ಲಿ 2018ರಲ್ಲಿ ಮುಸ್ಲಿಮೇತರ ಮತದಾರರ ಸಂಖ್ಯೆಯು 30.63 ಲಕ್ಷವನ್ನು ತಲುಪಿದ್ದು, ಹಿಂದೂಗಳು ಆ ದೇಶದ ಅತಿ ದೊಡ್ಡ ಧಾರ್ಮಿಕ ಅಲ್ಪಸಂಖ್ಯಾತರಾಗಿದ್ದಾರೆ.

ಕಳೆದ ಐದು ವರ್ಷದಲ್ಲಿ ಪಾಕಿಸ್ತಾನದಲ್ಲಿ ಮುಸ್ಲಿಮೇತರ ಮತದಾರರ ಸಂಖ್ಯೆಯಲ್ಲಿ ಶೇ.30ರಷ್ಟು ಏರಿಕೆಯಾಗಿದೆಯೆಂದು ಡಾನ್ ದಿನಪತ್ರಿಕೆ ವರದಿ ಮಾಡಿದೆ.

2013ರ ಸಾರ್ವತ್ರಿಕ ಚುನಾವಣೆಯ ವೇಳೆ ಮತದಾರ ಪಟ್ಟಿಯಲ್ಲಿ ನೋಂದಾಯಿಸಿಕೊಂಡ ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯಗಳ ಮತದಾರರ ಸಂಖ್ಯೆಯು 20.77 ಲಕ್ಷ ಆಗಿದ್ದರೆ, 2018ರಲ್ಲಿ ಅದು 30.63 ಲಕ್ಷಕ್ಕೇರಿದೆ.

ಸಾರ್ವತ್ರಿಕ ಚುನಾವಣೆಗೆ ಮುಂಚಿತವಾಗಿ ಅಧಿಕಾರಿಗಳು ಪ್ರಕಟಿಸಿರುವ ಮತದಾರರ ಪಟ್ಟಿಯ ಪ್ರಕಾರ 2013ರ ಸಾರ್ವತ್ರಿಕ ಚುನಾವಣೆಗೆ ಮುನ್ನ ಪಾಕಿಸ್ತಾನದ ಲ್ಲಿ ಹಿಂದೂಮತದಾರರ ಸಂಖ್ಯೆಯು 10.40 ಲಕ್ಷ ಆಗಿದ್ದು, ಇದು ಉಳಿದ ಇತರ ಎಲ್ಲಾ ಅಲ್ಪಸಂಖ್ಯಾತ ಮತದಾರರ ಸಂಖ್ಯೆಗಿಂತಲೂ ಅಧಿಕವಾಗಿದೆ.

  2018ರ ಚುನಾವಣೆಯ ವೇಳೆ ಹಿಂದೂ ಮತದಾರರ ಸಂಖ್ಯೆಯು 10.77 ಲಕ್ಷಕ್ಕೆ ತಲುಪಿದೆ. ಪಾಕಿಸ್ತಾನದಲ್ಲಿ ಹಿಂದೂ ಮತದಾರರು ಸಿಂಧ್ ಪ್ರಾಂತದಲ್ಲಿ ಕೇಂದ್ರೀಕೃತವಾಗಿದ್ದು, ಅಲ್ಲಿನ ಎರಡು ಜಿಲ್ಲೆಗಳಲ್ಲಿ ಅವರು ಒಟ್ಟು ಮತದಾರರ ಸಂಖ್ಯೆಯ ಶೇ.40ರಷ್ಟಿದ್ದಾರೆ.

ಮುಸ್ಲಿಮೇತರ ಮತದಾರರ ಪೈಕಿ ಕ್ರೈಸ್ತರು ಎರಡನೆ ಅತಿ ದೊಡ್ಡ ಧಾರ್ಮಿಕ ಪಂಗಡವಾಗಿದ್ದು, ಅವರ ಸಂಖ್ಯೆ 10.64 ಲಕ್ಷದಷ್ಟಿದೆ. ಆದರೆ ಹಿಂದೂ ಮತದಾರರ ಸಂಖ್ಯೆಗಿಂತ ಹೋಲಿಸಿದರೆ ಕ್ರೈಸ್ತ ಮತದಾರರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. 2013ರ ಸಾರ್ವತ್ರಿಕ ಚುನಾವಣೆಯ ವೇಳೆ ಕ್ರೈಸ್ತ ಮತದಾರರ ಸಂಖ್ಯೆ 10.23 ಲಕ್ಷದಷ್ಟಿತ್ತು. ಉಳಿದಂತೆ 1,67.505 ಅಹ್ಮದಿಯಾ ಹಾಗೂ 8,852 ಸಿಕ್ಖ್ ಸಮುದಾಯದ ಮತದಾರರು ಈ ಸಲದ ಚುನಾವಣೆಗೆ ಮತ ಚಲಾಯಿಸುವ ಅರ್ಹತೆ ಪಡೆದಿದ್ದಾರೆ.

ಪಾಕಿಸ್ತಾನ ಮುಸ್ಲಿಂ ಲೀಗ್ (ಪಿಎಂಎಲ್-ಎನ್) ನೇತೃತ್ವದ ಹಾಲಿ ಸರಕಾರವು ಮೇ 31ರಂದು ತನ್ನ ಅಧಿಕಾರಾವಧಿಯನ್ನು ಪೂರ್ಣಗೊಳಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News