ನಸೀರುಲ್ ಉಲ್ ಮುಲ್ಕ್ ಹಂಗಾಮಿ ಪಾಕ್ ಪ್ರಧಾನಿ: ಅಬ್ಬಾಸಿ ನೇತೃತ್ವದ ಸರಕಾರದ ಅವಧಿ ಮೇ 31ರಂದು ಅಂತ್ಯ

Update: 2018-05-28 16:55 GMT

ಇಸ್ಲಾಮಾಬಾದ್,ಮೇ 28: ಪಾಕಿಸ್ತಾನದ ಹಂಗಾಮಿ ಪ್ರಧಾನಿಯಾಗಿ ಮಾಜಿ ಮುಖ್ಯ ನ್ಯಾಯಾಧೀಶ ನಸೀರುಲ್ ಉಲ್ ಮುಲ್ಕ್ ನೇಮಿಸಲಾಗಿದೆಯೆಂದು ಹಾಲಿ ಪ್ರಧಾನಿ ಶಹೀದ್ ಕಖ್ಖಾನ್ ಅಬ್ಬಾಸಿ ಸೋಮವಾರ ಘೋಷಿಸಿದ್ದಾರೆ.

ಹಾಲಿ ಪ್ರಧಾನಿ ಶಹೀದ್ ಕಖ್ಕಾನ್ ಅಬ್ಬಾಸಿ ನೇತೃತ್ವದ ಸರಕಾರದ ಅವಧಿ ಮೇ 31ರಂದು ಕೊನೆಗೊಳ್ಳಲಿದೆ.ನಂತರ ಜುಲೈ 25ರಂದು ನಡೆಯಲಿರುವ ಸಾರ್ವತ್ರಿಕ ಚುನಾವಣಾ ಪ್ರಕ್ರಿಯೆಯ ಮೇಲ್ವಿಚಾರಣೆಗಾಗಿ ಅಸ್ತಿತ್ವಕ್ಕೆ ಬರಲಿರುವ ಹಂಗಾಮಿ ಸರಕಾರದ ಪ್ರಧಾನಿಯಾಗಿ ನಸೀರುಲ್ ಉಲ್ ಮುಲ್ಕ್ ಅಧಿಕಾರವಹಿಸಿಕೊಳ್ಳಲಿದ್ದಾರೆ.

 ‘‘ನಸೀರುಲ್ ಮುಲ್ಕ್ ಓರ್ವ ವಿವಾದಾತೀತ ನಾಯಕರಾಗಿದ್ದು, ಯಾವನೇ ಪಾಕಿಸ್ತಾನಿ ಅವರ ವಿರುದ್ಧ ಬೆರಳು ತೋರಿಸಲು ಸಾಧ್ಯವಿಲ್ಲವೆಂದು ’’ ನಿರ್ಗಮನ ಪ್ರಧಾನಿ ಸುದ್ದಿಗಾರೊಂದಿಗೆ ಹಂಗಾಮಿ ಪ್ರಧಾನಿಯ ಆಯ್ಕೆಯನ್ನು ಪ್ರಕಟಿಸುತ್ತಾ ತಿಳಿಸಿದರು. ಈ ಸಂದರ್ಭದಲ್ಲಿ ಪ್ರತಿಪಕ್ಷ ನಾಯಕ ಸೈಯದ್ ಖುರ್ಷಿದ್ ಅಹ್ಮದ್ ಶಾ ಕೂಡಾ ಉಪಸ್ಥಿತರಿದ್ದರು.

   ನಸೀರುಲ್ ಮುಲ್ಕ್ ನೇಮಕದೊಂದಿಗೆ ಹಂಗಾಮಿ ಪ್ರಧಾನಿಯ ಆಯ್ಕೆಗೆ ಸಂಬಂಧಿಸಿ ಆಡಳಿತಾರೂಢ ಪಾಕಿಸ್ತಾನ ಮುಸ್ಲಿಂ ಲೀಗ್(ನವಾಝ್) ಹಾಗೂ ಅಹ್ಮದ್ ಶಾ ಅವರ ಪಾಕಿಸ್ತಾನ ಪೀಪಲ್ಸ್ ಪಾರ್ಟಿ ನಡುವೆ ಹಲವು ವಾರಗಳಿಂದ ನಡೆಯುತ್ತಿದ್ದ ತಿಕ್ಕಾಟ ಕೊನೆಗೊಂಡಂತಾಗಿದೆ.

  ಪಾಕಿಸ್ತಾನದ 22ನೇ ನ್ಯಾಯಮೂರ್ತಿಯಾಗಿ ನಿವೃತ್ತ ನ್ಯಾಯಮೂರ್ತಿ ನಾಸಿರುಲ್ ಮುಲ್ಕ್ ಅವರು 2014ರಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಸ್ವಾತ್ ಪ್ರಾಂತದ ಮಿಂಗೋರಾ ನಗರದವರಾದ ಅವ ತಂದೆ ಕಮ್ರಾನ್ ಖಾನ್ ಉದ್ಯಮಿಯಾಗಿದ್ದು, ತನ್ನ ಸಾಮಾಜಿಕ ಸೇವೆಗಳಿಗಾಗಿ ಜನಪ್ರಿಯರಾಗಿದ್ದರು.

2007ರ ನವೆಂಬರ್ 3ರಂದು ಆಗಿನ ಪಾಕ್ ಸೇನಾಡಳಿತಗಾರ ಜನರಲ್ ಪರ್ವೇಝ್ ಮುಶರ್ರಫ್ ಅವರು ದೇಶದಲ್ಲಿ ತುರ್ತುಪರಿಸ್ಥಿತಿ ಘೋಷಿಸಿ, ನ್ಯಾಯಾಧೀಶರನ್ನು ಬಲವಂತವಾಗಿ ಪದಚ್ಯುತಗೊಳಿಸುವ ಕ್ರಮದ ವಿರುದ್ಧ ನ್ಯಾಯಾಲಯ ವಿಧಿಸಿದ ತಡೆಯಾಜ್ಞೆಗೆ ಸಹಿಹಾಕಿದವರಲ್ಲಿ ಮುಲ್ಕ್ ಕೂಡಾ ಒಬ್ಬರಾಗಿದ್ದರು.

ಮುಖ್ಯ ನ್ಯಾಯಾಧೀಶರಾಗಿ ನಿವೃತ್ತಿಗೊಂಡ ಬಳಿಕ ಮುಲ್ಕ್ ಅವರು ಪಾಕಿಸ್ತಾನದ ಚುನಾವಣಾ ಆಯೋಗದ ಹಂಗಾಮಿ ವರಿಷ್ಠರಾಗಿಯೂ ಸೇವೆ ಸಲ್ಲಿಸಿದ್ದರು. ಪಿಎಂಎಲ್-ಎನ್ ನೇತೃತ್ವದ ಹಾಲಿ ಪಾಕ್ ಸರಕಾರ ಹಾಗೂ ಸಂಸತ್ ಗುರುವಾರ ವಿಸರ್ಜನೆಯಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News