ಸಿಬಿಎಸ್ ಇ 10ನೆ ತರಗತಿ ಫಲಿತಾಂಶ ಪ್ರಕಟ: ಸಮಾನ ಅಂಕ ಗಳಿಸಿದ ನಾಲ್ವರು ಟಾಪರ್

Update: 2018-05-29 13:09 GMT

ಹೊಸದಿಲ್ಲಿ,ಮೇ 29: ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿ(ಸಿಬಿಎಸ್‌ಸಿ)ಯ ಈ ವರ್ಷದ 10ನೇ ತರಗತಿ ಪರೀಕ್ಷಾ ಫಲಿತಾಂಶಗಳು ಮಂಗಳವಾರ ಪ್ರಕಟಗೊಂಡಿದ್ದು,ನಾಲ್ವರು ವಿದ್ಯಾರ್ಥಿಗಳು ಅಗ್ರಸ್ಥಾನವನ್ನು ಹಂಚಿಕೊಂಡಿದ್ದಾರೆ. ಬಾಲಕಿಯರು ಮತ್ತೊಮ್ಮೆ ಬಾಲಕರನ್ನು ಹಿಂದಿಕ್ಕಿ ಮೇಲುಗೈ ಸಾಧಿಸಿದ್ದಾರೆ.

 ಒಟ್ಟಾರೆ ಫಲಿತಾಂಶ ಶೇ.86.70ರಷ್ಟಾಗಿದೆ. ಬಾಲಕಿಯರ ಶೇಕಡಾವಾರು ತೇರ್ಗಡೆ ಪ್ರಮಾಣ ಶೇ.88.67ರಷ್ಟಿದ್ದರೆ,ಶೇ.85.32ರಷ್ಟು ಬಾಲಕರು ತೇರ್ಗಡೆಗೊಂಡಿದ್ದಾರೆ.

ಡಿಪಿಎಸ್ ಗುರ್ಗಾಂವ್‌ನ ಪ್ರಖರ ಮಿತ್ತಲ್,ಬಿಜ್ನೂರಿನ ಆರ್‌ಪಿ ಪಬ್ಲಿಕ್ ಸ್ಕೂಲ್‌ನ ರಿಮ್‌ಝಿಮ್ ಅಗರವಾಲ್,ಶಾಮ್ಲಿಯ ಸ್ಕಾಟಿಷ್ ಇಂಟರ್‌ನ್ಯಾಷನಲ್ ಸ್ಕೂಲ್‌ನ ನಂದಿನಿ ಗರ್ಗ್ ಮತ್ತು ಕೊಚ್ಚಿಯ ಭವನ್ಸ್ ವಿದ್ಯಾಲಯದ ಶ್ರೀಲಕ್ಷ್ಮಿ ಮೊದಲ ಸ್ಥಾನವನ್ನು ಅಲಂಕರಿಸಿದ್ದಾರೆ. ಈ ನಾಲ್ವರೂ 500ರಲ್ಲಿ ತಲಾ 499 ಅಂಕಗಳನ್ನು ಗಳಿಸಿದ್ದಾರೆ.

ತಲಾ 498 ಅಂಕಗಳನ್ನು ಗಳಿಸಿರುವ ಏಳು ವಿದ್ಯಾರ್ಥಿಗಳು ದ್ವಿತೀಯ ಸ್ಥಾನವನ್ನು ಮತ್ತು ತಲಾ 497 ಅಂಕಗಳನ್ನು ಗಳಿಸಿರುವ 14 ವಿದ್ಯಾರ್ಥಿಗಳು ತೃತೀಯ ಸ್ಥಾನವನ್ನು ಹಂಚಿಕೊಂಡಿದ್ದಾರೆ.

ತಿರುವನಂತಪುರ(ಶೇ.99.60),ಚೆನ್ನೈ(ಶೇ.97.37) ಮತ್ತು ಅಜ್ಮೀರ್ (ಶೇ.91.86) ಅತ್ಯುತ್ತಮ ಸಾಧನೆಯನ್ನು ಪ್ರದರ್ಶಿಸಿರುವ ಮೂರು ಅಗ್ರ ವಲಯಗಳಾಗಿವೆ. ದಿಲ್ಲಿ ಶೇ.78.62 ರಷ್ಟು ಫಲಿತಾಂಶವನ್ನು ದಾಖಲಿಸಿದೆ.

1,31,493 ವಿದ್ಯಾರ್ಥಿಗಳು ಶೇ.90 ಮತ್ತು ಹೆಚ್ಚಿನ ಅಂಕಗಳನ್ನು ಹಾಗೂ 27,426 ವಿದ್ಯಾರ್ಥಿಗಳು ಶೇ.95 ಮತ್ತು ಹೆಚ್ಚಿನ ಅಂಕಗಳನ್ನು ಗಳಿಸಿದ್ದಾರೆ ಎಂದು ಮಂಡಳಿಯು ತಿಳಿಸಿದೆ.

ಭಿನ್ನ ಸಾಮರ್ಥ್ಯದ ವಿದ್ಯಾರ್ಥಿಗಳು ಶೇ.92.55 ಫಲಿತಾಂಶವನ್ನು ಸಾಧಿಸಿದ್ದು, ಗುರ್ಗಾಂವ್‌ನ ಅನುಷ್ಕಾ ಪಾಂಡೆ ಮತ್ತು ಗಾಝಿಯಾಬಾದ್‌ನ ಸಾನ್ಯಾ ಗಾಂಧಿ 500ರಲ್ಲಿ ತಲಾ 489 ಅಂಕಗಳನ್ನು ಗಳಿಸಿ ಈ ವಿಭಾಗದಲ್ಲಿ ಅಗ್ರಸ್ಥಾನವನ್ನು ಮುಡಿಗೇರಿಸಿಕೊಂಡಿದ್ದಾರೆ. 484 ಅಂಕಗಳೊಂದಿಗೆ ಒಡಿಶಾದ ಧಾನಪುರದ ಸೌಮ್ಯಾ ದೀಪ ಪ್ರಧಾನ ಅವರು ದ್ವಿತೀಯ ಸ್ಥಾನವನ್ನು ತನ್ನದಾಗಿಸಿಕೊಂಡಿದ್ದಾರೆ.

ಭಿನ್ನ ಸಾಮರ್ಥ್ಯದ ವಿದ್ಯಾರ್ಥಿಗಳ ವಿಭಾಗದಲ್ಲಿ 135 ವಿದ್ಯಾರ್ಥಿಗಳು ಶೇ.90 ಮತ್ತು ಹೆಚ್ಚು ಹಾಗೂ 21 ವಿದ್ಯಾರ್ಥಿಗಳು ಶೇ.95 ಮತ್ತು ಅದಕ್ಕಿಂತ ಹೆಚ್ಚಿನ ಅಂಕಗಳನ್ನು ಗಳಿಸಿದ್ದಾರೆ.

ದಿಲ್ಲಿ-ಎನ್‌ಸಿಆರ್ ಮತ್ತು ಜಾರ್ಖಂಡ್‌ಗಳಲ್ಲಿ ಗಣಿತ ಪ್ರಶ್ನೆಪತ್ರಿಕೆಯ ಸೋರಿಕೆಯೊಂದಿಗೆ ಈ ವರ್ಷದ 10ನೇ ತರಗತಿಯ ಪರೀಕ್ಷೆಗಳು ವಿವಾದದ ಸುಳಿಯಲ್ಲಿ ಸಿಲುಕಿದ್ದವು. ವಿದ್ಯಾರ್ಥಿಗಳ ಹಿತಾಸಕ್ತಿಯ ದೃಷ್ಟಿಯಿಂದ ಗಣಿತದಲ್ಲಿ ಮರುಪರೀಕ್ಷೆಯನ್ನು ನಡೆಸದಿರಲು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ನಿರ್ಧರಿಸಿತ್ತು.

ಈ ವರ್ಷದ 10ನೇ ತರಗತಿಯ ಪರೀಕ್ಷೆಗಳಿಗೆ 16 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಹಾಜರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News