70 ವರ್ಷಗಳಲ್ಲಿ ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಗಾಗಿ ಜೀವ ತೆತ್ತವರಲ್ಲಿ ಭಾರತೀಯರೇ ಅಧಿಕ

Update: 2018-05-30 15:44 GMT

ನ್ಯೂಯಾರ್ಕ್, ಮೇ 30: ಕಳೆದ 70 ವರ್ಷಗಳಲ್ಲಿ ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯ ವಿವಿಧ ಕಾರ್ಯಾಚರಣೆಗಳಲ್ಲಿ ಭಾರತವು ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ತನ್ನ ಯೋಧರನ್ನು ಕಳೆದುಕೊಂಡಿದೆ. ಶಾಂತಿಪಾಲನಾ ಪಡೆಯಲ್ಲಿ ಕರ್ತವ್ಯದಲ್ಲಿದ್ದಾಗ ಸೇನೆ,ಪೊಲೀಸ್ ಮತ್ತು ನಾಗರಿಕ ಸಿಬ್ಬಂದಿಗಳು ಸೇರಿದಂತೆ 163 ಭಾರತೀಯರು ತಮ್ಮ ಬಲಿದಾನ ಮಾಡಿದ್ದಾರೆ. 1948ರಲ್ಲಿ ತನ್ನ ಶಾಂತಿಪಾಲನಾ ಪಡೆ ಅಸ್ತಿತ್ವಕ್ಕೆ ಬಂದಾಗಿನಿಂದ ಈ 70 ವರ್ಷಗಳಲ್ಲಿ 3,737 ಶಾಂತಿಪಾಲಕರು ಮೃತಪಟ್ಟಿದ್ದು, ಪಡೆಗೆ ತಮ್ಮ ಯೋಧರನ್ನು ನಿಯೋಜಿಸುವ ಇತರ ದೇಶಗಳಿಗೆ ಹೋಲಿಸಿದರೆ ಭಾರತೀಯರ ಸಂಖ್ಯೆ(163) ಅತ್ಯಂತ ಹೆಚ್ಚಾಗಿದೆ ಎಂದು ವಿಶ್ವಸಂಸ್ಥೆಯು ತಿಳಿಸಿದೆ.

ಪ್ರಸಕ್ತ ಭಾರತವು ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಗೆ ಮಿಲಿಟರಿ ಮತ್ತು ಪೊಲೀಸ್ ಸಿಬ್ಬಂದಿ ಸೇವೆಯನ್ನು ಒದಗಿಸುತ್ತಿರುವ ಮೂರನೇ ಅತಿ ದೊಡ್ಡ ರಾಷ್ಟ್ರವಾಗಿದೆ. ಅಬೇ,ಸೈಪ್ರಸ್,ಹೈಟಿ,ಲೆಬನಾನ್,ಮಧ್ಯ ಪ್ರಾಚ್ಯ,ದಕ್ಷಿಣ ಸುಡಾನ್ ಮತ್ತು ಪೂರ್ವ ಸಹಾರಾಗಳಲ್ಲಿ ಶಾಂತಿಪಾಲನಾ ಪಡೆಯ ಕಾರ್ಯಾಚರಣೆಗಳಲ್ಲಿ 6,693 ಭಾರತೀಯರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೆ 2018,ಎ.30ಕ್ಕೆ ಇದ್ದಂತೆ ವಿಶ್ವಸಂಸ್ಥೆಯು ಭಾರತದ ಸೇವೆಗೆ ಪ್ರತಿಯಾಗಿ 92 ಮಿಲಿಯ ಡಾಲರ್‌ಗಳ ಪಾವತಿಯನ್ನು ಬಾಕಿಯಿರಿಸಿದೆ.

ವಿಶ್ವಸಂಸ್ಥೆಯು ಮಂಗಳವಾರ ವಿಶ್ವಾದ್ಯಂತ ಶಾಂತಿಪಾಲಕರ ಸೇವೆ ಮತ್ತು ತ್ಯಾಗಗಳನ್ನು ಗೌರವಿಸುವ ಮೂಲಕ ಶಾಂತಿಪಾಲನಾ ಪಡೆಯ ಅಂತರಾಷ್ಟ್ರೀಯ ದಿನವನ್ನು ಆಚರಿಸಿದೆ.

ಹಾಲಿ 124 ದೇಶಗಳ 96,000 ಯೋಧರು ಮತ್ತು ಪೊಲೀಸರು ಶಾಂತಿಪಾಲನಾ ಪಡೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರೊಂದಿಗೆ 15,000 ಅಂತರರಾಷ್ಟ್ರೀಯ ಮತ್ತು ರಾಷ್ಟ್ರೀಯ ನಾಗರಿಕ ಸಿಬ್ಬಂದಿಗಳು ಮತ್ತು 1,600 ವಿಶ್ವಸಂಸ್ಥೆ ಸ್ವಯಂಸೇವಕರೂ ತೊಡಗಿಕೊಂಡಿದ್ದಾರೆ.

ಮಾಲಿಯಲ್ಲಿ ವಿಶ್ವಸಂಸ್ಥೆ ಶಾಂತಿಪಾಲನಾ ಪಡೆಯ ಅಂತರರಾಷ್ಟ್ರೀಯ ದಿನಾಚರಣೆಯಲ್ಲಿ ಭಾಗವಹಿಸಿದ್ದ ಮಹಾ ಕಾರ್ಯದರ್ಶಿ ಆ್ಯಂಟೊನಿಯೊ ಗುಟೆರಸ್ ಅವರು,ವಿಶ್ವಸಂಸ್ಥೆಯ ಧ್ವಜದಡಿ ಕರ್ತವ್ಯ ನಿರ್ವಹಿಸಿ ಅಸಂಖ್ಯಾತ ಜೀವಗಳನ್ನು ರಕ್ಷಿಸಿರುವ ಹತ್ತು ಲಕ್ಷಕ್ಕೂ ಅಧಿಕ ಪುರುಷರು ಮತ್ತು ಮಹಿಳೆಯರಿಗೆ ನಮ್ಮ ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ. ಶಾಂತಿ ಪಾಲನೆಗಾಗಿ ಬಲಿದಾನ ಮಾಡಿರುವ 3,737 ಶಾಂತಿಪಾಲಕರಿಗೆ ನಮ್ಮ ನಮನಗಳು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News