ಕಥುವಾ ಬಾಲಕಿ ಅತ್ಯಾಚಾರ-ಹತ್ಯೆ ಪ್ರಕರಣ: ಪಠಾಣ್‌ಕೋಟ್‌ನಲ್ಲಿ ವಿಚಾರಣೆ ಆರಂಭ
ಪಠಾಣ್‌ಕೋಟ್, ಮೇ31: ಕಥುವಾದಲ್ಲಿ ನಡೆದ ಎಂಟು ವರ್ಷದ ಬಾಲಕಿಯ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ವಿಚಾರಣೆ ಗುರುವಾರದಂದು ಪಠಾಣ್‌ಕೋಟ್‌ನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಆರಂಭವಾಯಿತು. ಈ ವೇಳೆ ಪ್ರಕರಣದ ಎಂಟು ಆರೋಪಿಗಳನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಲಾಯಿತು.
ಪ್ರಕರಣದ ವಾದ ಮತ್ತು ಪ್ರತಿವಾದವನ್ನು ಆಲಿಸಿದ ನ್ಯಾಯಾಧೀಶರು, ಇದಕ್ಕೆ ಸಂಬಂಧಿಸಿದ ದೋಷಾರೋಪ, ಹೇಳಿಕೆಗಳು ಮತ್ತು ಇತರ ದಾಖಲೆಗಳಿರುವ ಕಡತಗಳನ್ನು ಜೂನ್ ನಾಲ್ಕರ ಒಳಗಾಗಿ ಉರ್ದು ಭಾಷೆಯಿಂದ ಇಂಗ್ಲಿಷ್‌ಗೆ ಭಾಷಾಂತರಿಸಿ ಆರೋಪಿಗಳ ಪರ ವಕೀಲರು ಸೇರಿದಂತೆ ಎಲ್ಲರಿಗೂ ನೀಡುವಂತೆ ಸೂಚಿಸಿದ್ದಾರೆ. ಪ್ರಕರಣದ ವಿಚಾರಣೆಯ ಹಿನ್ನೆಲೆಯಲ್ಲಿ ಪಠಾಣ್‌ಕೋಟ್‌ನ ನಾಲ್ಕು ಮಹಡಿಯ ನ್ಯಾಯಾಲಯಕ್ಕೆ ಅಭೂತಪೂರ್ವ ಭದ್ರತೆ ಒದಗಿಸಲಾಗಿತ್ತು. ಆರೋಪಿಗಳ ಪರವಾಗಿ ಮೂವತ್ತೊಂದು ವಕೀಲರು ವಾದಿಸುತ್ತಿದ್ದರೆ ಪ್ರಾಸಿಕ್ಯೂಶನ್ ಪರವಾಗಿ ಎಸ್.ಎಸ್ ಬಸ್ರಾ ನೇತೃತ್ವದ ತಂಡ ವಾದಿಸುತ್ತಿದೆ. ಜೊತೆಗೆ ನಾಲ್ಕು ವಕೀಲರ ತಂಡ ಸಂತ್ರಸ್ತೆಯ ಕುಟುಂಬವನ್ನು ಪ್ರತಿನಿಧಿಸುತ್ತಿದೆ.
ಜನವರಿಯಲ್ಲಿ ಅಲೆಮಾರಿ ಸಮುದಾಯಕ್ಕೆ ಸೇರಿದ ಎಂಟು ವರ್ಷದ ಬಾಲಕಿಯನ್ನು ಜಮ್ಮು ಮತ್ತು ಕಾಶ್ಮೀರದ ಕಥುವಾದಲ್ಲಿ ಅತ್ಯಾಚಾರ ನಡೆಸಿ ಹತ್ಯೆ ಮಾಡಲಾಗಿತ್ತು. ಆರೋಪಿಗಳ ಪರವಾಗಿ ವಕೀಲರು ಬೀದಿಗಿಳಿದು ಪ್ರತಿಭಟನೆ ನಡೆಸಿದ ಹಾಗೂ ಸಂತ್ರಸ್ತೆಯ ಕುಟುಂಬಕ್ಕೆ ಮತ್ತು ವಕೀಲರಿಗೆ ಬೆದರಿಕೆಯ ಹಿನ್ನೆಲೆಯಲ್ಲಿ ಈ ಪ್ರಕರಣದ ವಿಚಾರಣೆಯನ್ನು ಜಮ್ಮು ಮತ್ತು ಕಾಶ್ಮೀರದ ಹೊರಗೆ ಪಠಾಣ್‌ಕೋಟ್‌ನಲ್ಲಿ ನಡೆಸುವಂತೆ ಸರ್ವೋಚ್ಚ ನ್ಯಾಯಾಲಯ ಆದೇಶಿಸಿತ್ತು. ಪ್ರಕರಣದ ಎಂಟನೇ ಆರೋಪಿ ಅಪ್ರಾಪ್ತ ವಯಸ್ಕನಾಗಿರುವ ಕಾರಣ ಆತನ ವಿಚಾರಣೆ ಸಂಬಂಧಿತ ನ್ಯಾಯಾಲಯದಲ್ಲಿ ಪ್ರತ್ಯೇಕವಾಗಿ ನಡೆಯಲಿದೆ.