ಕುಪ್ವಾರದಲ್ಲಿ ಗುಂಡಿನ ಚಕಮಕಿ: ಇಬ್ಬರು ಉಗ್ರರು ಹತ
Update: 2018-05-31 20:53 IST
ಶ್ರೀನಗರ, ಮೇ 31: ಜಮ್ಮು ಹಾಗೂ ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಭದ್ರತಾ ಪಡೆ ಹಾಗೂ ಉಗ್ರರ ನಡುವೆ ಗುರುವಾರ ನಡೆದ ಗುಂಡಿನ ಕಾಳಗದಲ್ಲಿ ಇಬ್ಬರು ಉಗ್ರರು ಹತರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಿಲ್ಲೆಯ ಕ್ರಾಲ್‌ಗುಂಡ್ ಅರಣ್ಯ ಪ್ರದೇಶದಲ್ಲಿ ಗಸ್ತು ನಡೆಸುತ್ತಿದ್ದ ರಾಷ್ಟ್ರೀಯ ರೈಫಲ್ ಮೇಲೆ ಬುಧವಾರ ತಡ ರಾತ್ರಿ ಉಗ್ರರು ದಾಳಿ ನಡೆಸಿದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ‘‘ಉಗ್ರರು ನಡೆಸಿದ ದಾಳಿಗೆ ಸೇನೆ ಪ್ರತಿದಾಳಿ ನಡೆಸಿತು. ಗುರುವಾರ ಬೆಳಗ್ಗೆ ಶೋಧ ಕಾರ್ಯಾಚರಣೆ ಸಂದರ್ಭ ಇಬ್ಬರು ಉಗ್ರರ ಮೃತದೇಹಗಳು ಶಶ್ತ್ರಾಸ್ತ್ರಗಳೊಂದಿಗೆ ಪತ್ತೆಯಾದವು’’ ಎಂದು ಪೊಲೀಸರು ತಿಳಿಸಿದ್ದಾರೆ.