ಕೈರಾನಾದಲ್ಲಿ ಬಿಜೆಪಿಯನ್ನು ಮಣಿಸಿದ ಪ್ರತಿಪಕ್ಷಗಳ ಒಗ್ಗಟ್ಟು

Update: 2018-05-31 15:58 GMT

ಹೊಸದಿಲ್ಲಿ,ಮೇ 31: ದೇಶಾದ್ಯಂತ ನಾಲ್ಕು ಲೋಕಸಭಾ ಕ್ಷೇತ್ರಗಳು ಮತ್ತು 10 ವಿಧಾನಸಭಾ ಕ್ಷೇತ್ರಗಳಲ್ಲಿ ಮೇ 28ರಂದು ನಡೆದಿದ್ದ ಉಪ ಚುನಾವಣೆಗಳ ಫಲಿತಾಂಶಗಳು ಗುರುವಾರ ಪ್ರಕಟಗೊಂಡಿದ್ದು, ಕೇವಲ ಒಂದು ಲೋಕಸಭಾ ಕ್ಷೇತ್ರ ಮತ್ತು ಒಂದು ವಿಧಾನಸಭಾ ಕ್ಷೇತ್ರಗಳನ್ನು ಗೆದ್ದಿರುವ ಬಿಜೆಪಿಯು 2019ರಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಗಳ ಮುನ್ನ ಭಾರೀ ಹಿನ್ನಡೆಯನ್ನು ಅನುಭವಿಸಿದೆ. ಚುನಾವಣೆ ಮುಂದೂಡಲ್ಪಟ್ಟಿದ್ದ ಕರ್ನಾಟಕದ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರವನ್ನು ಕಾಂಗ್ರೆಸ್ ಗೆದ್ದುಕೊಂಡಿದೆ. ಪ್ರತಿಷ್ಠೆಯ ಕಣವಾಗಿದ್ದ ಉತ್ತರ ಪ್ರದೇಶದ ಕೈರಾನಾ ಲೋಕಸಭಾ ಕ್ಷೇತ್ರದಲ್ಲಿ ಪ್ರತಿಪಕ್ಷಗಳ ಒಗ್ಗಟ್ಟು ಬಿಜೆಪಿಯನ್ನು ಮಣಿಸುವಲ್ಲಿ ಯಶಸ್ವಿಯಾಗಿದ್ದು,ಇದು ಮುಂದಿನ ಲೋಕಸಭಾ ಚುನಾವಣೆಗೆ ಮುನ್ನ ಪ್ರತಿಪಕ್ಷಗಳು ಒಗ್ಗೂಡಬೇಕೆಂಬ ಪರಿಕಲ್ಪನೆಗೆ ಹೊಸ ಸ್ಫೂರ್ತಿಯನ್ನು ನೀಡಿದೆ.

ನಾಲ್ಕು ಲೋಕಸಭಾ ಕ್ಷೇತ್ರಗಳಾದ ಉತ್ತರ ಪ್ರದೇಶದ ಕೈರಾನಾ,ಮಹಾರಾಷ್ಟ್ರದ ಪಾಲ್ಘರ್ ಮತ್ತು ಭಂಡಾರಾ-ಗೊಂಡಿಯಾ ಹಾಗೂ ನಾಗಾಲ್ಯಾಂಡ್‌ಗಳ ಪೈಕಿ ಆರ್‌ಎಲ್‌ಡಿ,ಬಿಜೆಪಿ,ಎನ್‌ಸಿಪಿ ಮತ್ತು ಎನ್‌ಡಿಡಿಪಿ ತಲಾ ಒಂದು ಸ್ಥಾನಗಳನ್ನು ಗೆದ್ದಿವೆ.

ಉತ್ತರ ಪ್ರದೇಶದ ನೂರ್‌ಪುರ,ಪಂಜಾಬಿನ ಶಾಹಕೋಟ್,ಬಿಹಾರದ ಜೋಕಿಹಾಟ್,ಜಾರ್ಖಂಡ್‌ನ ಗೋಮಿಯಾ ಮತ್ತು ಸಿಲಿ,ಕೇರಳದ ಚೆಂಗನ್ನೂರು,ಮಹಾರಾಷ್ಟ್ರದ ಪಲುಸ್ ಕಡೇಗಾಂವ್, ಮೇಘಾಲಯದ ಅಂಪಾತಿ, ಉತ್ತರಾಖಂಡದ ಥರಾಲಿ ಮತ್ತು ಪಶ್ಚಿಮ ಬಂಗಾಳದ ಮಹೇಶತಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಉಪಚುನಾವಣೆಗಳು ನಡೆದಿದ್ದವು.

ಲೋಕಸಭಾ ಕ್ಷೇತ್ರಗಳ ಫಲಿತಾಂಶಗಳ ವಿವರ

ಕೈರಾನಾ: ಉತ್ತರ ಪ್ರದೇಶದ ಗೋರಖ್‌ಪುರ ಮತ್ತು ಫೂಲ್‌ಪುರ ಲೋಕಸಭಾ ಕ್ಷೇತ್ರಗಳನ್ನು ಈಗಾಗಲೇ ಕಳೆದುಕೊಂಡಿರುವ ಬಿಜೆಪಿ ತೀವ್ರ ಹಣಾಹಣಿಯ ಬಳಿಕ ಕೈರಾನಾ ಲೋಕಸಭಾ ಕ್ಷೇತ್ರವನ್ನು ಮಹಾ ಮೈತ್ರಿಕೂಟದ ಮಡಿಲಿಗೆ ಒಪ್ಪಿಸಿದೆ. ಆರ್‌ಎಲ್‌ಡಿ ಅಭ್ಯರ್ಥಿ ತಬಸ್ಸುಮ್ ಹಸನ್ ಅವರು ತನ್ನ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಮೃಗಾಂಕಾ ಸಿಂಗ್ ಅವರನ್ನು 55,000ಕ್ಕೂ ಅಧಿಕ ಮತಗಳ ಅಂತರದಿಂದ ಪರಾಭವಗೊಳಿಸಿದ್ದಾರೆ. ಅನಾರೋಗ್ಯದಿಂದಾಗಿ ಬಿಜೆಪಿ ಸಂಸದ ಹುಕುಂ ಸಿಂಗ್ ಅವರ ನಿಧನದಿಂದಾಗಿ ಈ ಕ್ಷೇತ್ರವು ತೆರವಾಗಿತ್ತು. ಕೋಮು ಧ್ರುವೀಕರಣ ಮತ್ತು ಅನುಕಂಪದ ಮತಗಳ ಲಾಭವೆತ್ತಲು ಬಿಜೆಪಿಯು ಸಿಂಗ್ ಅವರ ಪತ್ನಿ ಮೃಗಾಂಕಾರನ್ನು ತನ್ನ ಅಭ್ಯರ್ಥಿಯಾಗಿ ಕಣಕ್ಕಿಳಿಸಿತ್ತು.

ಪಾಲ್ಘರ್: ಹಾಲಿ ಸಂಸದರಾಗಿದ್ದ ಚಿಂತಾಮಣ ವನಗಾ ಅವರ ನಿಧನದಿಂದ ತೆರವಾಗಿದ್ದ ಪಾಲ್ಘರ್ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ರಾಜೇಂದ್ರ ಗಾವಿತ್ ಅವರು ಶಿವಸೇನೆಯ ಶ್ರೀನಿವಾಸ ವನಗಾ ವಿರುದ್ಧ ಗೆಲುವು ಸಾಧಿಸಿದ್ದು, ಈ ಕ್ಷೇತ್ರವನ್ನು ಉಳಿಸಿಕೊಳ್ಳುವಲ್ಲಿ ಪಕ್ಷವು ಯಶಸ್ವಿಯಾಗಿದೆ.

ಭಂಡಾರಾ-ಗೊಂಡಿಯಾ: ಹಾಲಿ ಬಿಜೆಪಿ ಸಂಸದ ನಾನಾ ಪಟೋಳೆ ಅವರ ರಾಜೀನಾಮೆಯಿಂದ ತೆರವಾಗಿದ್ದ ಭಂಡಾರಾ-ಗೊಂಡಿಯಾ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಬೆಂಬಲವನ್ನು ಪಡೆದಿದ್ದ ಎನ್‌ಸಿಪಿ ಅಭ್ಯರ್ಥಿ ಮಧುಕರ ಕುಕ್ಡೆ ಅವರು ವಿಜಯಿಯಾಗಿದ್ದಾರೆ. ಇಲ್ಲಿ ಬಿಜೆಪಿ ಮತ್ತು ಎನ್‌ಸಿಪಿ ನಡುವೆ ನೇರ ಹಣಾಹಣಿ ಏರ್ಪಟ್ಟಿತ್ತು.

ನಾಗಾಲ್ಯಾಂಡ್: ರಾಜ್ಯದ ಏಕೈಕ ಲೋಕಸಭಾ ಕ್ಷೇತ್ರದಲ್ಲಿ ನಡೆದ ಉಪಚುನಾವಣೆಯಲ್ಲಿ ಎನ್‌ಡಿಪಿಪಿಯ ತೊಖೆಲೊ ಅವರು ಎನ್‌ಪಿಎಫ್‌ನ ಸಿ.ಅಪೋಕ್ ಜಮೀರ್ ಅವರನ್ನು 1,55,000ಕ್ಕೂ ಅಧಿಕ ಮತಗಳಿಂದ ಪರಾಭವಗೊಳಿಸಿದ್ದಾರೆ. ಸಂಸದರಾಗಿದ್ದ ಹಾಲಿ ನಾಗಾಲ್ಯಾಂಡ್ ಮುಖ್ಯಮಂತ್ರಿ ನೈಫ್ಯು ರಿಯೊ ಅವರ ರಾಜೀನಾಮೆಯಿಂದ ಈ ಕ್ಷೇತ್ರ ತೆರವಾಗಿತ್ತು.

ವಿಧಾನಸಭಾ ಕ್ಷೇತ್ರಗಳ ಫಲಿತಾಂಶಗಳ ವಿವರ:

ಶಾಹಕೋಟ್: ಪಂಜಾಬಿನ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಹರದೇವ ಸಿಂಗ್ ಲಾಡಿ ಅವರು ತನ್ನ ನಿಕಟ ಪ್ರತಿಸ್ಪರ್ಧಿ ಶಿರೋಮಣಿ ಅಕಾಲಿ ದಳದ ನಾಯಿಬ್ ಸಿಂಗ್ ಅವರನ್ನು 38,801 ಮತಗಳ ಅಂತರದಿಂದ ಸೋಲಿಸಿ ವಿಜಯವನ್ನು ಸಾಧಿಸಿದ್ದಾರೆ. ಅಕಾಲಿದಳದ ಶಾಸಕ ಅಜಿತಸಿಂಗ್ ಕೊಹರ್ ಅವರ ನಿಧನದಿಂದಾಗಿ ಈ ಕ್ಷೇತ್ರ ತೆರವಾಗಿತ್ತು.

ಗೋಮಿಯಾ: ಜೆಎಂಎಂ ಅಭ್ಯರ್ಥಿ ಬಬಿತಾ ದೇವಿ ಅವರು ತನ್ನ ಸಮೀಪದ ಪ್ರತಿಸ್ಪರ್ಧಿ ಎಜೆಎಸ್‌ಯು ಅಭ್ಯರ್ಥಿ ಲಂಬೋದರ ಮಹತೋ ಅವರನ್ನು 1,300 ಮತಗಳ ಅಂತರದಿಂದ ಸೋಲಿಸಿದ್ದಾರೆ. ಬಿಜೆಪಿಯ ಮಾಧವಲಾಲ ಸಿಂಗ್ ಅವರು ತೃತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ಜೆಎಂಎಂ ಶಾಸಕ ಯೋಗೇಂದ್ರ ಮಹತೋ ಅವರನ್ನು ಪ್ರಕರಣವೊಂದರಲ್ಲಿ ದೋಷಿಯೆಂದು ನ್ಯಾಯಾಲಯವು ಘೋಷಿಸಿದ್ದರಿಂದ ಈ ಕ್ಷೇತ್ರವು ತೆರವಾಗಿತ್ತು.

ಸಿಲಿ: ತನ್ನ ಶಾಸಕ ಅಮಿತ್ ಮಹತೋ ಅವರನ್ನು ನ್ಯಾಯಾಲಯವು ದೋಷಿಯೆಂದು ಘೋಷಿಸಿದ ಬಳಿಕ ತೆರವಾಗಿದ್ದ ಸಿಲಿ ಕ್ಷೇತ್ರವನ್ನು ಜೆಎಂಎಂ ಉಳಿಸಿಕೊಂಡಿದೆ. ಅದರ ಅಭ್ಯರ್ಥಿ ಸೀಮಾ ಮಹತೋ ಅವರು ಎಜೆಎಸ್‌ಯು ಅಭ್ಯರ್ಥಿ ಹಾಗೂ ಜಾರ್ಖಂಡ್‌ನ ಮಾಜಿ ಉಪ ಮುಖ್ಯಮಂತ್ರಿ ಸುದೇಶ ಮಹತೋ ಅವರನ್ನು 13,000 ಮತಗಳ ಅಂತರದಿಂದ ಪರಾಭವಗೊಳಿಸಿದ್ದಾರೆ.

ಥರಾಲಿ: ಥರಾಲಿ ವಿಧಾನಸಭಾ ಕ್ಷೇತ್ರವನ್ನು ಉಳಿಸಿಕೊಳ್ಳುವಲ್ಲಿ ಬಿಜೆಪಿಯು ಯಶಸ್ವಿಯಾಗಿದೆ. ಅದರ ಅಭ್ಯರ್ಥಿ ಮುನ್ನಿದೇವಿ ಶಾ ಅವರು ತನ್ನ ನಿಕಟ ಎದುರಾಳಿ ಕಾಂಗ್ರೆಸ್‌ನ ಜೀತರಾಮ ಅವರನ್ನು 1,900ಕ್ಕೂ ಅಧಿಕ ಮತಗಳ ಅಂತರದಿಂದ ಸೋಲಿಸಿ ಗೆಲುವಿನ ನಗು ಬೀರಿದ್ದಾರೆ. ಹಾಲಿ ಶಾಸಕರಾಗಿದ್ದ ಮುನ್ನಿದೇವಿ ಪತಿ ಮಗನಲಾಲ್ ಶಾ ಅವರ ನಿಧನದಿಂದಾಗಿ ಈ ಕ್ಷೇತ್ರವು ತೆರವಾಗಿತ್ತು.

ಜೋಕಿಹಾಟ್: ಆರ್‌ಜೆಡಿ ಅಭ್ಯರ್ಥಿ ಶಾನವಾಝ್ ಆಲಂ ಅವರು ಜೆಡಿಯು ಅಭ್ಯರ್ಥಿ ಮುರ್ಷಿದ್ ಆಲಂ ಅವರನ್ನು 41,000ಕ್ಕೂ ಅಧಿಕ ಮತಗಳ ಭಾರೀ ಅಂತರದಿಂದ ಪರಾಭವಗೊಳಿಸಿದ್ದಾರೆ. ಶಾನವಾಝ್ ಅವರ ಸೋದರರಾಗಿರುವ ಶಾಸಕ ಸರ್ಫರಾಜ್ ಆಲಂ ಅವರು ಈ ವರ್ಷದ ಮಾರ್ಚ್‌ನಲ್ಲಿ ಆರ್‌ಜೆಡಿ ಟಿಕೆಟ್‌ನಲ್ಲಿ ಅರಾರಿಯಾ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಗೆದ್ದ ನಂತರ ಜೋಕಿಹಾಟ್ ವಿಧಾನಸಭಾ ಕ್ಷೇತ್ರವು ತೆರವಾಗಿತ್ತು. ಆಲಂ ಸೋದರರ ತಂದೆ,ಆರ್‌ಜೆಡಿ ಸಂಸದ ಮುಹಮ್ಮದ್ ತಸ್ಲಿಮುದ್ದೀನ್ ಅವರ ನಿಧನದಿಂದಾಗಿ ಅರಾರಿಯಾ ಲೋಕಸಭಾ ಕ್ಷೇತ್ರದಲ್ಲಿ ಉಪಚುನಾವಣೆ ನಡೆದಿತ್ತು.

ಮಹೇಶತಲಾ: ತೃಣಮೂಲ ಕಾಂಗ್ರೆಸ್ ಅಭ್ಯರ್ಥಿ ದುಲಾಲ ದಾಸ್ ಅವರು ತನ್ನ ನಿಕಟ ಪ್ರತಿಸ್ಪರ್ಧಿ ಬಿಜೆಪಿಯ ಸುಜಿತ್ ಘೋಷ್ ವಿರುದ್ಧ 62,831 ಮತಗಳ ಭಾರೀ ಅಂತರದೊಂದಿಗೆ ಜಯ ಸಾಧಿಸಿದ್ದಾರೆ. ಕಾಂಗ್ರೆಸ್ ಬೆಂಬಲದೊಂದಿಗೆ ಸ್ಪರ್ಧಿಸಿದ್ದ ಎಡರಂಗದ ಅಭ್ಯರ್ಥಿ ಪ್ರಭಾತ್ ಚೌಧರಿ ಅವರು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ಟಿಎಂಸಿ ಶಾಸಕಿ ಕಸ್ತೂರಿ ದಾಸ್ ಅವರ ನಿಧನದಿಂದಾಗಿ ಈ ಕ್ಷೇತ್ರವು ತೆರವಾಗಿದ್ದು, ದುಲಾಲ್ ದಾಸ್ ಅವರ ಪತಿಯಾಗಿದ್ದಾರೆ.

ನೂರ್‌ಪುರ: ಎಸ್‌ಪಿ ಅಭ್ಯರ್ಥಿ ನಯೀಮುಲ್ ಹಸನ್ ಅವರು ಬಿಜೆಪಿಯ ಅವನಿ ಸಿಂಗ್ ಅವರನ್ನು 6,211 ಮತಗಳ ಅಂತರದಿಂದ ಸೋಲಿಸಿದ್ದಾರೆ. ಹಾಲಿ ಶಾಸಕ ಬಿಜೆಪಿಯ ಲೋಕೇಂದರ್ ಸಿಂಗ್ ಅವರು ಅಪಘಾತದಲ್ಲಿ ನಿಧನರಾಗಿದ್ದರಿಂದ ಈ ಕ್ಷೇತ್ರವು ತೆರವಾಗಿತ್ತು.

ಚೆಂಗನ್ನೂರು: ಚೆಂಗನ್ನೂರು ವಿಧಾನಸಭಾ ಕ್ಷೇತ್ರದಲ್ಲಿ ಸಿಪಿಎಂ ನೇತೃತ್ವದ ಎಲ್‌ಡಿಎಫ್ ಭಾರೀ ವಿಜಯವನ್ನು ದಾಖಲಿಸಿದೆ. ಪಕ್ಷದ ಅಭ್ಯರ್ಥಿ ಸಾಜಿ ಚೆರಿಯನ್ ಅವರು ನಿಕಟ ಪ್ರತಿಸ್ಪರ್ಧಿ ಯುಡಿಎಫ್‌ನ ವಿಜಯ ಕುಮಾರ(ಕಾಂಗ್ರೆಸ್) ಅವರನ್ನು 20,956 ಮತಗಳಿಂದ ಪರಾಭವಗೊಳಿಸಿ ವಿಜಯಮಾಲೆಯನ್ನು ಧರಿಸಿದ್ದಾರೆ. ಬಿಜೆಪಿ ನಾಯಕ ಹಾಗೂ ಎನ್‌ಡಿಎ ಅಭ್ಯರ್ಥಿ ಪಿ.ಎಸ್.ಶ್ರೀಧರನ್ ಪಿಳ್ಳೆ ಅವರು ಮೂರನೇ ಸ್ಥಾನದಲ್ಲಿದ್ದಾರೆ. ಚೆರಿಯನ್ ಅವರಿಗೆ 67,303,ವಿಜಯ ಕುಮಾರ್‌ಗೆ 46,347 ಮತ್ತು ಪಿಳ್ಳೆ ಅವರಿಗೆ 35,270 ಮತಗಳು ಬಿದ್ದಿವೆ. ಸಿಪಿಎಂ ಶಾಸಕ ಕೆ.ಕೆ.ರಾಮಚಂದ್ರನ್ ನಾಯರ್ ಅವರ ನಿಧನದಿಂದಾಗಿ ಈ ಕ್ಷೇತ್ರವು ತೆರವುಗೊಂಡಿತ್ತು.

ಪಲುಸ್ ಕಡೇಗಾಂವ್: ಈ ಕ್ಷೇತ್ರದ ಶಾಸಕರಾಗಿದ್ದ ಮಾಜಿ ಸಚಿವ ಪತಂಗರಾವ್ ಕದಂ ಅವರ ನಿಧನದಿಂದಾಗಿ ನಡೆದ ಉಪಚುನಾವಣೆಯಲ್ಲಿ ಅವರ ಪುತ್ರ ವಿಶ್ವಜಿತ ಕದಂ ಅವರ ಗೆಲುವಿನ ಔಪಚಾರಿಕತೆ ಮಾತ್ರ ಬಾಕಿಯುಳಿದಿತ್ತು. ಕಣದಲ್ಲಿದ್ದ ಇತರ ಎಲ್ಲ ಅಭ್ಯರ್ಥಿಗಳು ತಮ್ಮ ನಾಮಪತ್ರಗಳನ್ನು ಹಿಂದೆಗೆದುಕೊಂಡಿದ್ದರಿಂದ ಅವರು ಅವಿರೋಧ ಆಯ್ಕೆಯಾಗಿದ್ದರು.

ಅಂಪಾತಿ: 2018ರ ಮೇಘಾಲಯ ವಿಧಾನಸಭಾ ಚುನಾವಣೆಯಲ್ಲಿ ಅಂಪಾತಿ ಮತ್ತು ಸಾಂಗ್‌ಸಕ್ ಕ್ಷೇತ್ರಗಳಿಂದ ಗೆದ್ದಿದ್ದ ಮೇಘಾಲಯದ ಮಾಜಿ ಮುಖ್ಯಮಂತ್ರಿ ಮುಕುಲ್ ಸಂಗ್ಮಾ ಅವರು ಬಳಿಕ ಅಂಪಾತಿ ಶಾಸಕತ್ವಕ್ಕೆ ರಾಜೀನಾಮೆ ನೀಡಿದ್ದರಿಂದ ತೆರವಾಗಿದ್ದ ಅಂಪಾತಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಅವರ ಪುತ್ರಿ ಮಿಯಾನಿ ಡಿ ಶಿರಾ ಅವರು ನಿಕಟ ಪ್ರತಿಸ್ಪರ್ಧಿ ಎನ್‌ಪಿಪಿಯ ಕ್ಲೆಮೆಂಟ್ ಜಿ.ಮೊಮಿನ್ ಅವರನ್ನು 3,000ಕ್ಕೂ ಅಧಿಕ ಮತಗಳ ಅಂತರದಿಂದ ಸೋಲಿಸಿದ್ದಾರೆ. ಇದರೊಂದಿಗೆ ಮೇಘಾಲಯ ವಿಧಾನಸಭೆಯಲ್ಲಿ ಕಾಂಗ್ರೆಸ್ ಅತಿ ದೊಡ್ಡ ಪಕ್ಷವಾಗಿ ಮೂಡಿಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News