ವಿಮಾನ ಖರೀದಿಯಲ್ಲಿ ಕಿಕ್‌ಬ್ಯಾಕ್ ಆರೋಪ: ಭದ್ರತಾ ಸಚಿವಾಲಯದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ರಾಹುಲ್ ಗಾಂಧಿ ಆಗ್ರಹ

Update: 2018-05-31 16:34 GMT

ಹೊಸದಿಲ್ಲಿ, ಮೇ31: ವಿಮಾನ ಪರಿಕರಗಳ ಒಪ್ಪಂದದಲ್ಲಿ ಭಾರತದ ಭದ್ರತಾ ಸಚಿವಾಲಯದ ಅಧಿಕಾರಿಗಳು ಕೋಟಿ ರೂ.ಗೂ ಅಧಿಕ ಮೊತ್ತದ ಕಿಕ್‌ಬ್ಯಾಕ್ ಪಡೆದುಕೊಂಡಿದ್ದಾರೆ ಎಂಬ ಆರೋಪದ ಬಗ್ಗೆ ಉಕ್ರೇನ್ ತನಿಖೆ ನಡೆಸುತ್ತಿದೆ ಎಂಬ ಮಾಧ್ಯಮ ವರದಿಗಳನ್ನು ಉಲ್ಲೇಖಿಸಿರುವ ರಾಹುಲ್ ಗಾಂಧಿ ಭದ್ರತಾ ಸಚಿವಾಲಯದ ಭ್ರಷ್ಟ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿಗೆ ಆಗ್ರಹಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ಭದ್ರತಾ ಸಚಿವಾಲಯದ ಅಧಿಕಾರಿಗಳು ಎಎನ್32 ಒಪ್ಪಂದದ ಮೂಲಕ ಉಕ್ರೇನ್ ಸರಕಾರದಿಂದ ದುಬೈ ಮುಖಾಂತರ ಮಿಲಿಯನ್‌ಗಟ್ಟಲೆ ಡಾಲರ್ ಕಿಕ್‌ಬ್ಯಾಕ್ ಪಡೆದುಕೊಂಡಿದ್ದಾರೆ. ಈ ಕುರಿತು ನಮ್ಮ ಸ್ವಯಂಘೋಷಿತ ಕಾವಲುಗಾರನಾಗಿರುವ ಮೋದಿ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ. ಉಕ್ರೇನ್ ಸರಕಾರವು ಎಎನ್ 32 ವಿಮಾನದ ಪರಿಕರಗಳನ್ನು ಖರೀದಿಸುತ್ತಿರುವ ಭಾರತದ ಜೊತೆಗಿನ ಒಪ್ಪಂದಕ್ಕಾಗಿ 17.55 ಕೋಟಿ ರೂ. ಕಿಕ್‌ಬ್ಯಾಕ್ ಪಾವತಿಸಿದೆ ಎಂದು ಆರೋಪಿಸಲಾಗಿದೆ. ಈ ಭ್ರಷ್ಟಾಚಾರದಲ್ಲಿ ಭಾರತೀಯ ಭದ್ರತಾ ಸಚಿವಾಲಯದ ಅಧಿಕಾರಿಗಳೂ ಶಾಮೀಲಾಗಿದ್ದಾರೆ ಎಂದು ಭ್ರಷ್ಟಾಚಾರ ನಿಗ್ರಹ ಪಡೆ ಅನುಮಾನ ವ್ಯಕ್ತಪಡಿಸಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News