2019ರ ಚುನಾವಣೆ ನಿರ್ವಹಿಸಲು ಆಯೋಗಕ್ಕೆ ಅನುಭವದ ಕೊರತೆಯಿದೆ: ಮಾಜಿ ಮುಖ್ಯ ಚುನಾವಣಾ ಆಯುಕ್ತರ ಆತಂಕ

Update: 2018-05-31 16:12 GMT

ಹೊಸದಿಲ್ಲಿ,ಮೇ 31: ತುಲನಾತ್ಮಕವಾಗಿ ಕಡಿಮೆ ಅನುಭವಿಗಳಾಗಿರುವ ಚುನಾವಣಾ ಆಯೋಗದ ವರಿಷ್ಠರು ಮುಂದಿನ ವರ್ಷದ ಲೋಕಸಭಾ ಚುನಾವಣೆಯನ್ನು ನಡೆಸುವ ಬಗ್ಗೆ ಕೆಲವು ಮಾಜಿ ಮುಖ್ಯ ಚುನಾವಣಾ ಆಯುಕ್ತರು ಕಳವಳ ವ್ಯಕ್ತಪಡಿಸಿದ್ದಾರೆ. ಆಯೋಗದ ನಡವಳಿಕೆ ಬಗ್ಗೆ ಶಂಕೆಗಳು ವ್ಯಕ್ತವಾಗಿರುವ ಸಂದರ್ಭದಲ್ಲಿಯೇ ಮಾಜಿ ಮುಖ್ಯಸ್ಥರು ಈ ಆತಂಕವನ್ನು ಹೊರಗೆಡವಿದ್ದಾರೆ.

ಮುಖ್ಯ ಚುನಾವಣಾ ಆಯುಕ್ತ ಒ.ಪಿ.ರಾವತ್ ಮತ್ತು ಇಬ್ಬರು ಚುನಾವಣಾ ಆಯುಕ್ತರಾದ ಸುನಿಲ್ ಅರೋರಾ ಮತ್ತು ಅಶೋಕ್ ಲವಾಸಾ ಅವರು ಮೇ 21ರಂದು ಮಾಜಿ ಮುಖ್ಯ ಚುನಾವಣಾ ಆಯುಕ್ತರೊಂದಿಗೆ ನಡೆಸಿದ ರಹಸ್ಯಸಭೆಯಲ್ಲಿ ಈ ಕಳವಳಗಳು ಪ್ರಸ್ತಾಪಗೊಂಡಿದ್ದವು.

ಈ ವರ್ಷದ ಡಿ.18ರಂದು ರಾವತ್ ಅವರು ನಿವೃತ್ತರಾಗುತ್ತಿದ್ದು,ಅರೋರಾ ಅವರು ಮುಖ್ಯ ಚುನಾವಣಾ ಆಯುಕ್ತರಾಗಿ ಪದೋನ್ನತಿಯನ್ನು ಹೊಂದಲಿದ್ದಾರೆ. ಸಾರ್ವತ್ರಿಕ ಚುನಾವಣೆಗಳು ನಡೆಯುವಾಗ ಅವರು ಕೇವಲ 10 ವಿಧಾನಸಭಾ ಚುನಾವಣೆಗಳ ಉಸ್ತುವಾರಿಯ ಅನುಭವವನ್ನು ಹೊಂದಿರುತ್ತಾರೆ. ಇದು 2009 ಮತ್ತು 2014ರಲ್ಲಿ ಅವರ ಪೂರ್ವಾಧಿಕಾರಿಗಳು ಹೊಂದಿದ್ದ ಅನುಭವದ ಅರ್ಧಕ್ಕಿಂತ ಕಡಿಮೆಯಾಗುತ್ತದೆ. ಅವರು ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಚುನಾವಣಾ ಆಯೋಗಕ್ಕೆ ನೇಮಕಗೊಂಡಿದ್ದು,2019ರ ಚುನಾವಣೆಯ ವೇಳೆಗೆ ಎರಡು ವರ್ಷಗಳ ಅನುಭವವನ್ನೂ ಹೊಂದಿರುವುದಿಲ್ಲ. ಈ ವರ್ಷದ ಜನವರಿಯಲ್ಲಿ ಆಯೋಗವನ್ನು ಸೇರಿರುವ ಲವಾಸಾ ಅವರು 2019ರ ಚುನಾವಣೆಯ ವೇಳೆಗೆ ಅರೋರಾಕ್ಕಿಂತ ಕಡಿಮೆ ಅನುಭವಿಯಾಗಿರುತ್ತಾರೆ. ಇನ್ನೋರ್ವ ಚುನಾವಣಾ ಆಯುಕ್ತರು ಡಿಸೆಂಬರ್‌ನಲ್ಲಿ ನೇಮಕಗೊಳ್ಳಲಿದ್ದಾರೆ.

ಕಳೆದ ವಾರ ನಡೆದ ಸಭೆಯಲ್ಲಿ ಮಾಜಿ ಮುಖ್ಯ ಚುನಾವಣಾ ಆಯುಕ್ತರಾದ ಎಂ.ಎಸ್.ಗಿಲ್, ಜೆ.ಎಂ.ಲಿಂಗ್ಡೊ, ಟಿ.ಎಸ್.ಕೃಷ್ಣಮೂರ್ತಿ, ಬಿ.ಬಿ.ಟಂಡನ್, ಎಸ್.ವೈ.ಕುರೇಷಿ, ವಿ.ಎಸ್.ಸಂಪತ್,ಎಚ್.ಎಸ್.ಬ್ರಹ್ಮ,ನಸೀಮ್ ಜೈದಿ ಮತ್ತು ಮಾಜಿ ಚುನಾವಣಾ ಆಯುಕ್ತ ಜಿವಿಜಿ ಕೃಷ್ಣಮೂರ್ತಿ ಮತ್ತಿತರರು ಭಾಗವಹಿಸಿದ್ದರು.

ಕೆಲವೇ ತಿಂಗಳುಗಳು ಅಥವಾ ಒಂದು ವರ್ಷದ ಅನುಭವದೊಂದಿಗೆ ಚುನಾವಣೆಗಳನ್ನು ನಡೆಸುವುದು ಕಠಿಣವಾಗುತ್ತದೆ ಎಂದು ಕೆಲವು ಮಾಜಿ ಮುಖ್ಯ ಚುನಾವಣಾ ಆಯುಕ್ತರು ಸಭೆಯಲ್ಲಿ ಕಳವಳಗಳನ್ನು ವ್ಯಕ್ತಪಡಿಸಿದರು. ರಾಷ್ಟ್ರೀಯ ಚುನಾವಣೆಗಳನ್ನು ನಡೆಸಲು ಮೂರರಿಂದ ಐದು ವರ್ಷಗಳ ಅನುಭವದ ಅಗತ್ಯವಿದೆ ಎಂದು ಓರ್ವ ಮಾಜಿ ಮುಖ್ಯ ಚುನಾವಣಾ ಆಯುಕ್ತರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News