×
Ad

ಗಾಯಕ ಝುಬೀನ್ ಗರ್ಗ್‌ಗೆ ‘ಪೆಟಾ’ ಪುರಸ್ಕಾರ

Update: 2018-05-31 22:01 IST

ಗುವಾಹಟಿ, ಮೇ 31: ಪ್ರಾಣಿಗಳ ಹಕ್ಕುಗಳಿಗಾಗಿ ಕಾರ್ಯನಿರ್ವಹಿಸುವ ‘ಪೀಪಲ್ ಫಾರ್ ದಿ ಎಥಿಕಲ್ ಟ್ರೀಟ್‌ಮೆಂಟ್ ಆಫ್ ಎನಿಮಲ್ಸ್ (ಪೆಟಾ)’ ನೀಡುವ ‘ಹೀರೊ ಟು ಎನಿಮಲ್ಸ್’ ಪುರಸ್ಕಾರಕ್ಕೆ ಅಸ್ಸಾಂನ ಖ್ಯಾತ ಗಾಯಕ ಝುಬೀನ್ ಗರ್ಗ್‌ರನ್ನು ಆಯ್ಕೆ ಮಾಡಲಾಗಿದೆ ಎಂದು ವರದಿ ತಿಳಿಸಿದೆ.

ಅಸ್ಸಾಂನ ಕಾಮಾಖ್ಯ ದೇವಸ್ಥಾನದಲ್ಲಿ ಬಿಹು ಹಬ್ಬದ ಸಂದರ್ಭ ಪ್ರಾಣಿಗಳ ಬಲಿ ಕೊಡುವ ಸಂಪ್ರದಾಯವನ್ನು ವಿರೋಧಿಸಿದ್ದ ಝುಬೀನ್, ಈ ಕೆಟ್ಟ ಸಂಪ್ರದಾಯಕ್ಕೆ ತಿಲಾಂಜಲಿ ನೀಡುವಂತೆ ಜನರಿಗೆ ಮನವಿ ಮಾಡಿಕೊಂಡಿದ್ದರು. ಇದಕ್ಕೆ ತೀವ್ರ ಆಕ್ಷೇಪ ಸೂಚಿಸಿದ್ದ ದೇವಸ್ಥಾನದ ಅರ್ಚಕರು, ತಕ್ಷಣ ಕ್ಷಮೆ ಯಾಚಿಸಬೇಕೆಂದು ತಿಳಿಸಿದ್ದರು.

 ಆದರೆ ಕ್ಷಮೆ ಯಾಚಿಸಲು ನಿರಾಕರಿಸಿದ್ದ ಝುಬೀನ್, ದೇವರಿಗೆ ಪ್ರಾಣಿ ಬಲಿ ನೀಡಬಾರದು ಎಂಬುದು ತನ್ನ ನಂಬಿಕೆಯಾಗಿದ್ದು ಪ್ರಾಣಿಗಳ ಮೇಲೆ ನಡೆಯುವ ಕ್ರೌರ್ಯವನ್ನು ತಾನು ಸಹಿಸುವುದಿಲ್ಲ ಎಂದು ಪ್ರತಿಕ್ರಿಯಿಸಿದ್ದರು. ಎಲ್ಲಾ ಧರ್ಮಗಳೂ ಸಹಾನುಭೂತಿಗೆ ಕರೆ ನೀಡುತ್ತವೆ. ಪ್ರಾಣಿಗಳನ್ನು ಆಯುಧದಿಂದ ಕಡಿದು ಕೊಲ್ಲುವುದು ನಿರ್ದಯ ಕ್ರೌರ್ಯವಾಗಿದೆ. ಈ ಹಿನ್ನೆಲೆಯಲ್ಲಿ ಪ್ರಾಣಿ ಬಲಿಯನ್ನು ಕೊನೆಗೊಳಿಸಬೇಕೆಂಬ ಕಳಕಳಿಗೆ ಧ್ವನಿಯಾದ ಝುಬೀನ್‌ರನ್ನು ಶ್ಲಾಘಿಸುತ್ತೇವೆ ಎಂದು ‘ಪೆಟಾ’ದ ಏಶ್ಯ ವಿಭಾಗದ ನಿರ್ದೇಶಕ ಸಚಿನ್ ಬಂಗೇರ ತಿಳಿಸಿದ್ದಾರೆ. ಝುಬೀನ್ ಗರ್ಗ್ ಗಾಯನದ ಜೊತೆ ಸಿನೆಮ ನಿರ್ಮಾಪಕ, ನಟ, ನಿರ್ದೇಶಕ, ಗೀತ ರಚನೆಗಾರನಾಗಿಯೂ ಪ್ರಸಿದ್ಧಿ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News