ಬ್ಯಾಂಕ್ ಮುಷ್ಕರ ಸಂಪೂರ್ಣ ಯಶಸ್ವಿ: ಯೂನಿಯನ್ ಹೇಳಿಕೆ,
ಹೊಸದಿಲ್ಲಿ, ಮೇ 31: ಬ್ಯಾಂಕ್ ನೌಕರರ ವೇತನವನ್ನು ಕೇವಲ ಶೇ.2ರಷ್ಟು ಹೆಚ್ಚಿಸುವ ಪ್ರಸ್ತಾವವನ್ನು ವಿರೋಧಿಸಿ ದೇಶದಾದ್ಯಂತ ಬ್ಯಾಂಕ್ ನೌಕರರು ನಡೆಸುತ್ತಿರುವ ಮುಷ್ಕರದ ಎರಡನೇ ಮತ್ತು ಕೊನೆಯ ದಿನವಾದ ಗುರುವಾರ ಬ್ಯಾಂಕಿಂಗ್ ಸೇವೆಗಳಿಗೆ ತೀವ್ರ ತೊಂದರೆಯಾಗಿದೆ. ಶುಕ್ರವಾರದಿಂದ ಬ್ಯಾಂಕಿಂಗ್ ವ್ಯವಹಾರ ಸಹಜಸ್ಥಿತಿಗೆ ಮರಳುವ ನಿರೀಕ್ಷೆಯಿದೆ. ಬ್ಯಾಂಕ್ ನೌಕರರ ಮುಷ್ಕರ ಯಶಸ್ವಿಯಾಗಿದೆ. ಸುಮಾರು 10 ಲಕ್ಷ ನೌಕರರು ಉತ್ಸಾಹದಿಂದ ಪಾಲ್ಗೊಂಡಿದ್ದಾರೆ ಎಂದು ಬ್ಯಾಂಕಿಂಗ್ ಒಕ್ಕೂಟಗಳ ಸಂಯುಕ್ತ ವೇದಿಕೆ (ಯುಎಫ್‌ಬಿಯು) ತಿಳಿಸಿದೆ.
ಯುಎಫ್‌ಬಿಯು ಬ್ಯಾಂಕಿಂಗ್ ಕ್ಷೇತ್ರದ 9 ಯೂನಿಯನ್‌ಗಳ ಸಂಯುಕ್ತ ವೇದಿಕೆಯಾಗಿದೆ. ಮುಂಬೈ, ದಿಲ್ಲಿ, ಕೋಲ್ಕತಾ, ಚೆನ್ನೈ, ಬೆಂಗಳೂರು, ಲಕ್ನೊ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಬ್ಯಾಂಕ್ ನೌಕರರು ಬ್ಯಾಂಕ್‌ಗಳ ಶಾಖೆಯೆದುರು ಪ್ರತಿಭಟನೆಯಲ್ಲಿ ಪಾಲ್ಗೊಂಡರು. 21 ಸರಕಾರಿ ಸ್ವಾಮ್ಯದ ಬ್ಯಾಂಕ್‌ಗಳು ದೇಶದಾದ್ಯಂತ ಸುಮಾರು 85,000 ಶಾಖೆಗಳನ್ನು ಹೊಂದಿದ್ದು, ದೇಶದ ಒಟ್ಟು ಬ್ಯಾಂಕಿಂಗ್ ವ್ಯವಹಾರದಲ್ಲಿ ಶೇ.70ರಷ್ಟು ವ್ಯವಹಾರವನ್ನು ನಿರ್ವಹಿಸುತ್ತಿವೆ. ಹೊಸ ತಲೆಮಾರಿನ ಖಾಸಗಿ ಬ್ಯಾಂಕ್‌ಗಳಾದ ಐಸಿಐಸಿಐ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್, ಆ್ಯಕ್ಸಿಸ್ ಬ್ಯಾಂಕ್ ಮುಂತಾದ ಬ್ಯಾಂಕ್‌ಗಳಲ್ಲಿ ಚೆಕ್ ಕ್ಲಿಯರೆನ್ಸ್ ಹೊರತುಪಡಿಸಿ ಉಳಿದಂತೆ ಬ್ಯಾಂಕಿಂಗ್ ವ್ಯವಹಾರ ಸುಸೂತ್ರವಾಗಿ ನಡೆದಿದೆ. 21 ಸರಕಾರಿ ಸ್ವಾಮ್ಯದ ಬ್ಯಾಂಕ್‌ಗಳು, 13 ಹಳೆಯ ತಲೆಮಾರಿನ ಖಾಸಗಿ ಬ್ಯಾಂಕ್‌ಗಳು, ಆರು ವಿದೇಶಿ ಬ್ಯಾಂಕ್‌ಗಳು ಹಾಗೂ 56 ಗ್ರಾಮೀಣ ಬ್ಯಾಂಕ್‌ಗಳ ಸುಮಾರು 10 ಲಕ್ಷ ನೌಕರರು ಎರಡು ದಿನದ ಮುಷ್ಕರದಲ್ಲಿ ಪಾಲ್ಗೊಂಡಿದ್ದಾರೆ. ತಿಂಗಳಾಂತ್ಯದಲ್ಲಿ ನಡೆದ ಬ್ಯಾಂಕ್ ಮುಷ್ಕರದ ಕಾರಣ ವೇತನದಾರರಿಗೆ ಮಾಸಿಕ ವೇತನ ಪಡೆಯಲು ತೊಂದರೆಯಾಗಿದೆ. ಹಣ ಜಮೆ, ನಿರಖು ಠೇವಣಿ ನವೀಕರಣ, ಸರಕಾರದ ಹಣಕಾಸು ಇಲಾಖೆಯ ವ್ಯವಹಾರಗಳು, ಶೇರು ಮಾರುಕಟ್ಟೆ ವ್ಯವಹಾರ ಬಾಧಿತವಾಗಿದೆ ಎಂದು ಮೂಲಗಳು ತಿಳಿಸಿವೆ.
ಕಳೆದ ಕೆಲವು ತ್ರೈಮಾಸಿಕ ಅವಧಿಗಳಲ್ಲಿ ಭಾರೀ ನಷ್ಟ ಸಂಭವಿಸಿರುವ ಕಾರಣ ಬ್ಯಾಂಕ್ ಉದ್ಯೋಗಿಗಳಿಗೆ ಹಾಗೂ ಅಧಿಕಾರಿಗಳಿಗೆ ಸ್ವಲ್ಪ ಪ್ರಮಾಣದ ವೇತನ ಏರಿಕೆಯ ಪ್ರಸ್ತಾವವನ್ನು ಇತ್ತೀಚೆಗೆ ನಡೆದ ಸಭೆಯಲ್ಲಿ ಭಾರತೀಯ ಬ್ಯಾಂಕ್‌ಗಳ ಸಂಘಟನೆ(ಐಬಿಎ) ಮುಂದಿರಿಸಿತ್ತು. ಆದರೆ ಇದನ್ನು ಬ್ಯಾಂಕ್ ನೌಕರರು ಒಪ್ಪಿರಲಿಲ್ಲ.