ನಿಮಗೆ ಧೂಮಪಾನದ ಚಟವಿದೆಯೇ?: ಹಾಗಾದರೆ ಹಲ್ಲು ಕಳೆದುಕೊಳ್ಳಲು ತಯಾರಾಗಿ!

Update: 2018-05-31 17:06 GMT

ಹೊಸದಿಲ್ಲಿ, ಮೇ 31: ಧೂಮಪಾನವು ಹಲ್ಲಿನ ಒಸಡುಗಳ ಪರಿಣಾಮಕಾರಿ ಚಿಕಿತ್ಸೆಗೆ ತೊಡಕಾಗಿದೆ ಎಂದು ದಂತತಜ್ಞರು ಎಚ್ಚರಿಸಿದ್ದು, ಧೂಮಪಾನ ಮಾಡಿದವರಿಗೆ ಹೋಲಿಸಿದರೆ ಧೂಮಪಾನಿಗಳು ಹಲ್ಲಿನ ತೊಂದರೆಗೆ ಒಳಗಾಗುವ ಸಾಧ್ಯತೆ ಎರಡು ಪಟ್ಟು ಆಗಿದೆ ಎಂದು ತಿಳಿಸಿದ್ದಾರೆ.

ವಿಶ್ವ ತಂಬಾಕು ರಹಿತ ದಿನವಾದ ಗುರುವಾರ ವೈದ್ಯರು ತಂಬಾಕನ್ನು ಬೀಡಿ, ಸಿಗರೇಟು ಮುಂತಾದ ರೂಪದಲ್ಲಿ ಸೇವಿಸುವುದರಿಂದ ಉಂಟಾಗುವ ದುಷ್ಪರಿಣಾಮದ ಬಗ್ಗೆ ಜನತೆಗೆ ಮಾಹಿತಿ ನೀಡಿದ್ದಾರೆ. ಧೂಮಪಾನಿಗಳು ಹಲ್ಲು ಕಳೆದುಕೊಳ್ಳುವ ಪ್ರಮಾಣ ಧೂಮಪಾನ ನಡೆಸದ ವ್ಯಕ್ತಿಗಳಿಗಿಂತ ಎರಡು ಪಟ್ಟು ಹೆಚ್ಚಾಗಿದೆ. ಧೂಮಪಾನಿಗಳು ಹಲ್ಲಿನ ‘ರೂಟ್ ಕ್ಯಾನಲ್’ ಚಿಕಿತ್ಸೆಗೆ ಒಳಪಡುವ ಸಾಧ್ಯತೆಯೂ ಅಧಿಕವಾಗಿದೆ. ಅಲ್ಲದೆ ಹಲ್ಲಿನ ಒಸಡಿಗೆ ಚಿಕಿತ್ಸೆ ಪಡೆಯುವಾಗ ಧೂಮಪಾನದ ಹವ್ಯಾಸವು ಚಿಕಿತ್ಸೆ ಹೆಚ್ಚಿನ ಪರಿಣಾಮ ಬೀರದಂತೆ ತಡೆಯಾಗುತ್ತದೆ ಎಂದು ‘ಜನರಲ್ ಅಕಾಡಮಿ ಆಫ್ ಓರಲ್ ಇಂಪ್ಲಾಂಟಾಲಜಿ’ (ಎಒಐ) ಯ ಪ್ರಧಾನ ಕಾರ್ಯದರ್ಶಿ ಅಜಯ್ ಶರ್ಮ ತಿಳಿಸಿದ್ದಾರೆ. ಎಒಐ ದಂತ ಆರೋಗ್ಯವನ್ನು ಸುಧಾರಿಸುವ ನಿಟ್ಟಿನಲ್ಲಿ ಸಂಶೋಧನೆ ಹಾಗೂ ಶಿಕ್ಷಣ ಕಾರ್ಯದಲ್ಲಿ ನಿರತರಾಗಿರುವ ದಂತ ವೈದ್ಯರ ಸಂಘಟನೆಯಾಗಿದೆ.

  

ಧೂಮಪಾನದಿಂದ ಬಾಯಿ ನೋವು, ದಂತ ಕ್ಷಯ, ಒಸಡು ರೋಗ ಬರುವ ಅಪಾಯ ಹೆಚ್ಚಿದೆ ಎಂದು ಶರ್ಮ ತಿಳಿಸಿದ್ದಾರೆ. ರೋಗದ ಸೋಂಕಿನ ವಿರುದ್ಧ ಹೋರಾಡುವ ಶಕ್ತಿಯನ್ನು ತಂಬಾಕು ಕುಂದಿಸುತ್ತದೆ. ಅಲ್ಲದೆ ರಕ್ತನಾಳಗಳ ಬೆಳವಣಿಗೆಗೂ ತಡೆಯುಂಟುಮಾಡುತ್ತದೆ. ಬಾಯಿಯ ಶಸ್ತ್ರಚಿಕಿತ್ಸೆಯ ಬಳಿಕ ಒಸಡಿನ ಅಂಗಾಂಶದ ಬೆಳವಣಿಗೆಗೂ ತಂಬಾಕು ಅಡ್ಡಿಯಾಗುತ್ತದೆ ಎಂದು ಶರ್ಮ ತಿಳಿಸಿದ್ದಾರೆ. ಅಲ್ಲದೆ ತಲೆ ಮತ್ತು ಕುತ್ತಿಗೆಯ ಕ್ಯಾನ್ಸರ್ ಕಾಯಿಲೆಗೆ ತಂಬಾಕು ಸೇವನೆಯೇ ಪ್ರಮುಖ ಕಾರಣವಾಗಿದೆ. ತಲೆ ಮತ್ತು ಕುತ್ತಿಗೆಯ ಕ್ಯಾನ್ಸರ್‌ನಿಂದ ಬಳಲುತ್ತಿರುವವರಲ್ಲಿ ಶೇ.85ರಷ್ಟು ಮಂದಿ ತಂಬಾಕು ಸೇವಿಸುವವರಾಗಿದ್ದಾರೆ ಎಂದು ಮ್ಯಾಕ್ಸ್ ಆಸ್ಪತ್ರೆಯ ತಜ್ಞ ವೈದ್ಯರು ತಿಳಿಸಿದ್ದಾರೆ.

ನಿರಂತರವಾಗಿ ತಂಬಾಕು ಸೇವಿಸುವವರಲ್ಲಿ ಬಾಯಿ ಕ್ಯಾನ್ಸರ್‌ನ ಅಪಾಯ ಹೆಚ್ಚು. ಧೂಮಪಾನದ ಜೊತೆ ಮದ್ಯಪಾನವೂ ಸೇರಿದರೆ ಅಪಾಯ ಮತ್ತಷ್ಟು ಹೆಚ್ಚಾಗುತ್ತದೆ ಎಂದು ವೈದ್ಯರು ಎಚ್ಚರಿಸಿದ್ದಾರೆ. ಭಾರತದಲ್ಲಿ ಪ್ರತೀ ವರ್ಷ ತಲೆ ಮತ್ತು ಕುತ್ತಿಗೆ ಕ್ಯಾನ್ಸರ್‌ನ 2,00,000 ಕ್ಕೂ ಹೆಚ್ಚು ಪ್ರಕರಣ ದಾಖಲಾಗುತ್ತದೆ. ಬಾಯಿಯ ಕ್ಯಾನ್ಸರ್‌ಗೆ ತುತ್ತಾದ ಸುಮಾರು 80,000 ರೋಗಿಗಳಿಗೆ ದೇಶದಲ್ಲಿ ಪ್ರತೀ ವರ್ಷ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News