ತೂತುಕುಡಿ ಗೋಲಿಬಾರ್ ಪ್ರಕರಣ: ಜೂನ್ 6ರೊಳಗೆ ವಿವರಣೆ ನೀಡುವಂತೆ ತಮಿಳುನಾಡು ಸರಕಾರಕ್ಕೆ ಸೂಚನೆ
ಚೆನ್ನೈ, ಜೂ.1: ತಮಿಳುನಾಡಿನ ತೂತುಕುಡಿಯಲ್ಲಿರುವ ವಿವಾದಾಸ್ಪದ ತಾಮ್ರದ ಕಾರ್ಖಾನೆಯ ವಿರುದ್ಧ ನಡೆದ ಪ್ರತಿಭಟನೆ ಹಾಗೂ ಈ ವೇಳೆ ಪೊಲೀಸರು ನಡೆಸಿದ ಗೋಲಿಬಾರ್ ಕುರಿತು ಜೂನ್ 6ರೊಳಗೆ ವಿವರಣೆ ನೀಡುವಂತೆ ಮದ್ರಾಸ್ ಹೈಕೋರ್ಟ್ ತಮಿಳುನಾಡು ಸರಕಾರಕ್ಕೆ ಸೂಚಿಸಿದೆ. ಕಳೆದ ಮಂಗಳವಾರ ತೂತುಕುಡಿ ಸ್ಥಾವರವನ್ನು ವಿರೋಧಿಸಿ ನಡೆಸಲಾದ ಪ್ರತಿಭಟನೆ ಸಂದರ್ಭ ಜಿಲ್ಲಾಧಿಕಾರಿ ಕಚೇರಿಯವರೆಗೆ ಜಾಥಾ ನಡೆಸಲು ಮುಂದಾದ ಪ್ರತಿಭಟನಾಕಾರರನ್ನು ಪೊಲೀಸರು ತಡೆದಿದ್ದರು. ಈ ವೇಳೆ ನಡೆದ ಘರ್ಷಣೆಯನ್ನು ನಿಯಂತ್ರಿಸಲು ಗೋಲಿಬಾರ್ ನಡೆಸಲಾಗಿದೆ ಎಂಬುದು ಪೊಲೀಸರ ಹೇಳಿಕೆಯಾಗಿದೆ. ಆದರೆ ಪೊಲೀಸರು ಬಸ್ಸೊಂದರ ಮೇಲೆ ನಿಂತು ಕೆಳಗೆ ರಸ್ತೆಯಲ್ಲಿದ್ದ ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸುತ್ತಿರುವ ವೀಡಿಯೊ ದೃಶ್ಯಾವಳಿ ಪ್ರಸಾರವಾದಾಗ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.
ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಚೇರಿ ಹಾಗೂ ಸಮೀಪದ ವಸತಿಗೃಹಗಳಿಗೆ ಬೆಂಕಿ ಹಚ್ಚಲು ಮುಂದಾದಾಗ ಗೋಲಿಬಾರ್ ನಡೆಸುವಂತೆ ತಾನು ಪೊಲೀಸರಿಗೆ ಆದೇಶಿಸಿದ್ದೇನೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದರು.ಈ ಮಧ್ಯೆ ಪೊಲೀಸರು ಸಲ್ಲಿಸಿರುವ ಎಫ್‌ಐಆರ್‌ನಲ್ಲಿ ಕಂದಾಯ ವಿಭಾಗದ ಕಿರಿಯ ಅಧಿಕಾರಿ ಶೇಖರ್ ಎಂಬವರ ಹೇಳಿಕೆಯನ್ನು ಉಲ್ಲೇಖಿಸಲಾಗಿದೆ. ಪೊಲೀಸರು ಲಾಠಿಚಾರ್ಜ್ ಮತ್ತು ಗೋಲಿಬಾರ್ ನಡೆಸುವ ಮೊದಲು ಮೈಕ್ರೋಫೋನ್‌ನಲ್ಲಿ ಎಚ್ಚರಿಕೆ ನೀಡಿದ್ದರು. ಇದನ್ನು ನಿರ್ಲಕ್ಷಿಸಿದ್ದ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಚೇರಿಯತ್ತ ಮುನ್ನಡೆದರು ಎಂದು ಶೇಖರ್ ಹೇಳಿರುವುದಾಗಿ ಉಲ್ಲೇಖಿಸಲಾಗಿದೆ. ‘ಮಕ್ಕಳ್ ಅಧಿಕಾರ’ ಮತ್ತು ‘ನಮ್ ತಮಿಳರ್ ಕಚ್ಚಿ’ ಮುಂತಾದ ಸಂಘಟನೆಯ ಸದಸ್ಯರೂ ಪ್ರತಿಭಟನೆಯಲ್ಲಿ ಸೇರಿದ್ದು ಹಿಂಸಾಚಾರಕ್ಕೆ ಪ್ರೋತ್ಸಾಹ ನೀಡಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ತಿಳಿಸಲಾಗಿದೆ. ಆದರೆ ಇದನ್ನು ನಿರಾಕರಿಸಿರುವ ಸ್ಥಳೀಯರು, ಪೊಲೀಸರು ಮೈಕ್ರೋಫೋನ್‌ನಲ್ಲಿ ಎಚ್ಚರಿಕೆಯನ್ನೂ ನೀಡಿಲ್ಲ, ಅಥವಾ ಮೊದಲು ರಬ್ಬರ್ ಬುಲೆಟ್‌ಗಳನ್ನೂ ಬಳಸದೆ ನೇರವಾಗಿ ಗುಂಡು ಹಾರಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಕರಣದ ಕುರಿತು ಜೂನ್ 6ರೊಳಗೆ ವಿವರ ನೀಡುವಂತೆ ಸರಕಾರಕ್ಕೆ ಸೂಚಿಸಿರುವ ಮದ್ರಾಸ್ ಹೈಕೋರ್ಟ್, ನಾಪತ್ತೆಯಾಗಿರುವ ಜನರ ವಿರುದ್ಧ ಪ್ರಕರಣ ದಾಖಲಾಗಿದ್ದರೆ, ಅಂತವರ ಕುಟುಂಬದವರಿಗೆ ವಿಚಾರಣೆಯ ನೆಪದಲ್ಲಿ ತೊಂದರೆ ನೀಡಬಾರದು ಎಂದು ಪೊಲೀಸರಿಗೆ ಸೂಚಿಸಿದೆ.