×
Ad

ಸ್ಟರ್ಲೈಟ್ ಪ್ರತಿಭಟನೆ ಕುರಿತು ತನ್ನ ಹೇಳಿಕೆಯನ್ನು ರಜನೀಕಾಂತ್ ಹಿಂದೆಗೆದುಕೊಳ್ಳಬೇಕು: ಪುದುಚೇರಿ ಸಿಎಂ

Update: 2018-06-02 20:43 IST

ಪುದುಚೇರಿ,ಜೂ.2: ತೂತುಕುಡಿಯಲ್ಲಿ ಇತ್ತೀಚೆಗೆ ನಡೆದಿದ್ದ ಸ್ಟರ್ಲೈಟ್ ವಿರೋಧಿ ಪ್ರತಿಭಟನೆಗಳಲ್ಲಿ ಸಮಾಜ ವಿರೋಧಿ ಶಕ್ತಿಗಳು ಸೇರಿಕೊಂಡಿದ್ದವು ಎಂಬ ನಟ ರಜನೀಕಾಂತ್ ಅವರ ಹೇಳಿಕೆಗೆ ಶನಿವಾರ ಇಲ್ಲಿ ಆಕ್ಷೇಪ ವ್ಯಕ್ತಪಡಿಸಿದ ಪುದುಚೇರಿ ಮುಖ್ಯಮಂತ್ರಿ ವಿ.ನಾರಾಯಣ ಸ್ವಾಮಿ ಅವರು,ರಜನೀಕಾಂತ್ ತನ್ನ ಆರೋಪಗಳಿಗೆ ಪುರಾವೆಗಳನ್ನು ಒದಗಿಸಬೇಕು ಎಂದು ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು,ರಜನೀಕಾಂತ್ ಯಾವುದೇ ಪುರಾವೆಗಳನ್ನು ಒದಗಿಸದೆ ಇಂತಹ ದಿಢೀರ್ ಹೇಳಿಕೆಗಳನ್ನು ನೀಡಬಾರದು. ಇದು ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಜನರ ಭಾವನೆಗಳಿಗೆ ನೋವನ್ನುಂಟು ಮಾಡುತ್ತದೆ ಎಂದರು. ‘ಕೆಲವು ವ್ಯಕ್ತಿಗಳ’ಮಾರ್ಗದರ್ಶನದ ಮೇರೆಗೆ ರಜನೀಕಾಂತ್ ನಡೆದುಕೊಳ್ಳುತ್ತಿದ್ದಾರೆ ಎಂಬ ಶಂಕೆಯನ್ನು ಅವರು ವ್ಯಕ್ತಪಡಿಸಿದರು.

ರಜನೀಕಾಂತ್ ಘನತೆಯುಳ್ಳ ವ್ಯಕ್ತಿಯಾಗಿದ್ದರೆ ಅವರು ತನ್ನ ಹೇಳಿಕೆಗಳನ್ನು ಹಿಂದೆಗೆದುಕೊಳ್ಳಬೇಕು. ಪ್ರತಿಭಟನೆಗಳ ಕುರಿತು ಅವರ ಅಭಿಪ್ರಾಯಗಳನ್ನು ಯಾರೂ ಒಪ್ಪಿಕೊಳ್ಳುವುದಿಲ್ಲ ಎಂದು ಸ್ವಾಮಿ ಹೇಳಿದರು.

ಮೇ 30ರಂಂದು ತೂತುಕುಡಿಗೆ ತೆರಳಿ ಪ್ರತಿಭಟನೆ ಸಂದರ್ಭ ಹಿಂಸಾಚಾರದಲ್ಲಿ ಗಾಯಗೊಂಡಿದ್ದ ಕೆಲವರನ್ನು ಭೇಟಿಯಾಗಿದ್ದ ರಜನೀಕಾಂತ್,ಪ್ರತಿಭಟನಾನಿರತ ಸ್ಥಳೀಯರ ಮಧ್ಯೆ ಕೆಲವು ಸಮಾಜ ವಿರೋಧಿ ಶಕ್ತಿಗಳು ಸೇರಿಕೊಂಡಿದ್ದವು. ಇದೆಲ್ಲ ಅವರ ಕೈವಾಡವಾಗಿತ್ತು ಎಂದು ಹೇಳಿದ್ದರಲ್ಲದೆ ‘ಉದಾತ್ತ ಪ್ರತಿಭಟನೆ’ಯು ರಕ್ತಪಾತದಲ್ಲಿ ಅಂತ್ಯಗೊಂಡಿದ್ದಕ್ಕೆ ದುಃಖವನ್ನು ವ್ಯಕ್ತಪಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News