'ವೆನಿಲ್ಲಾ' ನಿರೂಪಣೆಯಲ್ಲಿ ವೇಗವಿಲ್ಲ

Update: 2018-06-03 07:32 GMT
Editor : ಶಶಿ

ಪ್ರೀತಿ ಪ್ರೇಮದ ಚಿತ್ರದಲ್ಲಿ ಅನಿರೀಕ್ಷಿತ ಕೊಲೆ ಒಂದು ಸೇರಿಕೊಂಡರೆ ಅದು ಪ್ರೇಕ್ಷಕರನ್ನು ಸೀಟಿನ ತುದಿಗೆ ತಂದು ನಿಲ್ಲಿಸುತ್ತದೆ. ಅದುವೇ ವೆನಿಲ್ಲಾ.

ಅವಿ ಮತ್ತು ಅನಘಾ ಎಂಬ ಬಾಲ್ಯಕಾಲದ ಸ್ನೇಹಿತರು ಬಹಳ ವರ್ಷಗಳ ಬಳಿಕ ಭೇಟಿಯಾಗುವುದು ಮತ್ತು ಬಾಲ್ಯದ ಪ್ರೀತಿ ಪ್ರೇಮವಾಗುವುದು ಚಿತ್ರದ ಆರಂಭ. ಅವರ ಪ್ರೇಮ ಮುಂದುವರಿಯುವ ಮುನ್ನ ಅನಘಾಳನ್ನು ಕೊಲೆಯ ಆಪಾದನೆಯಿಂದ ಪಾರು ಮಾಡುವ ಜವಾಬ್ದಾರಿ ಅವಿಯದಾಗುತ್ತದೆ. ಈ ಪ್ರಯತ್ನದಲ್ಲಿ ಅವಿ ಕೂಡ ಆಪಾದನೆಗೆ ಒಳಗಾಗುವ ಪರಿಸ್ಥಿತಿ ಬರುತ್ತದೆ. ಅಷ್ಟು ಹೊತ್ತಿಗೆ ಚಿತ್ರ ಮಧ್ಯಂತರ ತಲುಪಿರುತ್ತದೆ. ಎರಡನೇ ಭಾಗದಲ್ಲಿ ಆ ಕೊಲೆಯ ಹಿಂದೆ ಡ್ರಗ್ಸ್ ಮತ್ತು ಸಿಗರೆಟ್ ಮಾಫಿಯಾ ಅಡಗಿರುವ ಸತ್ಯ ಹೊರಬೀಳುತ್ತದೆ. ಅಲ್ಲಿಗೆ ಲವ್, ಸಸ್ಪೆನ್ಸ್, ಕ್ರೈಮ್ ಹೀಗೆ ಎಲ್ಲ ಭಾವವನ್ನು ಚಿತ್ರ ತೋರಿಸಿರುತ್ತದೆ. ಆದರೆ ಕತೆಯಲ್ಲಿನ ಈ ವೈವಿಧ್ಯಮಯ ಭಾವಗಳು ನಿರ್ದೇಶನದಲ್ಲಿ ಅಭಾವವಾಗಿ ಕಾಣಿಸಿವೆ.

ನಾಯಕನಾಗಿ ಅವಿನಾಶ್ ಉತ್ತಮ ನಟನೆಗೆ ಪ್ರಯತ್ನಿಸಿದ್ದಾರೆ. ಅನಘಾ ಪಾತ್ರದಲ್ಲಿ ಸ್ವಾತಿ ಕೊಂಡೆಯ ನಟನೆ ನೋಡಿದಾಗ ಕನ್ನಡಕ್ಕೂ ಒಬ್ಬ ತಮನ್ನಾ ಸಿಕ್ಕ ಫೀಲ್ ನೀಡುತ್ತದೆ. ‘ಟಗರು’ ಸಿನೆಮಾದ ‘ಕಾಕ್ರೋಚ್’ ಖ್ಯಾತಿಯ ಸುಧಿ, ಪುಟ್ಟದಾದರೂ ಪ್ರಮುಖವೆನಿಸುವ ಪಾತ್ರಗಳಲ್ಲಿ ಕಾಣಿಸಿರುವ ರೆಹಮಾನ್, ಬಿ. ಸುರೇಶ್ ಮೊದಲಾದವರು ತಮ್ಮ ಪಾತ್ರಗಳಿಗೆ ಜೀವ ತುಂಬುವಲ್ಲಿ ಯಶಸ್ವಿಯಾಗಿದ್ದಾರೆ. ರವಿಶಂಕರ್ ಗೌಡ ಪೊಲೀಸ್ ಅಧಿಕಾರಿಯಾಗಿ ನಟಿಸಿದ್ದಾರೆ. ಆದರೆ ನೋಟದಲ್ಲಿರುವ ಪೊಲೀಸ್ ಸ್ಮಾರ್ಟ್‌ನೆಸ್ ಅನ್ನು ಅವರ ಪಾತ್ರದ ವರ್ತನೆಗಳಿಗೆ, ಕಾರ್ಯವೈಖರಿಗಳಿಗೆ ನೀಡಲಾಗಿಲ್ಲ. ಹಾಗಾಗಿ ಡಮ್ಮಿಯಾಗಿಯೇ ಉಳಿದು ಬಿಡುತ್ತಾರೆ.

ಭರತ್ ಬಿಜೆ ಸಂಗೀತದ ಮಾಧುರ್ಯಮಯ ಗೀತೆಗೆ ಹಡಗು ಲೊಕೇಶನ್ ಆಗಿರುವ ರೀತಿ ಮನ ಮೋಹಕ. ಥೀಮ್ ಮ್ಯೂಸಿಕ್ ಹೊರತು ಪಡಿಸಿ ಹಿನ್ನೆಲೆ ಸಂಗೀತದಲ್ಲಿ ಹೇಳಿಕೊಳ್ಳುವಂಥದ್ದೇನೂ ಇಲ್ಲ. ಛಾಯಾಗ್ರಹಣದಲ್ಲಿಯೂ ಆಕರ್ಷಣೆಯಿಲ್ಲ. ಎಲ್ಲವೂ ಚೆನ್ನಾಗಿದ್ದರೆ ದೃಶ್ಯ ಸಿನೆಮಾದಂತೆ ಮರ್ಡರ್ ಮಿಸ್ಟ್ರಿ ಜೊತೆಗೆ ಒಂದು ಕೌಟುಂಬಿಕ ಮನೋರಂಜನಾ ಚಿತ್ರವಾಗಿಯೂ ಚಿತ್ರ ಮನಸೆಳೆಯುತ್ತಿತ್ತು.

ಸಸ್ಪೆನ್ಸ್ ಥ್ರಿಲ್ಲರ್ ಚಿತ್ರದಲ್ಲಿ ಇಂದಿನ ಪ್ರೇಕ್ಷಕರು ಮೊದಲು ಬಯಸುವುದು ವೇಗವನ್ನು. ಹಾಗಾಗಿ ಒಳ್ಳೆಯ ಕತೆ, ದೃಶ್ಯಗಳಿದ್ದರೂ ಕೂಡ ಸಡಿಲವಾದ ನಿರೂಪಣೆಯ ಕಾರಣ ನಿರಾಶೆ ಮೂಡಿಸುತ್ತದೆ ವೆನಿಲ್ಲಾ. ಆದರೆ ‘‘ಕುಟುಂಬ ಸಮೇತ ಕುಳಿತು ನೋಡುವಂಥ ಒಳ್ಳೆಯ ಸಂದೇಶಾತ್ಮಕ ಚಿತ್ರ ನೀಡುವ ನಿರ್ದೇಶಕ ಜಯತೀರ್ಥ’’ ಎಂಬ ಅಭಿಮಾನದಿಂದ ಚಿತ್ರ ನೋಡುವವರು ಖಂಡಿತವಾಗಿ ಆ ಅಭಿಮಾನವನ್ನು ಹಾಗೆಯೇ ಮುಂದುವರಿಸಬಹುದು. ಆ ನಿಟ್ಟಿನಲ್ಲಿ ಚಿತ್ರ ಪ್ರೇಕ್ಷಕರಿಗೆ ಇಷ್ಟವಾಗಬಲ್ಲದು.

ತಾರಾಗಣ: ಅವಿನಾಶ್, ಸ್ವಾತಿ ಕೊಂಡೆ
ನಿರ್ದೇಶನ: ಜಯತೀರ್ಥ
ನಿರ್ಮಾಣ: ಎನ್. ಜಯರಾಮ

Writer - ಶಶಿ

contributor

Editor - ಶಶಿ

contributor

Similar News