ಪ್ರತಿದಿನ 800 ಬಡವರಿಗೆ ಉಚಿತ ಉಪಾಹಾರ ವಿತರಿಸುವ ಸುಜತುಲ್ಲಾ

Update: 2018-06-03 08:13 GMT

ಹೈದರಾಬಾದ್‍ನ ಸುಜತುಲ್ಲಾ 25 ವರ್ಷದ ಯುವಕ. ಫಾರ್ಮಸಿ ವಿಷಯದಲ್ಲಿ ಸಂಶೋಧನಾ ವಿದ್ಯಾರ್ಥಿ. ಮುಂಜಾನೆ 4ರ ವೇಳೆಗೆ ಎದ್ದು, 8 ಗಂಟೆಯ ವೇಳೆ 700-800 ಮಂದಿಗೆ ಉಪಾಹಾರ ಸಿದ್ಧಪಡಿಸಿ ಈತ ಸಿದ್ಧನಾಗಿರುತ್ತಾನೆ. ಬಿಸಿ ಬಿಸಿ ತುಪ್ಪದ ಉಪ್ಪಿಟ್ಟು ಹಾಗೂ ಚಟ್ನಿ ನೀಡಿ ನಗರದ ಕೋಟಿ ಹೆರಿಗೆ ಆಸ್ಪತ್ರೆ ಮತ್ತು ನಿಲೋಫರ್ ಆಸ್ಪತ್ರೆಯ ಹೊರಗೆ ದಿನ ಕಳೆಯುವ ನೂರಾರು ಮಂದಿಯ ಹಸಿವು ಇಂಗಿಸುವುದು ಈ ಯುವಕನ ನಿತ್ಯದ ಕಾಯಕ.

"ನೂರಾರು ಮಂದಿ ಬೆಳಗಾಗುವ ಮುನ್ನವೇ ಟೋಕನ್‍ಗಾಗಿ ಸಾಲಿನಲ್ಲಿ ನಿಂತಿರುತ್ತಾರೆ. ಈ ಪೈಕಿ ಬಹುತೇಕ ಮಂದಿಗೆ ಆಹಾರಕ್ಕಾಗಿ ಹೆಚ್ಚಿನ ಹಣ ಪಾವತಿಸುವ ಚೈತನ್ಯವಿಲ್ಲ. ಅವರಿಗೆ ನಾವು ಉಪಾಹಾರ ನೀಡಿದರೆ, ಹೇಗಾದರೂ ಮಾಡಿ 5 ರೂಪಾಯಿಗೆ ಸರ್ಕಾರದ ಊಟ ಪಡೆದುಕೊಳ್ಳುತ್ತಾರೆ" ಎಂದು ಸುಜತುಲ್ಲಾ ಹೇಳುತ್ತಾರೆ.

ಸುಜತುಲ್ಲಾ ಪ್ರತಿದಿನ 700-800 ಮಂದಿಗೆ ಉಪಾಹಾರ ಹಾಗೂ 100-150 ಮಂದಿಗೆ ರಾತ್ರಿಯ ಊಟವನ್ನು ಕಳೆದ 575 ದಿನಗಳಿಂದ ವಿತರಿಸುತ್ತಾ ಬಂದಿದ್ದಾರೆ.

2016ರಲ್ಲಿ ಪದವಿ ವಿದ್ಯಾರ್ಥಿಯಾಗಿದ್ದಾಗಲೇ ಇವರು ಪ್ರತಿದಿನ ಉಪಾಹಾರ ವಿತರಿಸುವ ಈ ಪರಿಪಾಠ ಬೆಳೆಸಿಕೊಂಡಿದ್ದಾರೆ. "ನನ್ನಲ್ಲಿ 15 ಆಹಾರ ಪೊಟ್ಟಣಗಳು ಉಳಿದಿವೆ. ಆದರೆ ಇನ್ನೂ ಹಲವು ಮಂದಿಗೆ ವಿತರಿಸಬೇಕಾಗಿದೆ. 15 ಮಂದಿಗೆ ಅದನ್ನು ಕೊಟ್ಟು, ಮೌನವಾಗಿ ಹೊರಟುಹೋಗುತ್ತೇನೆ" ಎಂದು ಅವರು ಹೇಳುತ್ತಾರೆ.

ತಾನು ಎಷ್ಟು ಮಂದಿಗೆ ಆಹಾರ ವಿತರಿಸುತ್ತೇನೆಯೋ ಅದಕ್ಕಿಂತ ಎಷ್ಟೋ ಅಧಿಕ ಮಂದಿ ಆಹಾರ ಪೊಟ್ಟಣಗಳಿಗಾಗಿ ಹಪಹಪಿಸುತ್ತಿದ್ದಾರೆ ಎನ್ನುವ ವಾಸ್ತವ ಸುಜತುಲ್ಲಾಗೂ ಗೊತ್ತು. "ನನ್ನ ಯೋಜನೆ ವಿಸ್ತರಿಸಲು ನಾನು ನಿರ್ಧರಿಸಿದ್ದೇನೆ. ಇದನ್ನು ಮುಂದುವರಿಸುವ ಸಲುವಾಗಿ ಪ್ರತಿ ತಿಂಗಳು ಒಂದು ದಿನದ ವೇತನವನ್ನು ನೀಡುವಂತೆ ಪೋಷಕರಲ್ಲಿ ಕೋರಿದ್ದೇನೆ. ಇದಕ್ಕೆ ದೇಣಿಗೆ ನೀಡುವಂತೆ ಸ್ನೇಹಿತರನ್ನೂ ಕೋರಿದ್ದೇನೆ. ಹ್ಯುಮ್ಯಾನಿಟಿ ಫಸ್ಟ್ ಫೌಂಡೇಷನ್ (ಎಚ್‍ಎಫ್‍ಎಫ್) ಸಂಸ್ಥೆಯನ್ನು 2016ರಲ್ಲಿ ಆರಂಭಿಸಿದ್ದು, ನಿಧಾನವಾಗಿ ಜನ ಇದನ್ನು ಗುರುತಿಸಿ, ನೆರವು ನೀಡುತ್ತಿದ್ದಾರೆ" ಎಂದವರು ಹೇಳುತ್ತಾರೆ.

ಸೂರಿಲ್ಲದೇ ಬೀದಿಯಲ್ಲಿ ಕಳೆಯುವ ಇನ್ನಷ್ಟು ಮಂದಿಗೆ ಆಹಾರ ಒದಗಿಸುವ ಇಚ್ಛೆ ಈ ಯುವಕನಿಗೆ ಇದ್ದರೂ, ಹಣ ಮತ್ತು ಸಮಯದ ಕೊರತೆಯಿಂದಾಗಿ ಸಾಧ್ಯವಾಗಿಲ್ಲ. "ಹಸಿದ ಹೊಟ್ಟೆಯಲ್ಲಿ ಯಾರೂ ರಾತ್ರಿ ಚೆನ್ನಾಗಿ ನಿದ್ರೆ ಮಾಡಲು ಸಾಧ್ಯವಿಲ್ಲ. ಹೈದರಾಬಾದ್‍ನಲ್ಲಿ ಇಂತಹ ನೂರಾರು ಮಂದಿ ಇದ್ದಾರೆ. ಆದ್ದರಿಂದ ವಾರಕ್ಕೆ ಎರಡು ಬಾರಿ ಅವರಿಗೆ ರಾತ್ರಿಯೂಟ ನೀಡಲು ಆರಂಭಿಸಿದೆ. ಇದು ತೀರಾ ಕಡಿಮೆ ಎನ್ನುವುದು ನನಗೆ ಗೊತ್ತು" ಎಂದು ಹೇಳುತ್ತಾರೆ.

"ಪ್ರತಿದಿನ ಆಹಾರ ಒದಗಿಸಲು ನನಗೆ 4,000 ರೂಪಾಯಿ ಬೇಕು. ಪೋಷಕರು ಶೇಕಡ 40ರಷ್ಟು ಮೊತ್ತ ನೀಡುತ್ತಾರೆ. ಉಳಿದಂತೆ ಸ್ನೇಹಿತರು, ಸಾಮಾಜಿಕ ಜಾಲತಾಣಗಳ ಮೂಲಕ ಇದನ್ನು ತಿಳಿದ ಮಂದಿ ಕೈಜೋಡಿಸುತ್ತಿದ್ದಾರೆ. ಸಮುದಾಯದಿಂದ ಹಣ ಸಂಗ್ರಹಿಸಿಯೂ ನೀಡುತ್ತಾರೆ" ಎಂದು ಸುಜತುಲ್ಲಾ ವಿವರಿಸುತ್ತಾರೆ.

ಇದಕ್ಕೆ ಎದುರಾದ ಅಡೆತಡೆಗಳ ಬಗ್ಗೆ ಪ್ರಶ್ನಿಸಿದಾಗ, "ಇದನ್ನು ನಿಲ್ಲಿಸುವ ಬಗ್ಗೆ ಎಂದೂ ಯೋಚಿಸಿಲ್ಲ. ಆದರೆ ನನಗೆ ಸ್ವಯಂಸೇವಕರು ಬೇಕು. ಈ ಸೇವೆಯಲ್ಲಿ ಆಸಕ್ತಿ ಇರುವ ಎಲ್ಲರಿಗೂ ಸ್ವಾಗತ. ಹೆಚ್ಚು ಸ್ವಯಂಸೇವಕರಿದ್ದಷ್ಟೂ ಹೆಚ್ಚು ಮಂದಿಯನ್ನು ತಲುಪಬಹುದು" ಎಂದು ಉತ್ತರಿಸಿದರು. ಈಗ ಇವರ ಸ್ನೇಹಿತರಾದ ಶಹಬಾಝ್ ಹುಸೈನ್ ಹಾಗೂ ಆರಿಫ್ ಮತ್ತಿತರರು ಈ ಕಾಯಕದಲ್ಲಿ ನೆರವಾಗುತ್ತಿದ್ದಾರೆ.

"ಹಲವು ಮಂದಿ ನಮ್ಮ ಕಾರ್ಯಕ್ರಮದಿಂದ ಸ್ಫೂರ್ತಿ ಪಡೆದು, ಮುಂಬೈ, ಕೊಲ್ಕತ್ತಾ ಮತ್ತು ಚೆನ್ನೈನಲ್ಲಿ ಇಂಥದ್ದೇ ಪ್ರಯತ್ನ ಆರಂಭಿಸಲು ಸಲಹೆ ಮತ್ತು ಮಾರ್ಗದರ್ಶನ ಕೋರಿ ಕರೆ ಮಾಡುತ್ತಿರುವುದು ಸಂತಸದ ಸಂಗತಿ. ನಮ್ಮ ಗುರಿ ಊಟಕ್ಕೂ ಗತಿ ಇಲ್ಲದ ಇನ್ನಷ್ಟು ಮಂದಿಯನ್ನು ತಲುಪುವುದು. ನಮ್ಮ ಜತೆ ಕೈಜೋಡಿಸುವ ಯಾರ ಜತೆಗಾದರೂ ಸಹಭಾಗಿತ್ವಕ್ಕೆ ನಾವು ಸಿದ್ಧ" ಎಂದು ಹೇಳುತ್ತಾರೆ.

"ಹಸಿವಿಗೆ ಧರ್ಮ ಅಥವಾ ಜಾತಿ ಇಲ್ಲ. ಅದು ಪ್ರತಿಯೊಬ್ಬರನ್ನೂ ಸಾಯಿಸುತ್ತದೆ. ಹರ್ ಏಕ್ ಕೇ ಲಿಯೇ ಖಾನಾ ಜರೂರಿ ಹೈ (ಪ್ರತಿಯೊಬ್ಬರಿಗೂ ಆಹಾರ ಅನಿವಾರ್ಯ)" ಎನ್ನುವುದು ಸುಜತುಲ್ಲಾರ ಸ್ಪಷ್ಟ ಅಭಿಮತ.

ಆಹಾರ ಒದಗಿಸುವ ಜತೆಗೆ ಎಚ್‍ಎಫ್‍ಎಫ್, ಕೈಲಾಗದ ರೋಗಿಗಳಿಗೆ ಉಚಿತ ಔಷಧಿಗಳನ್ನೂ ವಿತರಿಸುತ್ತಿದೆ. ಇದರ ಜತೆಗೆ ಸಂಗರೆಡ್ಡಿಯಲ್ಲಿ ಹಲವು ಮಂದಿ ಮಹಿಳೆಯರಿಗೆ ಟೈಲರಿಂಗ್ ಮತ್ತು ಡಿಸೈನಿಂಗ್ ಹೀಗೆ ಸ್ವಯಂ ಉದ್ಯೋಗ ಕೌಶಲ ಅಭಿವೃದ್ಧಿ ತರಬೇತಿಯನ್ನೂ ನೀಡುತ್ತಿದೆ.

ಕೃಪೆ: www.thenewsminute.com

Writer - ಚರಣ್ ತೇಜಾ

contributor

Editor - ಚರಣ್ ತೇಜಾ

contributor

Similar News