ಮತ್ತೊಂದು ಜೀವ ಉಳಿಸುತ್ತಲೇ ಕೊನೆಯುಸಿರೆಳೆದ ರಝಾನ್ ಅಲ್-ನಜ್ಜರ್

Update: 2018-06-03 10:22 GMT

#ಅಸ್ತ್ರಗಳಿಲ್ಲದೆ ಸಾಧಿಸುತ್ತೇವೆ” ಎಂದಿದ್ದ 20ರ ಯುವತಿಯ ಸ್ಫೂರ್ತಿದಾಯಕ ಕಥೆ

ಇಸ್ರೇಲ್ ನಿಂದ ಗಾಝಾವನ್ನು ಪ್ರತ್ಯೇಕಿಸುವ ಗಡಿ ಸಮೀಪ ವಾರಂಪ್ರತಿ ನಡೆಯುವ ಪ್ರತಿಭಟನೆಯ ವೇಳೆ ಇಸ್ರೇಲಿ ಪಡೆಗಳ ಅಮಾನುಷ ದಾಳಿಯಿಂದ ಗಾಯಗೊಂಡವರಿಗೆ ಶುಶ್ರೂಷೆ ನೀಡಲು ಯಾವುದೇ ಫಲಾಪೇಕ್ಷೇ ಇಲ್ಲದೆ ಧಾವಿಸುತ್ತಿದ್ದವರಲ್ಲಿ ಈಕೆ ಮೊದಲಿಗಳು. ಗಾಝಾದ ಫೆಲೆಸ್ತೀನಗರನ್ನು ರಕ್ಷಿಸುವಲ್ಲಿ ಪುರುಷರಂತೆ ಸ್ರೀಯರೂ ಪಾತ್ರ ವಹಿಸಬೇಕು ಎನ್ನುವುದನ್ನು ನಿರೂಪಿಸುತ್ತಿದ್ದೇನೆ ಎಂದು ಆಕೆ ತನ್ನ ಸೇವೆಯ ಬಗ್ಗೆ ಹೇಳುತ್ತಿದ್ದಳು.

ಶುಕ್ರವಾರ ಗಡಿ ಸಮೀಪ ನಡೆದ 10ನೆ ವಾರದ ಪ್ರತಿಭಟನೆಯ ಸಂದರ್ಭ ಇಸ್ರೇಲಿಗರ ದಾಳಿಯಿಂದ ಗಾಯಗೊಂಡ ವ್ಯಕ್ತಿಯೊಬ್ಬರ ಶುಶ್ರೂಷೆಗೆಂದು ಎಂದಿನಂತೆ ಆಕೆ ಧಾವಿಸಿದ್ದಳು. ಇದೇ ಸಮಯ ಇಸ್ರೇಲಿ ಸೈನಿಕರ ಬಂದೂಕಿನಿಂದ ಸಿಡಿದ ಮೂರು ಬುಲೆಟ್ ಗಳು ಆಕೆಯ ದೇಹಕ್ಕೆ ಹೊಕ್ಕಿತ್ತು. ಅಲ್ಲೇ ಕುಸಿದುಬಿದ್ದ ಆ ಯುವತಿ ಕೆಲ ಸಮಯದಲ್ಲೇ ಕೊನೆಯುಸಿರೆಳೆದಳು. ತನ್ನ 20 ವರ್ಷದ ಜೀವನವನ್ನು ಮಾನವೀಯತೆಗಾಗಿ ಮುಡಿಪಿಟ್ಟ ರಝಾನ್ ಅಲ್-ನಜ್ಜರ್ ಸಾವಿಗೆ ಇಡೀ ಜಗತ್ತೇ ಶೋಕ ವ್ಯಕ್ತಪಡಿಸಿದ್ದು, ಈಕೆಯ ಅಂತ್ಯಕ್ರಿಯೆಗೆ ಸಾವಿರಾರು ಮಂದಿ ಸಾಕ್ಷಿಯಾದರು.

ಇಸ್ರೇಲ್ ಗಡಿ ಸಮೀಪದ ಗ್ರಾಮವಾದ ಖುಝಾದ ನಿವಾಸಿಯಾಗಿರುವ ರಝಾನ್ ಅಲ್-ನಜ್ಜರ್ ಅವರ ತಂದೆಯ ಹೆಸರು ಅಶ್ರಫ್ ಅಲ್ – ನಜ್ಜರ್. ರಝಾನ್ ತಂದೆ ಮೋಟಾರ್ ಸೈಕಲ್ ಬಿಡಿಭಾಗಗಳನ್ನು ಮಾರಾಟ ಮಾಡುತ್ತಿದ್ದರು. 2014ರಲ್ಲಿ ಇಸ್ರೇಲಿ ಪಡೆಗಳ ವಾಯುದಾಳಿಯಿಂದ ಇವರ ಅಂಗಡಿ ನಾಶವಾಗಿತ್ತು. ಆನಂತರ ಅವರು ನಿರುದ್ಯೋಗಿಯಾಗಿದ್ದರು. ಇವರ ಆರು ಮಕ್ಕಳಲ್ಲಿ ರಝಾನ್ ಮೊದಲಿಗರು. ಖಾನ್ ಯೂನುಸ್ ನಲ್ಲಿರುವ ನಾಸೀರ್ ಆಸ್ಪತ್ರೆಯಲ್ಲಿ 2 ವರ್ಷಗಳ ಕಾಲ ರಝಾನ್ ಪಾರಾಮೆಡಿಕ್ ತರಬೇತಿ ಪಡೆದರು. ನಂತರ ಫೆಲೆಸ್ತೀನ್ ಮೆಡಿಕಲ್ ಸೊಸೈಟಿಯ ಸ್ವಯಂಸೇವಕಿಯಾದರು. 

ರಝಾನ್ ಸಾವನ್ನಪ್ಪುವುದಕ್ಕೂ ಒಂದು ತಿಂಗಳ ಮೊದಲು 'ನ್ಯೂಯಾರ್ಕ್ ಟೈಮ್ಸ್' ರಝಾನ್ ರನ್ನು ಖಾನ್ ಯೂನುಸ್ ನಲ್ಲಿರುವ ಪ್ರತಿಭಟನಾ ಶಿಬಿರದಲ್ಲಿ ಸಂದರ್ಶಿಸಿತ್ತು. “ಜನರನ್ನು ಸ್ಥಳಾಂತರಿಸುವುದು, ಅವರ ಪ್ರಾಣ ಉಳಿಸುವುದು, ಅಸ್ತ್ರಗಳಿಲ್ಲದೆ ನಾವು ಏನು ಬೇಕಾದರೂ ಸಾಧಿಸಬಹುದು ಎನ್ನುವ ಸಂದೇಶವನ್ನು ಜಗತ್ತಿಗೆ ನೀಡುವುದು ನಮ್ಮ ಗುರಿಯಾಗಿದೆ” ಎಂದು ರಝಾನ್ ಈ ಸಂದರ್ಭ ಹೇಳಿದ್ದರು.

"ಶುಕ್ರವಾರ ಗಾಯಾಳುವೊಬ್ಬನಿಗೆ ಬ್ಯಾಂಡೇಜ್ ಕಟ್ಟುತ್ತಿದ್ದ ರಝಾನ್ ಗಡಿಪ್ರದೇಶದಿಂದ 100 ಯಾರ್ಡ್ ಅಂತರದಲ್ಲಿದ್ದರು. ಕೂಡಲೇ ಆ ವ್ಯಕ್ತಿಯನ್ನು ಆ್ಯಂಬುಲೆನ್ಸ್ ನಲ್ಲಿ ಕರೆದೊಯ್ಯಲಾಯಿತು. ಇದೇ ಸಂದರ್ಭ ಇಸ್ರೇಲ್ ಸೈನಿಕರ ಬಂದೂಕು ಸಿಡಿದ ಶಬ್ಧವೂ ಕೇಳಿಸಿತು. ತಕ್ಷಣ ರಝಾನ್ ನೆಲಕ್ಕುರುಳಿದಳು” ಎನ್ನುತ್ತಾರೆ ಪ್ರತ್ಯಕ್ಷದರ್ಶಿ ಇಬ್ರಾಹೀಂ ಅಲ್-ನಜ್ಜರ್. ಕೂಡಲೇ ರಝಾನ್ ರನ್ನು ಇನ್ನಿಬ್ಬರ ಸಹಾಯದೊಂದಿಗೆ ಇಬ್ರಾಹೀಂ ಆ್ಯಂಬುಲೆನ್ಸ್ ಗೆ ಕರೆದೊಯ್ದರು. “ಆಕೆ ಪ್ರತಿಭಟನೆ ನಡೆಸುತ್ತಿರಲ್ಲಿಲ್ಲ. ಆಕೆ ಪ್ರಾಣವನ್ನು ಉಳಿಸುತ್ತಿದ್ದಳು ಹಾಗು ಗಾಯಾಳುಗಳಿಗೆ ಚಿಕಿತ್ಸೆ ನೀಡುತ್ತಿದ್ದಳು” ಎಂದು ಇಬ್ರಾಹೀಂ ಹೇಳುತ್ತಾರೆ. ಗಂಭೀರವಾಗಿ ಗಾಯಗೊಂಡಿದ್ದ ರಝಾನ್ ರನ್ನು ಸ್ಥಳೀಯ ಆಸ್ಪತ್ರೆಯೊಂದಕ್ಕೆ ಕರೆದೊಯ್ಯಲಾಯಿತು. ಆದರೆ ಪರಿಸ್ಥಿತಿ ಚಿಂತಾಜನಕವಾಗಿದ್ದರಿಂದ ಯುರೋಪಿಯನ್ ಗಾಝಾ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಆಪರೇಟಿಂಗ್ ಕೋಣೆಯಲ್ಲಿ ರಝಾನ್ ಅಲ್-ನಜ್ಜರ್ ಕೊನೆಯುಸಿರೆಳೆದರು.

“ಝಿಯೋನಿಸ್ಟರ ವಿರುದ್ಧ ನನ್ನ ಪುತ್ರಿ ಹೋರಾಡಿದ್ದು ಇದೇ ಅಸ್ತ್ರದಿಂದ” ಎಂದು ರಕ್ತಮೆತ್ತಿದ ಉಡುಪನ್ನು ತೋರಿಸಿ ಗದ್ಗದಿತರಾಗುತ್ತಾರೆ ರಝಾನ್ ಅಲ್-ನಜ್ಜರ್ ರ ತಾಯಿ. ಇಸ್ರೇಲ್ ವಿರುದ್ಧದ ಫೆಲೆಸ್ತೀನಿಯರ ಹೋರಾಟದ ಬಗ್ಗೆ ಜಗತ್ತಿನಲ್ಲಾಗಲೀ, ಸಾಮಾಜಿಕ ಜಾಲತಾಣದಲ್ಲಾಗಲೀ ಮುಸ್ಲಿಮರು ಮಾತ್ರ ಧ್ವನಿಯೆತ್ತುತ್ತಾರೆ ಎನ್ನುವ ಮಾತಿದೆ. ಆದರೆ ರಝಾನ್ ಅಲ್-ನಜ್ಜರ್ ಸಾವಿಗೆ ಧರ್ಮ-ಬೇಧ ಮರೆತು ಲಕ್ಷಾಂತರ ಮಂದಿ ಕಂಬನಿ ಮಿಡಿದಿದ್ದಾರೆ. ಮಾನವೀಯ ಸೇವೆಗೆ ಜೀವನ ಮುಡಿಪಾಗಿಟ್ಟಿದ್ದ ಯುವತಿಯನ್ನು ಕೊಂದ ಇಸ್ರೇಲ್ ವಿರುದ್ಧ ಜಗತ್ತಿನಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.

“ವೈದ್ಯರಾಗಿ ಕೆಲಸ ಮಾಡುವುದು ಪುರುಷರು ಮಾತ್ರವಲ್ಲ. ಇಲ್ಲಿ ನಮ್ಮ ಕರ್ತವ್ಯವೂ ಇದೆ. ನಾವು ನಮ್ಮ ದೇಶದ ಮೇಲಿನ ಪ್ರೀತಿಗಾಗಿ ಈ ಕೆಲಸ ಮಾಡುತ್ತೇವೆ. ಇದು ಮಾನವೀಯ ಸೇವೆಯಷ್ಟೇ. ಇದು ಹಣಕ್ಕಾಗಿ ಮಾಡುವ ಕೆಲಸವಲ್ಲ. ದೇವನಿಗಾಗಿ ಮಾಡುವ ಕೆಲಸ. ನಿಮ್ಮ ಮಗಳು ಸಂಬಳ ಪಡೆದುಕೊಳ್ಳದೆ ಕೆಲಸ ಏಕೆ ಮಾಡುತ್ತಾಳೆ ಎಂದು ಹಲವರು ನನ್ನ ತಂದೆಯಲ್ಲಿ ಕೇಳುತ್ತಾರೆ. ಆಕೆಯ ಬಗ್ಗೆ ನನಗೆ ಹೆಮ್ಮೆಯಿದೆ ಎಂದು ನನ್ನ ತಂದೆ ಹೇಳುತ್ತಾರೆ” ಎಂದು ಕೊನೆಯ ಸಂದರ್ಶನದಲ್ಲಿ ರಝಾನ್ ಹೇಳಿದ್ದರು.

“ಅಸ್ತ್ರಗಳಿಲ್ಲದೆ ಏನು ಬೇಕಾದರೂ ಸಾಧಿಸಬಹುದು ಎನ್ನುವ ಸಂದೇಶವನ್ನು ಜಗತ್ತಿಗೆ ನೀಡುವುದು ನಮ್ಮ ಗುರಿಯಾಗಿದೆ” ಎಂದಿದ್ದ  ರಝಾನ್ ರ ದೇಹಕ್ಕೆ ಬಂದೂಕಿನ ಗುರಿಯಿಟ್ಟ ಇಸ್ರೇಲಿ ಪಡೆ ಆಕೆಯ ದಿಟ್ಟತೆಯ ಮುಂದೆ, ಆತ್ಮಸ್ಥೈರ್ಯದ ಮುಂದೆ, ಮಾನವೀಯ ಸೇವೆಯ ಮುಂದೆ ಅಕ್ಷರಶಃ ಸೋತಿದೆ.  

Writer - ಫಾತಿಮಾ ರಿಫಾ

contributor

Editor - ಫಾತಿಮಾ ರಿಫಾ

contributor

Similar News