×
Ad

ರಕ್ತಪಾತ ನಿಲ್ಲಿಸುವಂತೆ ಭಾರತ ಮತ್ತು ಪಾಕ್ ಪಡೆಗಳಿಗೆ ಮೆಹಬೂಬ ಮುಫ್ತಿ ಕರೆ

Update: 2018-06-03 19:26 IST

ಶ್ರೀನಗರ,ಜೂ.3: ಜಮ್ಮು ಪ್ರದೇಶದಲ್ಲಿಯ ಅಂತಾರಾಷ್ಟ್ರೀಯ ಗಡಿಯಲ್ಲಿ ಮತ್ತೆ ಕದನ ವಿರಾಮ ಉಲ್ಲಂಘನೆಯು ದುರದೃಷ್ಟಕರ ಎಂದು ರವಿವಾರ ಇಲ್ಲಿ ಬಣ್ಣಿಸಿದ ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಅವರು,ಭಾರತ ಮತ್ತು ಪಾಕಿಸ್ತಾನಗಳ ಮಿಲಿಟರಿ ಕಾರ್ಯಾಚರಣೆಗಳ ಮಹಾ ನಿರ್ದೇಶಕ(ಡಿಜಿಎಂಒ)ರು ಪುನಃ ಮಾತುಕತೆಗಳನ್ನು ನಡೆಸಬೇಕು ಮತ್ತು ಗಡಿಯಲ್ಲಿನ ರಕ್ತಪಾತವನ್ನು ನಿಲ್ಲಿಸಬೇಕು ಎಂದು ಹೇಳಿದರು.

ಗಡಿಯಲ್ಲಿ ಹೊಸದಾಗಿ ನಡೆದ ಕದನ ವಿರಾಮ ಉಲ್ಲಂಘನೆಯಲ್ಲಿ ಇಬ್ಬರು ಬಿಎಎಸ್‌ಎಫ್ ಯೋಧರು ಸಾವನ್ನಪ್ಪಿದ್ದಾರೆ ಮತ್ತು ಹಲವಾರು ನಾಗರಿಕರು ಗಾಯಗೊಂಡಿದ್ದಾರೆ. ಇದು ಅತ್ಯಂತ ದುರದೃಷ್ಟಕರ ಮತ್ತು ಡಿಜಿಎಂಒ ಮಟ್ಟದಲ್ಲಿ ಮಾತುಕತೆಗಳು ನಡೆದಿದ್ದರೂ ಈ ಕದನ ವಿರಾಮ ಉಲ್ಲಂಘನೆ ನಡೆದಿದೆ. ಇದು ನಡೆಯಬಾರದಿತ್ತು ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು ಹೇಳಿದರು.

ಗುಂಡಿನ ದಾಳಿಯಿಂದ ಗಡಿಯ ಇಕ್ಕೆಲಗಳಲ್ಲಿರುವವರು ಸಾಯುತ್ತಿದ್ದಾರೆ ಎಂದ ಅವರು,ಮತ್ತೊಮ್ಮೆ ಮಾತುಕತೆಗಳನ್ನು ನಡೆಸುವಂತೆ ಮತ್ತು ಗಡಿಯಲ್ಲಿ ರಕ್ತಪಾತವನ್ನು ನಿಲ್ಲಿಸುವಂತೆ ಉಭಯ ರಾಷ್ಟ್ರಗಳ ಡಿಜಿಎಂಒಗಳಿಗೆ ಕರೆ ನೀಡಿದರು.

ಜಮ್ಮು-ಕಾಶ್ಮೀರದಲ್ಲಿ ಗಡಿ ಘರ್ಷಣೆಗಳನ್ನು ನಿಲ್ಲಿಸಲು 2003ರ ಕದನ ವಿರಾಮ ಒಪ್ಪಂದವನ್ನು ತಕ್ಷಣದಿಂದಲೇ ಸಂಪೂರ್ಣವಾಗಿ ಜಾರಿಗೊಳಿಸಲು ಉಭಯ ರಾಷ್ಟ್ರಗಳ ಡಿಜಿಎಂಒಗಳು ಮೇ 29ರಂದು ನಡೆಸಿದ ಸಭೆಯಲ್ಲಿ ಒಪ್ಪಿಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News