ರೈತರ ಪ್ರತಿಭಟನೆಯನ್ನು ಮಾಧ್ಯಮಗಳ ಗಮನ ಸೆಳೆಯುವ ತೆವಲು ಎಂದ ಕೇಂದ್ರ ಸಚಿವ !
ಹೊಸದಿಲ್ಲಿ,ಜೂ.3: ಇದು ಮಾಧ್ಯಮಗಳ ಗಮನ ಸೆಳೆಯುವ ಕೆಲವರ ತೆವಲು ಎನ್ನುವ ಮೂಲಕ ಕೇಂದ್ರ ಕೃಷಿ ಸಚಿವ ರಾಧಾಮೋಹನ ಸಿಂಗ್ ಅವರು ದೇಶಾದ್ಯಂತ ರೈತರು ನಡೆಸುತ್ತಿರುವ ಪ್ರತಿಭಟನೆಯನ್ನು ತಳ್ಳಿಹಾಕಿದ್ದಾರೆ. ಸಚಿವರ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಪ್ರತಿಪಕ್ಷಗಳು ಅವರ ರಾಜೀನಾಮೆಗೆ ಆಗ್ರಹಿಸಿವೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ರೈತರ ಪ್ರತಿಭಟನೆ ಕುರಿತು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಿಂಗ್,ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳಬೇಕಾದರೆ ಏನಾದರೂ ವಿಲಕ್ಷಣ ಕೃತ್ಯಗಳು ಅಗತ್ಯವಾಗಿರುತ್ತವೆ. ದೇಶದಲ್ಲಿ ಸುಮಾರು 12ರಿಂದ 14 ಕೋಟಿ ರೈತರಿದ್ದಾರೆ. ಕೆಲವು ಸಾವಿರ ಹಿಂಬಾಲಕರನ್ನು ಹೊಂದಿರುವ ರೈತರ ಸಂಘಟನೆಗಳೂ ಇರುತ್ತವೆ ಮತ್ತು ಇವುಗಳಿಗೆ ಪ್ರಚಾರದ ತೆವಲು ಇರುತ್ತದೆ ಎಂದು ಹೇಳಿದ್ದರು. ಸಚಿವರನ್ನು ತೀವ್ರ ತರಾಟೆಗೆತ್ತಿಕೊಂಡಿರುವ ಬಿಹಾರದಲ್ಲಿನ ಪ್ರತಿಪಕ್ಷಗಳು,ರೈತರ ಬವಣೆಗಳಿಗೆ ಅವರು ಸಂವೇದನಾಹೀನರಾಗಿದ್ದಾರೆ ಎಂದು ಆರೋಪಿಸಿವೆ.
ಇದು ರೈತರ ಕುರಿತು ಸಚಿವರ ಅತ್ಯಂತ ಸಂವೇದನಾ ಶೂನ್ಯ ಹೇಳಿಕೆಯಾಗಿದ್ದು ಅವರನ್ನು ತಕ್ಷಣ ಹುದ್ದೆಯಿಂದ ವಜಾಗೊಳಿಸಬೇಕು ಎಂದು ಆರ್‌ಜೆಡಿ ವಕ್ತಾರ ಮನೋಜ ಝಾ ಹೇಳಿದರೆ,ಬಿಜೆಪಿಯು ಹತಾಶ ರೈತರ ಸಮಸ್ಯೆಗಳನ್ನು ಬಗೆಹರಿಸುವ ಬದಲು ಅವರನ್ನು ಗೇಲಿ ಮಾಡುತ್ತಿದೆ ಎಂದು ಕಾಂಗ್ರೆಸ್ ಶಾಸಕ ಸದಾನಂದ ಸಿಂಗ್ ಕಿಡಿಕಾರಿದರು.
ಸಚಿವರ ಹೇಳಿಕೆಯು ಅವರ ಊಳಿಗಮಾನ್ಯ ಮನಃಸ್ಥಿತಿಯ ಪ್ರತಿಬಿಂಬವಾಗಿದೆ. ರೈತ ವಿರೋಧಿ ಕೃಷಿ ಸಚಿವರನ್ನು ತಕ್ಷಣ ವಜಾಗೊಳಿಸುವಂತೆ ನಾವು ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಗ್ರಹಿಸುತ್ತೇವೆ ಎಂದು ಬಿಹಾರದ ಮಾಜಿ ಮುಖ್ಯಮಂತ್ರಿ ಹಾಗೂ ಹಿಂದುಸ್ಥಾನಿ ಆವಾಮ್ ಮೋರ್ಚಾದ ಸ್ಥಾಪಕ ಜಿತನರಾಂ ಮಾಂಝಿ ಅವರು ಹೇಳಿದರು.