ಊರ ಒಳಗಣ ಬಯಲು

Update: 2018-06-04 18:32 GMT

ಊರ ಒಳಗಣ ಬಯಲು, ಊರ ಹೊರಗಣ ಬಯಲೆಂದುಂಟೆ?
ಊರೊಳಗೆ ಬ್ರಾಹ್ಮಣ ಬಯಲು, ಊರ ಹೊರಗೆ ಹೊಲೆಬಯಲೆಂದುಂಟೆ?
ಎಲ್ಲಿ ನೋಡಿದೊಡೆ ಬಯಲೊಂದೆ;
ಭಿತ್ತಿಯಿಂದ ಒಳಹೊರಗೆಂಬ ನಾಮವೈಸೆ.
ಎಲ್ಲಿ ನೋಡಿದಡೆ ಕರೆದಡೆ ಓ ಎಂಬಾತನೆ ಬಿಡಾಡಿ.
                                         -ಬೊಂತಾದೇವಿ

 ಕಾಶ್ಮೀರದ ಮಾಂಡವ್ಯಪುರ ರಾಜನ ಮಗಳು ನಿಜದೇವಿ ಶಿವಭಕ್ತಿಯಲ್ಲಿ ತಲ್ಲೀನಳಾಗಿ ವೈರಾಗ್ಯ ತಾಳಿ ಕಲ್ಯಾಣಕ್ಕೆ ಬಂದು ನೆಲೆಸಿದಳು. ಆಕೆ ಸಕಲ ಸೌಭಾಗ್ಯವನ್ನು ಬಿಟ್ಟು ಬರುವಾಗ ಉಟ್ಟ ಬಟ್ಟೆಯನ್ನೂ ಕಳೆದು ಬಿಸಾಕುತ್ತಾಳೆ. ಬೊಂತೆ (ಕೌದಿ)ಯನ್ನು ಹೊದ್ದುಕೊಂಡು ಕಲ್ಯಾಣಕ್ಕೆ ಬಂದ ಕಾರಣ ಕಲ್ಯಾಣದ ಜನ ಅವಳನ್ನು ‘ಬೊಂತಾದೇವಿ’ ಎಂದು ಕರೆದರು. ‘ಬಿಡಾಡಿ’ ಇವಳ ವಚನಾಂಕಿತ. ಬಿಡಾಡಿ ಎಂದರೆ ಯಾವ ಎಲ್ಲೆಗಳೂ ಇಲ್ಲದ ಬಯಲರೂಪ ಪಡೆದ ಶಿವ. ಸ್ವತಂತ್ರ ಮನೋಭಾವದ ಬೊಂತಾದೇವಿಯ ಶಿವ ಎಲ್ಲೆಡೆಯೂ ಇದ್ದಾನೆ. ಆದರೆ ಯಾವುದರಲ್ಲಿಯೂ ಸೀಮಿತವಾಗಿಲ್ಲ. ಬೊಂತಾದೇವಿಯ ಬಯಲಿನ ಪರಿಕಲ್ಪನೆ ಓದುಗರ ಮೇಲೆ ಅಚ್ಚಳಿಯದ ಪರಿಣಾಮ ಬೀರುತ್ತದೆ. ಅವಳ ಆರು ವಚನಗಳು ಸಿಕ್ಕಿವೆ. ಅವುಗಳಲ್ಲಿ ಬಯಲಿನ ಕಲ್ಪನೆಯೇ ಪ್ರಮುಖವಾಗಿದೆ.
 ಅನಂತನೂ ಲಯಕ್ಕೆ ಒಳಗಾಗದವನೂ ಆದಂಥ ದೇವರು ಬಯಲುರೂಪಿಯಾಗಿದ್ದು ಯಾವುದೇ ಕಟ್ಟುಪಾಡುಗಳು ಇಲ್ಲದ ಕಾರಣ ಬೊಂತಾದೇವಿ ಆತನನ್ನು ‘ಬಿಡಾಡಿ’ ಎಂದು ಕರೆದಿರುವುದು ಸಮಂಜಸವಾಗಿದೆ. ಈ ವಚನದಲ್ಲಿ ಬಯಲು ಎಂಬುದು ದೇವರು, ಬಾಹ್ಯಾಕಾಶ ಮತ್ತು ಸಮಾಜ ಎಂಬ ಮೂರು ಪ್ರಕಾರದಲ್ಲಿ ಧ್ವನಿಸುತ್ತದೆ. ದೇವರು, ವಿಶ್ವ ಮತ್ತು ಸಮಾಜದೊಳಗಿನ ಎಲ್ಲ ಜೀವರು ಆಂತರಿಕ ಸಂಬಂಧವನ್ನು ಹೊಂದಿದವರೇ ಆಗಿದ್ದಾರೆ ಎಂಬುದು ಬೊಂತಾದೇವಿಯ ನಿಲುವು. ಈ ಬಯಲನ್ನು ವಿಜ್ಞಾನಿಗಳು ಆಕಾಶ, ಬಾಹ್ಯಾಕಾಶ ಎಂದು ಮುಂತಾಗಿ ವಿಭಾಗಿಸುತ್ತಾರೆ. ಧಾರ್ಮಿಕರು ಈ ಬಯಲಿಗೆ ನೂರೆಂಟು ದೇವರುಗಳ ಹೆಸರು ಕೊಡುತ್ತಾರೆ. ವರ್ಣಭೇದ ನೀತಿಯ ಜನರು ಸಮಾಜವನ್ನು ಕರಿಯರು-ಬಿಳಿಯರು ಮತ್ತು ಸವರ್ಣೀಯರು-ಅಸ್ಪಶ್ಯರು ಮುಂತಾಗಿ ವಿಭಾಗಿಸುತ್ತಾರೆ. ಎಲ್ಲವನ್ನೂ ಮತ್ತು ಎಲ್ಲರನ್ನೂ ಒಳಗೊಂಡ ಬಯಲನ್ನು ಹೀಗೆ ವಿಭಾಗಿಸಬಹುದೇ ಎಂಬುದು ಬೊಂತಾದೇವಿಯ ಪ್ರಶ್ನೆಯಾಗಿದೆ. ಮಾನವರ ಮಧ್ಯೆ ಅಡ್ಡಗೋಡೆ ಕಟ್ಟಿ ‘ಒಳಗೆ - ಹೊರಗೆ’ ಎಂದು ಹೆಸರು ಕೊಡುವುದುಂಟೆ ಎಂಬ ಅವಳ ಪ್ರಶ್ನೆ ವರ್ಣ, ಜಾತಿ ಮತ್ತು ಉಪಜಾತಿಗಳಿಂದ ಕೂಡಿದ ಶ್ರೇಣೀಕೃತ ಸಮಾಜದ ಅತಾರ್ಕಿಕತೆಯ ಮೇಲೆ ಬೆಳಕು ಚೆಲ್ಲುತ್ತದೆ. ಎಲ್ಲೆಡೆ ಇರುವ ಶಿವ ಯಾರೇ ನಂಬಿ ಕರೆದರೂ ಓ ಎನ್ನುತ್ತಾನೆ ಎಂಬ ಆತ್ಮವಿಶ್ವಾಸ ಅವಳದು. ಅಧ್ಯಾತ್ಮದ ತುದಿಯನ್ನು ಮುಟ್ಟಿದ್ದ ಬೊಂತಾದೇವಿಯ ಮನಸ್ಸು ಸಮತಾಭಾವದಿಂದ ಹಾಗೂ ಸಾಮಾಜಿಕ ಕಳಕಳಿಯಿಂದ ತುಂಬಿತ್ತು ಎಂಬುದಕ್ಕೆ ಈ ವಚನ ಸಾಕ್ಷಿಯಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News