“ಟ್ರಂಪ್ ಗಿಂತಲೂ ಮೋದಿ ಕೆಟ್ಟವರೇ?'': ಬಿಬಿಸಿ ಸಂದರ್ಶಕ ಕೇಳಿದ ಪ್ರಶ್ನೆಗೆ ಅರುಂಧತಿ ರಾಯ್ ನೀಡಿದ ಉತ್ತರವಿದು

Update: 2018-06-06 13:15 GMT

ಹೊಸದಿಲ್ಲಿ, ಜೂ.6: ಭಾರತದ ಖ್ಯಾತ ಲೇಖಕಿ ಅರುಂಧತಿ ರಾಯ್ ಬಿಬಿಸಿಯ ಜನಪ್ರಿಯ ಶೋ ‘ನ್ಯೂಸ್ ನೈಟ್’ನಲ್ಲಿ ಸೋಮವಾರ ತಮ್ಮ ಹೊಸ ಕೃತಿ “ದಿ ಮಿನಿಸ್ಟ್ರಿ ಆಫ್ ಅಟ್ ಮೋಸ್ಟ್ ಹ್ಯಾಪಿನೆಸ್'' ಬಗ್ಗೆ  ಮಾತನಾಡಿರುವ ವಿಡಿಯೋವನ್ನು ಬಿಬಿಸಿ ಪೋಸ್ಟ್ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಅದು ವೈರಲ್ ಆಗಿದೆ.

ವೀಡಿಯೊದಲ್ಲಿ ರಾಯ್ ಅವರು ಪ್ರಧಾನಿ ನರೇಂದ್ರ ಮೋದಿಯನ್ನು ಟೀಕಿಸಿದ್ದಾರಲ್ಲದೆ ತಾವು ಅವರ ಅಭಿಮಾನಿಯಲ್ಲ ಎಂದು ನಯವಾಗಿಯೇ ಹೇಳಿದ್ದಾರೆ. ಬಿಜೆಪಿ ಆಡಳಿತದಲ್ಲಿ ಸಂಪೂರ್ಣ ಕುಸಿದಿರುವ ಕಾನೂನು ಸುವ್ಯವಸ್ಥೆಯನ್ನು ಬೊಟ್ಟು ಮಾಡಿ ತೋರಿಸಿರುವ ಅರುಂಧತಿ ರಾಯ್ ದೇಶದ ‘ಪ್ರಮುಖ’ ಸಂಸ್ಥೆಗಳನ್ನು ಹೇಗೆ ತಮ್ಮ ಕೈವಶ ಮಾಡಿಕೊಳ್ಳಲಾಗಿದೆ ಎನ್ನುವುದರ ಬಗ್ಗೆಯೂ ಹೇಳಿಕೊಂಡಿದ್ದಾರೆ.

“ಮೋದಿ ನೀವು ಭಯಪಡುವಷ್ಟು ಕೆಟ್ಟವರೇ?” ಎಂದು ಸಂದರ್ಶನ ನಡೆಸಿದ ಇವಾನ್ ಡೇವಿಸ್ ಪ್ರಶ್ನಿಸಿದಾಗ ಉತ್ತರಿಸುವ ಅರುಂಧತಿ ರಾಯ್, “ಹೌದು, ಇಂದು ಮುಸ್ಲಿಂ ಸಮುದಾಯವನ್ನು ಬೆದರಿಸಲಾಗುತ್ತಿದೆ. ಜನರು ರಸ್ತೆಗಳಲ್ಲಿಯೇ ಥಳಿತಕ್ಕೊಳಗಾಗುತ್ತಿರುವುದು ನೀವು ನೋಡುತ್ತಿದ್ದೀರಿ. ಈ ಹಿಂದೆ ಅವರ ಭಾಗವಾಗಿದ್ದ ಉದ್ಯಮದಿಂದ ಅವರನ್ನು ಹೊರದೂಡಲಾಗುತ್ತಿದೆ, ಇದರರ್ಥ ಮಾಂಸದಂಗಡಿ, ಚರ್ಮೋದ್ಯಮ, ಕರಕುಶಲ ಉದ್ಯಮ ಎಲ್ಲವೂ ದಾಳಿಗೊಳಗಾಗಿದೆ. ಭಾರತದಲ್ಲಿನ ಹಿಂಸೆ ಭಯಭೀತಗೊಳಿಸುತ್ತದೆ. ಕಾಶ್ಮೀರದಲ್ಲಿ ಪುಟ್ಟ ಬಾಲಕಿಯೊಬ್ಬಳ ಅತ್ಯಾಚಾರದ ಬಗ್ಗೆ ನೀವು ಕೇಳಿರಬಹುದು. ಆದರೆ ಅತ್ಯಾಚಾರಿಗಳ ಬೆಂಬಲಕ್ಕೆ ನಿಂತ ಮಹಿಳೆಯರೂ ಸೇರಿದಂತೆ ಹಲವರು ಮೆರವಣಿಗೆ ನಡೆಸಿದರು. ವಿಚಾರಣೆ ನಡೆಸುತ್ತಿರುವ ರೀತಿಯನ್ನು ಬದಲಾಯಿಸಲೂ ಯತ್ನಿಸಲಾಗಿದೆ. ಈ ಧ್ರುವೀಕರಣ ಭಯ ಹುಟ್ಟಿಸುತ್ತಿದೆ'' ಎಂದು ಹೇಳುತ್ತಾರೆ.

“ಹಾಗಾದರೆ ಮೋದಿ ಟ್ರಂಪ್ ಅವರಿಗಿಂತಲೂ ಅಥವಾ ಜಗತ್ತಿನ ಇತರೆಡೆ ಇರುವ ರಾಷ್ಟ್ರೀಯವಾದಿ ನಾಯಕರುಗಳಿಗಿಂತಲೂ  ಕೆಟ್ಟವರೇ” ಎನ್ನುವ ಪ್ರಶ್ನೆಗೆ ಉತ್ತರಿಸುವ ಅವರು, “ಟ್ರಂಪ್ ಅವರನ್ನು ನೋಡಿ, ಅವರು ನಿಯಂತ್ರಣ ಮೀರಿದ್ದಾರೆ. ಆದರೆ ಎಲ್ಲಾ ಸಂಸ್ಥೆಗಳೂ -ಮಾಧ್ಯಮ, ನ್ಯಾಯಾಂಗ, ಮಿಲಿಟರಿ ಚಿಂತೆಗೀಡಾಗಿವೆ. ಜನರು ಹೇಗೋ ಸಂಭಾಳಿಸುತ್ತಿದ್ದಾರೆ. ಆದರೆ ಭಾರತದಲ್ಲಿ ಎಲ್ಲಾ ಪ್ರಮುಖ ಸಂಸ್ಥೆಗಳನ್ನು ಯಾವುದಾದರೂ ವಿಧದಲ್ಲಿ ವಶಕ್ಕೆ ಪಡೆಯಲಾಗಿದೆ.  ನನ್ನ ಮಾತಿನ ಅರ್ಥ ಏನೆಂದರೆ ನ್ಯೂಯಾರ್ಕ್ ಟೈಮ್ಸ್ ಲೇಖನವೊಂದನ್ನು ಪ್ರಕಟಿಸಿತ್ತು. ಹಿಟ್ಲರ್ ನ ಚಿತ್ರದ ಮುಖಪುಟವಿರುವ ‘ಜಾಗತಿಕ ನಾಯಕರ ಶಾಲಾ ಪುಸ್ತಕ’ದ ಬಗ್ಗೆ ಲೇಖನದಲ್ಲಿ ಬರೆಯಲಾಗಿತ್ತು. ನಮ್ಮಲ್ಲಿ ನಾಲ್ಕು ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಬಹಿರಂಗವಾಗಿ ಮುಖ್ಯ ನ್ಯಾಯಮೂರ್ತಿಯ ವಿರುದ್ಧ ಸಿಡಿದೆದ್ದಿದ್ದಾರೆ. ಇದು ಹಿಂದೆ ನಡೆದಿರಲಿಲ್ಲ. ‘ಪ್ರಜಾಪ್ರಭುತ್ವ ಅಪಾಯದಲ್ಲಿದೆ, ನ್ಯಾಯಾಲಯಗಳನ್ನು ಫಿಕ್ಸ್ ಮಾಡಲಾಗಿದೆ’ ಎಂದು ಅವರು ಹೇಳಿದ್ದರು'' ಎಂದು ರಾಯ್ ಸ್ಮರಿಸಿಕೊಂಡರು.

ಅರುಂಧತಿ ರಾಯ್ ರ ದಿಟ್ಟ ಉತ್ತರ ಸಂದರ್ಶನ ನಡೆಸಿದ ಡೇವಿಸ್ ರನ್ನು ಒಂದು ಕ್ಷಣ ದಂಗುಬಡಿಸಿತು. ಬಿಬಿಸಿ ಸಂದರ್ಶನದ ತುಣುಕಿನ ವಿಡಿಯೋವನ್ನು ಪೋಸ್ಟ್ ಮಾಡುತ್ತಲೇ ಅದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

‘ಬಿಬಿಸಿ’ಯ ‘ನ್ಯೂಸ್ ನೈಟ್ ಶೋ’ ಬ್ರಿಟಿಷ್ ರಾಜಕಾರಣಿಗಳಲ್ಲಿ ಬಹಳಷ್ಟು ಜನಪ್ರಿಯವಾಗಿದ್ದು, ವಿದೇಶಗಳಲ್ಲಿ ಮೋದಿ ಅವರ ವರ್ಚಸ್ಸಿನ ಮೇಲೆ ಇದು ವ್ಯತಿರಿಕ್ತ ಪರಿಣಾಮ ಬೀರಬಹುದೆಂದೇ ನಂಬಲಾಗಿದೆ. ಈ ವರ್ಷದ ಏಪ್ರಿಲ್ ತಿಂಗಳಲ್ಲಿ  ಅವರ ಲಂಡನ್ ಭೇಟಿ ವೇಳೆಯೂ ಪ್ರತಿಭಟನೆಗಳು ನಡೆದಿದ್ದವು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News