ಫ್ರೆಂಚ್ ಓಪನ್ ಟೂರ್ನಿಯಲ್ಲಿ ಸೋಲು: ವಿಂಬಲ್ಡನ್‌ನಿಂದ ಹೊರಗುಳಿಯಲು ಜೊಕೊವಿಕ್ ಚಿಂತನೆ

Update: 2018-06-06 15:03 GMT

ಪ್ಯಾರಿಸ್, ಜೂ.6: ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯ ಕ್ವಾರ್ಟರ್ ಫೈನಲ್‌ನಲ್ಲಿ ವಿಶ್ವದ 72ನೇ ಶ್ರೇಯಾಂಕದ ಆಟಗಾರ ಇಟಲಿಯ ಮಾರ್ಕೊ ಸೆಚಿನಾಟೊ ಎದುರು ಆಘಾತಕಾರಿ ಸೋಲುಂಡ ವಿಶ್ವದ ಮಾಜಿ ನಂ.1 ಆಟಗಾರ ಸರ್ಬಿಯಾದ ನೊವಾಕ್ ಜೊಕೊವಿಕ್, ಮುಂಬರುವ ವಿಂಬಲ್ಡನ್ ಟೂರ್ನಿಯಿಂದ ಹೊರಗುಳಿಯುವ ಬಗ್ಗೆ ಚಿಂತನೆ ನಡೆಸಿದ್ದಾರೆ.

ಸೆಚಿನಾಟೊ ಎದುರು 6-3, 7-6(7-4), 1-6, 7-6(13-11) ಕಠಿಣ ಹೋರಾಟ ನಡೆಸಿಯೂ ಸೋಲುಂಡ ಜೊಕೊವಿಕ್, ಈಗ ತನ್ನ ಆಟದ ಲಯವನ್ನು ಮರಳಿ ಕಂಡುಕೊಳ್ಳಲು ಹಾಗೂ ಮಾನಸಿಕ ದೃಢತೆಯನ್ನು ಕಂಡುಕೊಳ್ಳುವ ಉದ್ದೇಶದಿಂದ ವಿಂಬಲ್ಡನ್ ಟೂರ್ನಿಯಲ್ಲಿ ಪಾಲ್ಗೊಳ್ಳದಿರುವ ಬಗ್ಗೆ ಚಿಂತನೆ ನಡೆಸಿದ್ದಾರೆ. ವಿಂಬಲ್ಡನ್‌ನ ಹುಲ್ಲು ಹಾಸಿನ ಅಂಗಣದಲ್ಲಿ ನಾನು ಆಡುವ ಬಗ್ಗೆ ಇನ್ನೂ ನಿರ್ಧರಿಸಿಲ್ಲ. ಈ ಕ್ಷಣಕ್ಕೆ ಟೆನಿಸ್ ಬಗ್ಗೆ ಚಿಂತಿಸದಿರಲು ನಾನು ನಿರ್ಧರಿಸಿದ್ದೇನೆ ಎಂದು ಆಘಾತಕಾರಿ ಸೋಲುಂಡ ಬಳಿಕ ಜೊಕೊವಿಕ್ ತಿಳಿಸಿದ್ದಾರೆ. 2016ರಲ್ಲಿ ಫ್ರೆಂಚ್ ಓಪನ್ ಟೆನಿಸ್ ಪ್ರಶಸ್ತಿ ಗೆದ್ದ ಬಳಿಕ ಜೊಕೊವಿಕ್ ಯಾವುದೇ ಗ್ರಾಂಡ್‌ಸ್ಲಾಂ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿಲ್ಲ. ಆ ವರ್ಷ ತಮ್ಮ ಟೆನಿಸ್ ಸಾಧನೆಯ ಉತ್ತುಂಗದಲ್ಲಿದ್ದ ಜೊಕೊವಿಕ್ ಎಲ್ಲಾ ಗ್ರಾಂಡ್‌ಸ್ಲಾಂ ಪ್ರಶಸ್ತಿ ಗೆದ್ದ ಸಾಧನೆ ತೋರಿದ್ದರಲ್ಲದೆ, ವೃತ್ತಿಜೀವನದಲ್ಲಿ 100 ಮಿಲಿಯನ್‌ಗೂ ಹೆಚ್ಚಿನ ಬಹುಮಾನ ಮೊತ್ತ ಪಡೆದ ಪ್ರಥಮ ಆಟಗಾರನಾಗಿ ಮೂಡಿಬಂದಿದ್ದರು. 68 ಪ್ರಶಸ್ತಿಗಳ ಒಡೆಯ ಜೊಕೊವಿಕ್ 2016ರ ಫ್ರೆಂಚ್ ಓಪನ್ ಟೂರ್ನಿಯ ಗೆಲುವಿನ ಬಳಿಕ ಕೇವಲ ನಾಲ್ಕು ಪ್ರಶಸ್ತಿ ಮಾತ್ರ ಗೆದ್ದಿರುವುದು ಅವರ ಫಾರ್ಮ್ ಕೈಕೊಟ್ಟಿರುವುದರ ಸೂಚಕವಾಗಿದೆ. ಸುದೀರ್ಘ ಅವಧಿಯಿಂದ ಮೊಣಕೈ ಗಂಟಿನ ನೋವಿಗೆ ಒಳಗಾಗಿರುವ ಜೊಕೊವಿಕ್, ಇದೀಗ ವಿಶ್ವಶ್ರೇಯಾಂಕದಲ್ಲಿ 22ನೇ ಸ್ಥಾನಕ್ಕೆ ಕುಸಿದಿದ್ದು ಕಳೆದ 12 ವರ್ಷಗಳ ವೃತ್ತಿ ಜೀವನದಲ್ಲೇ ಅವರು ಪಡೆದಿರುವ ಅತ್ಯಂತ ಕನಿಷ್ಟ ಶ್ರೇಯಾಂಕವಾಗಿದೆ. 2015ರಲ್ಲಿ 11 ಪ್ರಶಸ್ತಿ ಗೆದ್ದಿದ್ದ ಜೊಕೊವಿಕ್ 2016ರಲ್ಲಿ 7 ಪ್ರಶಸ್ತಿ ಗೆದ್ದಿದ್ದರು. ಆದರೆ 2017ರಲ್ಲಿ ಕೇವಲ 2 ಪ್ರಶಸ್ತಿ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಈ ವರ್ಷದಲ್ಲಿಯೂ ಜೊಕೊವಿಕ್ ನಿರಾಶಾದಾಯಕ ಆರಂಭ ಪಡೆದಿದ್ದಾರೆ. ಆಸ್ಟ್ರೇಲಿಯನ್ ಓಪನ್ ಟೂರ್ನಿಯಲ್ಲಿಯೂ ಪ್ರಿ-ಕ್ವಾರ್ಟರ್ ಫೈನಲ್ ಹಂತದಲ್ಲಿ ಮುಗ್ಗರಿಸಿದ್ದರು. ಇಂಡಿಯನ್ ವೇಲ್ಸ್ ಟೂರ್ನಿಯಲ್ಲಿ 109ನೇ ಶ್ರೇಯಾಂಕದ ಆಟಗಾರ ಟಾರೊ ಡೇನಿಯಲ್ ಎದುರು, ಮಿಯಾಮಿ ಟೂರ್ನಿಯಲ್ಲಿ 47ನೇ ಶ್ರೇಯಾಂಕ ಪಡೆದ ಆಟಗಾರನೆದುರು, ಬಾರ್ಸೆಲೋನಾ ಟೂರ್ನಿಯಲ್ಲಿ 140ನೇ ಶ್ರೇಯಾಂಕ ಪಡೆದಿರುವ ಆಟಗಾರನೆದುರು ಮುಗ್ಗರಿಸಿದ್ದರೆ, ರೋಮ್ ಟೆನಿಸ್ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಿದರೂ ರಫೆಲ್ ನಡಾಲ್ ಎದುರು ಜೊಕೊವಿಕ್ ಆಟ ಸಾಗಲಿಲ್ಲ. ಜೀವನದಲ್ಲಿ ಈಗ ಕಷ್ಟದ ಕಾಲವಾಗಿದೆ. ತಿಂಗಳುಗಟ್ಟಲೆ ಶ್ರಮವಹಿಸಿ ಸಿದ್ಧತೆ ನಡೆಸಿದ್ದರೂ ಗ್ರಾಂಡ್‌ಸ್ಲಾಂ ಟೂರ್ನಿಯಲ್ಲಿ ಎದುರಾಗುವ ಸೋಲನ್ನು ಅರಗಿಸಿಕೊಳ್ಳಲು ಕಷ್ಟವಾಗುತ್ತದೆ ಎಂದು ಜೊಕೊವಿಕ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News