ಸಿಗದ ಆ್ಯಂಬುಲೆನ್ಸ್: ತುಂಬು ಗರ್ಭಿಣಿಯನ್ನು ಬೆಡ್ ಶೀಟ್ ನಲ್ಲಿ ಕಟ್ಟಿ 7 ಕಿ.ಮೀ. ನಡೆದರು!

Update: 2018-06-07 09:43 GMT

ಪಾಲಕ್ಕಾಡ್, ಜೂ.7: ರಸ್ತೆ ಇಲ್ಲ ಎಂಬ ಕಾರಣಕ್ಕೆ ಆಸ್ಪತ್ರೆ ಸಿಬ್ಬಂದಿ ಆ್ಯಂಬುಲೆನ್ಸ್ ಕಳುಹಿಸಲು ನಿರಾಕರಿಸಿದ್ದರಿಂದ ಕುಟುಂಬಸ್ಥರು ತುಂಬು ಗರ್ಭಿಣಿಯನ್ನು ಬೆಟ್‍ಶೀಟ್‍ನಲ್ಲಿ ಕಟ್ಟಿ ಏಳು ಕಿಲೋಮೀಟರ್ ದೂರದ ಆಸ್ಪತ್ರೆಗೆ ಒಯ್ದ ಘಟನೆ ಬೆಳಕಿಗೆ ಬಂದಿದೆ. 

ಈ ಕುರಿತ ವಿಡಿಯೊ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನಾಲ್ಕು ಮಂದಿ ಬರಿಗಾಲಲ್ಲಿ ಗರ್ಭಿಣಿಯನ್ನು ಒಯ್ಯುತ್ತಿರುವ ದೃಶ್ಯವಿದೆ. ಜಾರುವ ನೆಲದಲ್ಲಿ ಮತ್ತು ಕಲ್ಲಿನಿಂದ ಕೂಡಿದ ದಾರಿಯಲ್ಲಿ ನದಿಬದಿಯಲ್ಲಿ ಮಹಿಳೆಯನ್ನು ಕರೆದೊಯ್ಯುತ್ತಿರುವ ದೃಶ್ಯವಿದೆ.

ಪಾಲಕ್ಕಾಡ್ ಜಿಲ್ಲೆಯ ಅಟ್ಟಪ್ಪಾಡಿ ಗ್ರಾಮದ 27 ವರ್ಷದ ಮಹಿಳೆಯೊಬ್ಬರಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಮನೆಯವರು ಆ್ಯಂಬುಲೆನ್ಸ್ ಗಾಗಿ ಕರೆ ಮಾಡಿದ್ದರು. ಆದರೆ ರಸ್ತೆ ಇಲ್ಲದ ಕಾರಣ ನೀಡಿ ಆಸ್ಪತ್ರೆಯವರು ಆ್ಯಂಬುಲೆನ್ಸ್ ನಿರಾಕರಿಸಿದರು. ಕೊನೆಗೆ ಮಹಿಳೆಯನ್ನು ಬೆಡ್‍ಶೀಟ್‍ನಿಂದ ತಯಾರಿಸಿದ ತಾತ್ಕಾಲಿಕ ಸ್ಟ್ರೆಚರ್ ನಲ್ಲಿ ಒಯ್ಯಬೇಕಾಯಿತು.

ಇದೇ ರೀತಿ ನದಿಯನ್ನೂ ದಾಟಿದ್ದಾರೆ. ಏಳು ಕಿಲೋಮೀಟರ್ ನಡೆದು ಅಲ್ಲಿಂದ ಬಳಿಕ ಖಾಸಗಿ ಕಾರು ವ್ಯವಸ್ಥೆ ಮಾಡಿ, ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಕೇರಳದ ಕೊಟ್ಟತ್ತರ ಸರ್ಕಾರಿ ಬುಡಕಟ್ಟು ಆಸ್ಪತ್ರೆಗೆ ತಲುಪಿದ ಕೆಲವೇ ಕ್ಷಣಗಳಲ್ಲಿ ಮಹಿಳೆಗೆ ಹೆರಿಗೆಯಾಗಿದೆ. ಆಂಬುಲೆನ್ಸ್ ಕಳುಹಿಸಲು ನಾವು ವ್ಯವಸ್ಥೆ ಮಾಡುವ ವೇಳೆಗಾಗಲೇ ಕುಟುಂಬಸ್ಥರು ಪರ್ಯಾಯ ವ್ಯವಸ್ಥೆ ಮಾಡಿಕೊಂಡು ಕರೆತಂದಿದ್ದಾರೆ ಎಂದು ಆಸ್ಪತ್ರೆ ಮೂಲಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News