ಶರದ್ ಯಾದವ್ ವೇತನ, ಭತ್ಯೆಗಳನ್ನು ಸ್ಥಗಿತಗೊಳಿಸಿದ ಸುಪ್ರೀಂ ಕೋರ್ಟ್

Update: 2018-06-07 16:06 GMT

ಹೊಸದಿಲ್ಲಿ, ಜೂ,7: ಮಾಜಿ ಜೆಡಿಯು ಅಧ್ಯಕ್ಷ ಹಾಗು ಬಂಡುಕೋರ ಸಂಸದ ಶರದ್ ಯಾದವ ಅವರು ರಾಜ್ಯಸಭೆಯಿಂದ ತನ್ನನ್ನು ಅನರ್ಹಗೊಳಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯು ಬಾಕಿಯಿರುವವರೆಗೆ ಅವರ ವೇತನ ಮತ್ತು ಭತ್ಯೆಗಳನ್ನು ನಿಲ್ಲಿಸಲು ಸರ್ವೋಚ್ಚ ನ್ಯಾಯಾಲಯವು ಗುರುವಾರ ಆದೇಶಿಸಿದ್ದು, ತನ್ಮೂಲಕ ದಿಲ್ಲಿ ಉಚ್ಚ ನ್ಯಾಯಾಲಯದ ಆದೇಶವನ್ನು ಪರಿಷ್ಕರಿಸಿದೆ.

ಆದರೆ ಯಾದವ್ ಅವರು ತನ್ನ ಅಧಿಕೃತ ನಿವಾಸವನ್ನು ಉಳಿಸಿಕೊಳ್ಳಲು ನ್ಯಾಯಮೂರ್ತಿಗಳಾದ ಎ.ಕೆ.ಗೋಯೆಲ್ ಮತ್ತು ಅಶೋಕ್ ಭೂಷಣ್ ಅವರನ್ನೊಳಗೊಂಡ ರಜಾಕಾಲದ ಪೀಠವು ಅವಕಾಶ ನೀಡಿತು.

ಯಾದವ್ ಅವರು ತನ್ನ ಅಧಿಕೃತ ನಿವಾಸವನ್ನುಳಿಸಿಕೊಳ್ಳಲು ಮತ್ತು ತನ್ನ ವೇತನ,ಭತ್ಯೆಗಳು ಹಾಗೂ ಇತರ ಸೌಲಭ್ಯಗಳನ್ನು ಪಡೆಯಲು ಅವಕಾಶ ಕಲ್ಪಿಸಿದ್ದ ದಿಲ್ಲಿ ಉಚ್ಚ ನ್ಯಾಯಾಲಯದ ಕಳೆದ ವರ್ಷದ ಡಿಸೆಂಬರ್ 15ರ ಆದೇಶವನ್ನು ಪ್ರಶ್ನಿಸಿ ಜೆಡಿಯು ರಾಜ್ಯಸಭಾ ಸದಸ್ಯ ರಾಮಚಂದ್ರ ಪ್ರಸಾದ್ ಸಿಂಗ್ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನಡೆಸಿದ ಸರ್ವೋಚ್ಚ ನ್ಯಾಯಾಲಯವು ಈ ಆದೇಶವನ್ನು ಹೊರಡಿಸಿತು.

ಆದರೆ,ರಾಜ್ಯಸಭಾ ಸದಸ್ಯತ್ವದಿಂದ ಯಾದವ್ ಅನರ್ಹತೆಗೆ ತಡೆಯಾಜ್ಞೆ ನೀಡಲು ಉಚ್ಚ ನ್ಯಾಯಾಲಯವು ನಿರಾಕರಿಸಿತ್ತು.

ಯಾದವ್ ಮತ್ತು ಅವರ ಸಹೋದ್ಯೋಗಿ ಹಾಗೂ ಆಗಿನ ಸಂಸದ ಅಲಿ ಅನ್ವರ್ ಅವರು ಪ್ರತಿಪಕ್ಷ ಆರ್‌ಜೆಡಿಯ ರ್ಯಾಲಿಯಲ್ಲಿ ಭಾಗವಹಿಸುವ ಮೂಲಕ ಪಕ್ಷವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆಂದು ಆರೋಪಿಸಿದ್ದ ಸಿಂಗ್ ಅವರನ್ನು ಅನರ್ಹಗೊಳಿಸುವಂತೆ ಕೋರಿದ್ದರು. 2017,ಡಿ.4ರಂದು ರಾಜ್ಯಸಭೆಯ ಸಭಾಪತಿಗಳು ಅವರಿಬ್ಬರನ್ನೂ ಸದಸ್ಯತ್ವದಿಂದ ಅನರ್ಹಗೊಳಿಸಿದ್ದರು. ಇದನ್ನು ಯಾದವ ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು.

ಉಚ್ಚ ನ್ಯಾಯಾಲಯದ ಆದೇಶದ ವಿರುದ್ಧ ಸಿಂಗ್ ಸಲ್ಲಿಸಿದ್ದ ಮೇಲ್ಮನವಿಯನ್ನು ಮೇ 18ರಂದು ವಿಚಾರಣೆಗೆ ಅಂಗೀಕರಿಸಿದ್ದ ಸರ್ವೋಚ್ಚ ನ್ಯಾಯಾಲಯವು ಯಾದವ ಅವರಿಗೆ ನೋಟಿಸ್‌ನ್ನು ಹೊರಡಿಸಿತ್ತು.

ಯಾದವ ಅವರು 2016ರಲ್ಲಿ ರಾಜ್ಯಸಭೆಗೆ ಆಯ್ಕೆಯಾಗಿದ್ದು,ಅವರ ಅಧಿಕಾರಾವಧಿ 2022,ಜುಲೈನಲ್ಲಿ ಕೊನೆಗೊಳ್ಳಲಿತ್ತು. ಅನ್ವರ್ ಅವರ ರಾಜ್ಯಸಭಾ ಸದಸ್ಯತ್ವ ಕಳೆದ ಎಪ್ರಿಲ್‌ನಲ್ಲಿ ಅಂತ್ಯಗೊಂಡಿದೆ. ಪಕ್ಷಾಂತರ ನಿಷೇಧ ಕಾನೂನಿನಡಿ ಇವರಿಬ್ಬರನ್ನೂ ಅನರ್ಹಗೊಳಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News