ಗೋಧಿ ಖರೀದಿ, ಆಹಾರ ಧಾನ್ಯ ವಿತರಣೆಯಲ್ಲಿ ಅಕ್ರಮ: ಫತೇಹ್‌ಪುರ, ಗೋಂಡಾ ಜಿಲ್ಲಾ ದಂಡಾಧಿಕಾರಿಗಳು ಅಮಾನತು

Update: 2018-06-07 16:18 GMT

ಲಕ್ನೋ, ಜೂ. 7: ಗೋಧಿ ಖರೀದಿ ಹಾಗೂ ಆಹಾರ ಧಾನ್ಯಗಳ ವಿತರಣೆಯಲ್ಲಿನ ಅಕ್ರಮ ಆರೋಪದ ಹಿನ್ನೆಲೆಯಲ್ಲಿ ಉತ್ತರಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಗುರುವಾರ ಫತೇಹ್‌ಪುರ ಹಾಗೂ ಗೋಂಡಾದ ಜಿಲ್ಲಾ ದಂಡಾಧಿಕಾರಿ ಅವರನ್ನು ಅಮಾನತು ಮಾಡಿದ್ದಾರೆ. ‘‘ಅಕ್ರಮವನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ಅವರು ಫತೇಹ್‌ಪುರ ಜಿಲ್ಲಾ ದಂಡಾಧಿಕಾರಿ ಪ್ರಶಾಂತ್ ಕುಮಾರ್ ಹಾಗೂ ಗೋಂಡಾ ಜಿಲ್ಲಾಧಿಕಾರಿ ಜೆ.ಬಿ. ಸಿಂಗ್ ಅವರನ್ನು ಅಮಾನತುಗೊಳಿಸಿದ್ದಾರೆ.’’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 ‘‘ಫತೇಹ್‌ಪುರದಲ್ಲಿ ಗೋಧಿ ಖರೀದಿಯಲ್ಲಿ ಅಕ್ರಮ ಪತ್ತೆಯಾಯಿತು. ಇದಕ್ಕೆ ಜಿಲ್ಲಾ ದಂಡಾಧಿಕಾರಿ ಅವರನ್ನು ಹೊಣೆಯಾಗಿರಿಸಿ ಮುಖ್ಯಮಂತ್ರಿ ಅವರು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಆಹಾರ ಇಲಾಖೆ ಮೇ 31ರಂದು ಪರಿಶೀಲನೆ ನಡೆಸುತ್ತಿದ್ದಾಗ, ಮೇ 13ರಿಂದ ಮೇ 31ರ ವರೆಗೆ ಗೋಧಿ ಖರೀದಿಸಿರುವುದು ಕಂಡು ಬಂದಿಲ್ಲ. ಇದಕ್ಕೆ ಕಾರಣ ಉಲ್ಲೇಖಿಸಿಲ್ಲ’’ ಎಂದು ಅವರು ಹೇಳಿದ್ದಾರೆ. ಗೋಧಿ ಖರೀದಿಗೆ ರೈತರಿಗೆ ಟೋಕನ್ ವಿತರಿಸದೇ ಇರುವುದು ಹಾಗೂ ಈ ಪ್ರಕ್ರಿಯೆಗೆ ಅಡ್ಡಿ ಉಂಟು ಮಾಡಿದ ಆರೋಪದಲ್ಲಿ ಫತೇಹ್‌ಪುರ ಇಲಾಖೆಯ ಹಲವು ಅಧಿಕಾರಿಗಳ ವಿರುದ್ಧ ಪ್ರಥಮ ಮಾಹಿತಿ ವರದಿ ದಾಖಲಿಸುವಂತೆ ಆಹಾರ ಆಯುಕ್ತ ಬುಧವಾರ ಆದೇಶಿಸಿದ್ದರು.

 ಗೋಂಡಾದಲ್ಲಿ ಆಹಾರ ಧಾನ್ಯಗಳ ವಿತರಣೆಯಲ್ಲಿ ಅಕ್ರಮ ಪತ್ತೆಯಾಗಿತ್ತು. ಇಲ್ಲಿ ಜಿಲ್ಲಾ ದಂಡಾಧಿಕಾರಿ ಅವರ ಉಸ್ತುವಾರಿ ಹಾಗೂ ನಿಯಂತ್ರಣದಲ್ಲಿ ಅಲಕ್ಷ ಕಂಡು ಬಂತು. ಇದಕ್ಕಾಗಿ ಅವರನ್ನು ಅಮಾನತುಗೊಳಿಸಲಾಯಿತು ಎಂದು ವಕ್ತಾರರು ತಿಳಿಸಿದ್ದಾರೆ. ಇದಲ್ಲದೆ, ಜಿಲ್ಲಾ ದಂಡಾಧಿಕಾರಿ, ಜಿಲ್ಲಾ ವಿತರಣಾ ಅಧಿಕಾರಿ ರಾಜೀವ್ ಕುಮಾರ್ ಹಾಗೂ ಜಿಲ್ಲಾ ಆಹಾರ ಮಾರುಕಟ್ಟೆ ಅಧಿಕಾರಿ ಅಜಯ್ ವಿಕ್ರಮ್ ಸಿಂಗ್ ಅವರನ್ನು ಕೂಡ ಅಮಾನತುಗೊಳಿಸಲಾಗಿದೆ. ಈ ಪೂರ್ಣ ಅಕ್ರಮದ ಬಗ್ಗೆ ಪ್ರಥಮ ಮಾಹಿತಿ ವರದಿ ದಾಖಲಿಸಲು ಆದೇಶ ನೀಡಲಾಗಿದೆ ಎಂದು ವಕ್ತಾರರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News