ಹರ್ಷ ಭೋಗ್ಲೆ ಟ್ವೀಟ್‌ಗೆ ಪ್ರತಿಕ್ರಿಯಿಸಲು ಹೋಗಿ ಟೀಕೆಗೆ ಗುರಿಯಾದ ರಶೀದ್ ಖಾನ್

Update: 2018-06-08 09:36 GMT

ಹೊಸದಿಲ್ಲಿ, ಜೂ.8: ಅಫ್ಘಾನಿಸ್ತಾನ ಸ್ಪಿನ್ನರ್ ರಶೀದ್ ಖಾನ್ ಬಾಂಗ್ಲಾದೇಶ ವಿರುದ್ಧ ಗುರುವಾರ ನಡೆದ ಟ್ವೆಂಟಿ-20 ಸರಣಿಯ ಅಂತಿಮ ಪಂದ್ಯದ ಕೊನೆಯ ಓವರ್‌ನಲ್ಲಿ ಅಮೋಘ ಬೌಲಿಂಗ್ ಮಾಡಿ ತಂಡಕ್ಕೆ 1 ರನ್ ಗೆಲುವು ತಂದುಕೊಟ್ಟಿದ್ದರು. ಅಫ್ಘಾನಿಸ್ತಾನಕ್ಕೆ ಐತಿಹಾಸಿಕ ಸರಣಿ ಜಯ ತಂದುಕೊಟ್ಟ ರಶೀದ್‌ಗೆ ಖ್ಯಾತ ವೀಕ್ಷಕವಿವರಣೆಗಾರ ಹರ್ಷ ಭೋಗ್ಲೆ ತಮ್ಮ ಟ್ವಿಟರ್‌ನಲ್ಲಿ ಹಾಡಿ ಹೊಗಳಿದ್ದಾರೆ.

‘‘19ರ ಹರೆಯದ ರಶೀದ್ ಅಂತಿಮ ಓವರ್‌ನಲ್ಲಿ ಕೇವಲ 9 ರನ್ ನೀಡಿ ಅಫ್ಘಾನಿಸ್ತಾನ ತಂಡ ಬಾಂಗ್ಲಾ ವಿರುದ್ಧ ಕ್ಲೀನ್‌ಸ್ವೀಪ್ ಸಾಧಿಸಲು ನೆರವಾಗಿದ್ದಾರೆ. ಇದು ರಶೀದ್ ಅವರ ಅಪೂರ್ವ ಬೆಳವಣಿಗೆಗೆ ಸಾಕ್ಷಿಯಾಗಿದೆ’’ ಎಂದು ಭೋಗ್ಲೆ ಟ್ವೀಟ್ ಮಾಡಿದ್ದರು.

56ರ ಹರೆಯದ ಭೋಗ್ಲೆ ಅಭಿನಂದನೆಯ ಸಂದೇಶಕ್ಕೆ ಪ್ರತಿಕ್ರಿಯೆಯಾಗಿ 19ರ ಹರೆಯದ ರಶೀದ್‌ಖಾನ್, ‘‘ಸಹೋದರನಿಗೆ ಧನ್ಯವಾದ’’ ಎಂದು ಟ್ವೀಟ್ ಮಾಡಿದ್ದಾರೆ.

ರಶೀದ್ ಬಳಸಿರುವ ‘ಸಹೋದರ’ ಎಂಬ ಪದ ಭೋಗ್ಲೆ ಅಭಿಮಾನಿಗಳನ್ನು ಕೆರಳಿಸಿದೆ. ಅಫ್ಘಾನ್‌ನ ಯುವ ಸ್ಪಿನ್ನರ್‌ನನ್ನು ಟ್ವಿಟರ್‌ನಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ.

‘‘ಹರ್ಷ ಭೋಗ್ಲೆಗೆ 56 ವರ್ಷ, ನಿಮಗೆ 20 ವರ್ಷವೂ ಆಗಿಲ್ಲ. ಅತ್ಯಂತ ಮುಖ್ಯವಾಗಿ ಅವರು ವೀಕ್ಷಕವಿವರಣೆಯ ದಂತಕತೆ. ಮುಂದಿನ ಬಾರಿ ಪ್ರತಿಕ್ರಿಯೆ ನೀಡುವಾಗ ಎಚ್ಚರಿಕೆ ವಹಿಸಬೇಕು’’ಎಂದು ಓರ್ವ ಅಭಿಮಾನಿ ಟ್ವೀಟ್ ಮಾಡಿದ್ದಾರೆ.

‘‘ಭೋಗ್ಲೆ ನಿಮಗೆ ತಂದೆಗೆ ಸಮಾನ. ನಿಮಗೆ ಈಗ 19 ವರ್ಷ. ಅವರಿಗೆ ಗೌರವ ನೀಡುವುದನ್ನು ಮೊದಲು ಕಲಿತುಕೊಳ್ಳಿ’’ ಎಂದು ಮತ್ತೊಬ್ಬ ಅಭಿಮಾನಿ ಟ್ವೀಟ್ ಮಾಡಿದ್ದಾರೆ.

ರಶೀದ್ ಬಾಂಗ್ಲಾ ವಿರುದ್ಧದ ಟ್ವೆಂಟಿ-20 ಸರಣಿಯಲ್ಲಿ 4.45ರ ಇಕಾನಮಿ ರೇಟ್‌ನಲ್ಲಿ ಒಟ್ಟು 8 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News