ಗೌರಿ ಲಂಕೇಶ್, ಎಂ.ಎಂ. ಕಲುಬುರ್ಗಿ ಹತ್ಯೆಗೆ ಬಳಸಿದ್ದು ಒಂದೇ ಗನ್: ವಿಧಿ ವಿಜ್ಞಾನ ವರದಿ

Update: 2018-06-08 15:04 GMT

 ಹೊಸದಿಲ್ಲಿ, ಜೂ. 8: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹಾಗೂ ವಿಚಾರವಾದಿ ಎಂ.ಎಂ. ಕಲುಬುರ್ಗಿ ಅವರನ್ನು 7.65 ಎಂಎಂ ದೇಶೀ ನಿರ್ಮಿತ ಒಂದೇ ಗನ್‌ನಿಂದ ಹತ್ಯೆಗೈಯಲಾಗಿದೆ ಎಂದು ವಿಧಿವಿಜ್ಞಾನ ವರದಿ ಶುಕ್ರವಾರ ತಿಳಿಸಿದೆ. ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಕರ್ನಾಟಕ ಪೋಲೀಸರ ಸಿಟ್ ಆರೋಪ ಪಟ್ಟಿಯೊಂದಿಗೆ ಈ ವರದಿ ಲಗತ್ತಿಸಿ ಬೆಂಗಳೂರಿನಲ್ಲಿರುವ ಮೂರನೇ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟಿನ್ ಮ್ಯಾಜಿಸ್ಟ್ರೆಟ್‌ಗೆ ಸಲ್ಲಿಸಿದೆ.

 ಇದು 2015 ಹಾಗೂ 2017ರಲ್ಲಿ ಸಂಭವಿಸಿದ ಹತ್ಯೆಯ ನಡುವೆ ಸಂಬಂಧ ಇರುವ ಬಗ್ಗೆ ಸಿಟ್ ನೀಡಿದ ಮೊದಲ ಅಧಿಕೃತ ಸೂಚನೆ. ಈ ಎರಡೂ ಹತ್ಯೆಯನ್ನು ಒಂದೇ ಗುಂಪು ಮಾಡಿದೆ. ಕಲುಬುರ್ಗಿ (77) ಅವರನ್ನು ಧಾರವಾಡದಲ್ಲಿ 2015 ಆಗಸ್ಟ್ 30ರಂದು ಹಾಗೂ ಗೌರಿ ಲಂಕೇಶ್ (55) ಅವರನ್ನು ಬೆಂಗಳೂರಿನಲ್ಲಿ 2017 ಸೆಪ್ಟಂಬರ್ 5ರಂದು ಹತ್ಯೆಗೈಯಲಾಗಿತ್ತು ಎಂದು ವರದಿ ಹೇಳಿದೆ. ಗೌರಿ ಲಂಕೇಶ್ ಹತ್ಯೆ ಪ್ರಕರಣದ ಐವರು ಆರೋಪಿಗಳಲ್ಲಿ ಒಬ್ಬನಾಗಿರುವ ಕೆ.ಟಿ. ನವೀನ್ ಕುಮಾರ್ ವಿರುದ್ಧದ ಆರೋಪ ಪಟ್ಟಿಯೊಂದಿಗೆ ವಿಧಿವಿಜ್ಞಾನ ವರದಿ ಲಗತ್ತಿಸಲಾಗಿದೆ. ಎರಡೂ ಹತ್ಯೆಯಲ್ಲಿ ಒಂದೇ ಗನ್ ಅನ್ನು ಬಳಸಲಾಗಿದೆ ಎಂದು ವರದಿ ಹೇಳಿದೆ. ಗೌರಿ ಲಂಕೇಶ್ ಹತ್ಯೆ ನಡೆದ ಸ್ಥಳದಲ್ಲಿ ದೇಹದೊಳಗೆ ಹೊಕ್ಕಿದ ಮೂರು ಬುಲೆಟ್, ಇನ್ನೊಂದು ಬುಲೆಟ್ ಹಾಗೂ ನಾಲ್ಕು ಖಾಲಿ ಕಾಟ್ರಿಜ್ ಪತ್ತೆಯಾಗಿತ್ತು. ಇವುಗಳನ್ನು ಕಲುಬುರ್ಗಿ ಹತ್ಯೆಯ ಸ್ಥಳದಲ್ಲಿ ಪತ್ತೆಯಾಗಿದ್ದ ಎರಡು ಬುಲೆಟ್ ಹಾಗೂ ಕಾಟ್ರಿಜ್‌ಗಳಿಗೆ ಪೊಲೀಸರು ಹೋಲಿಸಿದ್ದರು. ಗೌರಿ ಲಂಕೇಶ್ ಹತ್ಯೆಗೆ ಸಂಬಂಧಿಸಿ ಕರ್ನಾಟಕ ಪೊಲೀಸ್‌ನ ಸಿಟ್ ಸನಾತನ ಸಂಸ್ಥಾ ಹಾಗೂ ಹಿಂದೂ ಯುವ ಸೇನೆಯ ಐವರನ್ನು ಬಂಧಿಸಿತ್ತು.

 ಹಿಂದೂ ಧರ್ಮ ಹಾಗೂ ದೇವರ ಬಗ್ಗೆ ನೀಡಿದ ಹೇಳಿಕೆ ಹಿನ್ನೆಲೆಯಲ್ಲಿ ಗೌರಿ ಲಂಕೇಶ್ ಅವರನ್ನು ಹತ್ಯೆಗೈಯಲಾಗಿದೆ. ಆರೋಪಿ ನವೀನ್ ಕುಮಾರ್ ಹಿಂದೂ ಯುವ ಸೇನಾ ಕಾರ್ಯಕರ್ತ. ಆತ ಕರ್ನಾಟಕ ಹಾಗೂ ಗೋವಾದಲ್ಲಿ ನಡೆದ ಸನಾತನ ಸಂಸ್ಥೆಯ ಹಲವು ಸಭೆಯಲ್ಲಿ ಪಾಲ್ಗೊಂಡಿದ್ದ ಎಂದು ಕರ್ನಾಟಕದ ಮದ್ದೂರಿನಿಂದ ಪ್ರಕರಣಕ್ಕೆ ಸಬಂಧಿಸಿ ಬಂಧಿತನಾಗಿದ್ದ ನವೀನ್ ಕುಮಾರ್ ವಿರುದ್ಧ ಸಲ್ಲಿಸಲಾಗಿದ್ದ ಆರೋಪ ಪಟ್ಟಿಯಲ್ಲಿ ಹೇಳಲಾಗಿದೆ. ಗೌರಿ ಲಂಕೇಶ್ ಅವರ ಹತ್ಯೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಆರೋಪದಲ್ಲಿ ಉಡುಪಿಯ ಸುಜಿತ್ ಕುಮಾರ್ ಪುಣೆಯ ಅಮೋಲ್ ಕಾಲೆ, ಪೊಂಡಾದ ಅಮಿತ್ ದೇಗ್‌ವೇಕಾರ್ ಹಾಗೂ ವಿಜಯಪುರದ ಮನೋಹರ್ ಇಡಾವೆ ಅವರನ್ನು ಕಳೆದ ವಾರ ಸಿಟ್ ಬಂಧಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News