ಮಾಲಿವುಡ್‌ಗೆ ನಿಪಾಹ್ ಭೀತಿ

Update: 2018-06-09 11:56 GMT

2018ರ ಮೊದಲಾರ್ಧದಲ್ಲಿ ಯಾವುದೇ ಮಲಯಾಳಂ ಚಿತ್ರ ಕೂಡಾ ಹೇಳಿಕೊಳ್ಳುವಂತಹ ಯಶಸ್ಸನ್ನೇನೂ ದಾಖಲಿಸಿಲ್ಲ. ಆದರೆ ರಮಝಾನ್ ರಜೆಯ ಸಮಯದಲ್ಲಿ ಭರ್ಜರಿ ಗಳಿಕೆಯ ನಿರೀಕ್ಷೆಯೊಂದಿಗೆ ಹಲವಾರು ಮಲಯಾಳಂ ಚಿತ್ರಗಳು ಬಿಡುಗಡೆಗೆ ಕಾದು ನಿಂತಿದ್ದವು. ಆದರೆ ಕಳೆದ ಕೆಲವು ವಾರಗಳಿಂದ ಕೇರಳದಲ್ಲಿ ಆತಂಕ ಮೂಡಿಸಿರುವ ನಿಪಾಹ್ ಸೋಂಕು ರೋಗವು, ಕೆಲವು ಬಿಗ್‌ಬಜೆಟ್ ಚಿತ್ರಗಳು ರಮಝಾನ್ ವೇಳೆ ಬಿಡುಗಡೆಗೊಳ್ಳುವುದನ್ನು ಮುಂದೂಡುವಂತೆ ಮಾಡಿದೆ.

ನಿಪಾಹ್ ಸೋಂಕು, ಮಲಯಾಳಂ ಚಿತ್ರರಂಗದ ಮೇಲೆ ಅತ್ಯಂತ ಕೆಟ್ಟ ಪರಿಣಾಮವನ್ನು ಬೀರಿದೆ. ನಿಪಾಹ್ ಕಾಣಿಸಿಕೊಂಡ ಬಳಿಕ ಮಲಬಾರ್‌ನ ಅನೇಕ ಪ್ರದೇಶಗಳ ಚಿತ್ರಮಂದಿರಗಳ ಗಳಿಕೆಯಲ್ಲಿ ಭಾರೀ ಕುಸಿತ ಕಂಡುಬಂದಿದೆ. ಈ ಮಾರಣಾಂತಿಕ ರೋಗ ಹರಡುವ ಭೀತಿಯಿಂದ ಜನ ಚಿತ್ರಮಂದಿರಗಳಿಗೆ ಕಾಲಿಡಲು ಹಿಂಜರಿಯುತ್ತಿದ್ದಾರೆ. ಮಲಯಾಳಂ ಚಿತ್ರಗಳ ಶೇ.50ರಷ್ಟು ಗಳಿಕೆ ಮಲಬಾರ್ ಪ್ರದೇಶದಲ್ಲೇ ಸಂಗ್ರಹವಾಗುತ್ತಿರುವುದರಿಂದ, ನಿಪಾಹ್ ಹಾವಳಿಯ ಈ ಸಂದರ್ಭದಲ್ಲಿ ರಿಸ್ಕ್ ತೆಗೆದು ಕೊಳ್ಳಲು ಬಿಗ್‌ಬಜೆಟ್ ಚಿತ್ರಗಳ ನಿರ್ಮಾಪಕರು ಬಯಸುತ್ತಿಲ್ಲ.

ರಮಝಾನ್ ವೇಳೆ ಬಿಡುಗಡೆಗೆ ಸಿದ್ಧವಾಗಿದ್ದ ಮೋಹನ್‌ಲಾಲ್ ಅಭಿನಯದ ಬಹುನಿರೀಕ್ಷಿತ ನೀರಾಲಿ ಕೂಡಾ ನಿಪಾಹ್ ಭೀತಿಯಿಂದಾಗಿ ಮುಂದೂಡಲ್ಪಟ್ಟಿದೆ. ಕಳೆದ ಅಕ್ಟೋಬರ್‌ನಲ್ಲಿ ಬಿಡುಗಡೆಯಾಗಿದ್ದ ಮೋಹನ್‌ಲಾಲ್ ಅಭಿನಯದ ವಿಲನ್ ಹೇಳಿಕೊಳ್ಳುವಂತಹ ಯಶಸ್ಸನ್ನು ಕಾಣಲಿಲ್ಲ. ಇದೀಗ ನೀರಾಲಿಯ ನಿರ್ಮಾಪಕರು ಬಾಕ್ಸ್ ಆಫೀಸ್‌ನಲ್ಲಿ ಸೇಫ್ ಆಗಲು ಬಯಸಿದ್ದು, ಸದ್ಯಕ್ಕೆ ಚಿತ್ರದ ಬಿಡುಗಡೆಯನ್ನು ಮುಂದೂಡಲು ನಿರ್ಧರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News