ಹಾರರ್ ಚಿತ್ರದಲ್ಲಿ ವಿಕಿ ಕೌಶಲ್

Update: 2018-06-09 11:57 GMT

ರಾಝಿ ಚಿತ್ರದ ಭರ್ಜರಿ ಯಶಸ್ಸು ಚಿತ್ರದ ನಾಯಕ ನಟ ವಿಕಿ ಕೌಶಲ್‌ಗೆ ಬಾಲಿವುಡ್‌ನಲ್ಲಿ ಅದೃಷ್ಟದ ಹೆಬ್ಬಾಗಿಲನ್ನು ತೆರೆದಿಟ್ಟಿದೆ. ನೆಟ್‌ಫ್ಲಿಕ್ಸ್‌ನಲಸ್ಟ್ ಸ್ಟೋರಿಸ್ ಮೂಲಕ ಬೆಳ್ಳಿತೆರೆ ಪ್ರವೇಶಿಸಿದ್ದ ವಿಕಿ ಕೌಶಲ್, ಆನಂತರ ಮೇಘನಾ ಗುಲ್ಜಾರ್ ನಿರ್ದೇಶನದ ರಾಝಿಯಲ್ಲಿ ಆಲಿಯಾಭಟ್ ಎದುರು ನಟಿಸಿದ್ದರು. ಇದೀಗ ರಾಝಿಯನ್ನು ನಿರ್ಮಿಸಿದ ಧರ್ಮಾ ಪ್ರೊಡಕ್ಷನ್ಸ್ ತನ್ನ ಹೊಸ ಚಿತ್ರಕ್ಕೂ ವಿಕಿ ಕೌಶಲ್‌ರನ್ನೇ ಆಯ್ಕೆ ಮಾಡಿದೆ.

ರಾಝಿಯಲ್ಲಿ ವಿಕಿ ಕೌಶಲ್‌ರ ಅಭಿನಯವನ್ನು ನಿರ್ಮಾಪಕ ಕರಣ್‌ಜೋಹರ್ ತುಂಬಾ ಮೆಚ್ಚಿಕೊಂಡಿದ್ದಾರೆ. ಹೀಗಾಗಿ ಅವರಿಗೆ ತನ್ನ ನೂತನ ಚಿತ್ರದಲ್ಲಿ ನಾಯಕ ಪಾತ್ರದ ಕೊಡುಗೆ ನೀಡಿದ್ದಾರೆ. ಚಿತ್ರದ ಸ್ಕ್ರಿಪ್ಟ್ ವಿಕಿಗೆ ತುಂಬಾ ಇಷ್ಟವಾಗಿದ್ದು, ಮರುಮಾತಿಲ್ಲದೆ ಆತ ನಟಿಸಲು ಹಸಿರುನಿಶಾನೆ ತೋರಿಸಿದ್ದಾರೆ. ಅಂದಹಾಗೆ ಇದೊಂದು ಅಪ್ಪಟ ಹಾರರ್ ಚಿತ್ರವಂತೆ. ಬದರಿನಾಥ್‌ಕಿ ದುಲ್ಹನಿಯಾ ಚಿತ್ರದ ಮೂಲಕ ಬಾಲಿವುಡ್‌ನಲ್ಲಿ ಗಮನಸೆಳೆದ ಶಶಾಂಕ್ ಖೇತಾನ್ ಅವರ ಸಹಾಯಕ ನಿರ್ದೇಶಕರಾಗಿದ್ದ ಭಾನುಪ್ರತಾಪ್ ಸಿಂಗ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ. 2015ರಲ್ಲಿ ತೆರೆಕಂಡ ವಿಕಿ ಕೌಶಲ್ ಅಭಿನಯದ ಝುಬಾನ್‌ಗೂ ಭಾನುಪ್ರತಾಪ್ ಸಿಂಗ್ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಸದ್ಯಕ್ಕೆ ವಿಕಿ, 2009ರ ಸೆಪ್ಟ್ಟಂಬರ್‌ನಲ್ಲಿ ಜಮ್ಮುಕಾಶ್ಮೀರದ ಉರಿಯಲ್ಲಿ ನಡೆದ ದಾಳಿ ಘಟನೆಯನ್ನು ಆಧರಿಸಿದ ರೋನಿ ಸ್ಕ್ರೂವಾಲಾ ನಿರ್ದೇಶನದ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದಲ್ಲಿ ಅವರು ವಿಶೇಷ ಪಡೆಗಳ ಪ್ಯಾರಾಕಮಾಂಡೋ ಪಾತ್ರದಲ್ಲಿ ನಟಿಸಲಿದ್ದಾರೆ. ಚಿತ್ರದ ಸಾಹಸದೃಶ್ಯಗಳಿಗಾಗಿ ತರಬೇತಿ ಪಡೆಯಲು ವಿಕಿ ಮುಂದಿನ ವಾರ ಸರ್ಬಿಯಾಗೆ ಪ್ರಯಾಣಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News